ಬಲಿಷ್ಠ ಪತ್ರಕರ್ತನಿಂದ ಹೆಚ್ಚು ವಿಷಯ ಗ್ರಹಿಕೆ: ಪ್ರೊ.ಎಂ.ಎಸ್.ಸಪ್ನ

KannadaprabhaNewsNetwork | Published : May 8, 2024 1:02 AM

ಸಾರಾಂಶ

ಹೆಚ್ಚು ವಿಷಯ ಗ್ರಹಿಸುವ ಗುಣ ಬೆಳೆಸಿಕೊಂಡಿರುತ್ತಾರೆಯೋ ಅವರು ಜನರ ಮಧ್ಯೆ ನಿಂತು ಮಾತನಾಡುವ ಶಕ್ತಿ ಬೆಳೆಸಿಕೊಂಡು ಬಲಿಷ್ಠ ಪತ್ರಕರ್ತರಾಗುತ್ತಾರೆ ಎಂದು ಪ್ರೊ.ಎಂ.ಎಸ್.ಸಪ್ನ ಹೇಳಿದರು. ಹಾಸನದಲ್ಲಿ ಹಮ್ಮಿಕೊಂಡ ಒಂದು ದಿನದ ಶೈಕ್ಷಣಿಕ ವಿಶೇಷ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಶೈಕ್ಷಣಿಕ ವಿಶೇಷ ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ ಹಾಸನ

ಯಾರು ಹೆಚ್ಚು ವಿಷಯ ಗ್ರಹಿಸುವ ಗುಣ ಬೆಳೆಸಿಕೊಂಡಿರುತ್ತಾರೆಯೋ ಅವರು ಜನರ ಮಧ್ಯೆ ನಿಂತು ಮಾತನಾಡುವ ಶಕ್ತಿ ಬೆಳೆಸಿಕೊಂಡು ಬಲಿಷ್ಠ ಪತ್ರಕರ್ತರಾಗುತ್ತಾರೆ ಎಂದು ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನದ ಮುಖ್ಯಸ್ಥರು ಹಾಗೂ ಮೈಸೂರು ಮಾನಸ ಗಂಗೋತ್ರಿ ಇಎಂಆರ್‌ಸಿ ನಿರ್ದೇಶಕರಾದ ಪ್ರೊ.ಎಂ.ಎಸ್.ಸಪ್ನ ಕಿವಿಮಾತು ಹೇಳಿದರು.

ನಗರದ ಆರ್.ಸಿ. ರಸ್ತೆ ಬಳಿ ಇರುವ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ, ಪತ್ರಿಕೋಧ್ಯಮ ವಿಭಾಗ ಜಂಟಿಯಾಗಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ಲೋಕದ ಉದ್ಯೋಗಕ್ಕೆ ಪೂರ್ವಭಾವಿ ತಯಾರಿಗಳು ಹಾಗೂ ಸರ್ಕಾರಿ ಉದ್ಯೋಗಕ್ಕೆ ಪೂರ್ವಭಾವಿ ಸಿದ್ಧತೆ ಕುರಿತು ಒಂದು ದಿನದ ಶೈಕ್ಷಣಿಕ ವಿಶೇಷ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿಗಳು ಪತ್ರಿಕೋಧ್ಯಮದ ಇತಿಹಾಸ ತಿಳಿಯುವುದು ಬಹಳ ಮುಖ್ಯ. ಪ್ರಸ್ತುತದಲ್ಲಿ ಪ್ರತಿ ವಿಚಾರದಲ್ಲೂ ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು. ಪತ್ರಿಕೋಧ್ಯಮವನ್ನು ಹೇಗೆ ಉದ್ಯಮ ಮಾಡಿಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ನೀವು ಶಿಕ್ಷಣ ಪಡೆಯುವ ಪತ್ರಿಕೋಧ್ಯಮದಲ್ಲಿ ಪಡೆಯುವ ಅಂಕಗಳಿಂದ, ಮೆಡಲ್‌ಗಳಿಂದ ಕೆಲಸ ಪಡೆಯಬಹುದು ಎಂದುಕೊಳ್ಳಬೇಡಿ. ಇದು ಪಾಠ ಮಾತ್ರ. ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಬರಬೇಕಾಗಿರುವುದು ಉತ್ತಮ ಬರವಣಿಗೆಗಳು. ಕನ್ನಡ, ಇಂಗ್ಲೀಷ್ ಭಾಷೆ ಬಗ್ಗೆಯೂ ಜ್ಞಾನ ಬೇಕು, ಚೆನ್ನಾಗಿ ಬರವಣಿಗೆ ಬರಬೇಕಾದರೆ ಆಸಕ್ತಿಯಿಂದ ಓದಬೇಕು’ ಎಂದು ಹೇಳಿದರು.

ಪ್ರಸ್ತುತದಲ್ಲಿ ಮಕ್ಕಳು ಓದುವುದನ್ನು ಕಡಿಮೆ ಮಾಡಿಬಿಟ್ಟಿದ್ದಾರೆ. ಹೆಚ್ಚಾಗಿ ಮೊಬೈಲ್ ಹಿಡಿದು ಇನ್‌ಸ್ಟಾಗ್ರಾಂ, ವಾಟ್ಸಾಪ್ ಇತರೆಡೆ ಗಮನ ಹರಿಸಿದ್ದಾರೆ. ಹೆಚ್ಚು ಓದಿದಷ್ಟು ಜ್ಞಾನ ಹೆಚ್ಚುತ್ತದೆ. ವಿಷಯವನ್ನು ಯಾರು ಹೆಚ್ಚು ಗ್ರಹಿಸುತ್ತಾರೆ ಅವರು ಹೆಚ್ಚು ಬಲಿಷ್ಠರಾಗುತ್ತಾರೆ. ವಿಷಯಗಳು ತಲೆಯಲ್ಲಿ ಇದ್ದಾಗ ಮಾತ್ರ ಜನರ ಮಧ್ಯೆ ಮಾತನಾಡುವುದಕ್ಕೆ ಸಾಧ್ಯ ಎಂದು ಸಲಹೆ ನೀಡಿದರು.

ಸರ್ಕಾರಿ ಕಲಾ, ವಾಣಿಜ್ಯ ಕಾಲೇಜು ಮತ್ತು ಸ್ನಾತಕೋತ್ತರ ಕಾಲೇಜು ಪ್ರಾಂಶುಪಾಲ ಡಾ.ಎಂ.ಬಿ. ಇರ್ಷಾದ್ ಮಾತನಾಡಿ, ‘೧೯ನೇ ಶತಮಾನದಲ್ಲಿ ಸಮಾಜ ಸುಧಾರಣೆ ಆಗಿದ್ದು, ಇದಕ್ಕೆ ಕಾರಣವಾದುದು ಪತ್ರಿಕೋಧ್ಯಮ. ಈ ಪತ್ರಿಕೋಧ್ಯಮವೇ ಈ ಸಮಾಜದಲ್ಲಿ ಇಲ್ಲದೆ ಇದ್ದರೆ ಸಮಾಜದಲ್ಲಿ ಎಂತಹ ಘೋರ ಆಘಾತವಾದ ವಿಚಿತ್ರಗಳು ನಡೆದು ಒಂದು ಕ್ರಾಂತಿಗೆ ಕಾರಣವಾಗುತಿತ್ತು. ಪ್ರಪಂಚದಲ್ಲಿ ಅನ್ವಯವಾಗುವಂತೆ ಖಡ್ಗಕ್ಕಿಂತ ಲೇಖನಿ ಹರಿತ. ರಾಜ್ಯಗಳ ಗೆಲ್ಲಲು ಇಂದು ಖಡ್ಗ ಬೇಕಾಗಿಲ್ಲ. ಒಂದು ಸಮಾಜದ ಪರಿವರ್ತನೆಗೆ ಒಂದು ಲೇಖನಿ ಸಾಕು. ರಾಷ್ಟ್ರಗಳನ್ನು ನಿಲುವು, ಅಧ್ಯಕ್ಷರ, ರಾಜಕೀಯ ಚಿತ್ರಣಗಳನ್ನೆ ಬದಲಾಯಿಸಿರುವಂತಹ ಕೆಲಸ ಈ ಪತ್ರಿಕೋಧ್ಯಮದಲ್ಲಿ ಆಗಿದೆ ಎಂದು ಹೇಳಿದರು.

ಪತ್ರಿಕೋಧ್ಯಮ ಇಲ್ಲದೆ ಈ ದೇಶದ ಸ್ವಾತಂತ್ರ್ಯ ಚಳುವಳಿ ಮುನ್ನಡೆಸಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಮೂಲೆ ಮೂಲೆಗೆ ಸಂದೇಶ ರವಾನೆ ಮಾಡಿರುವುದು ಈ ಪತ್ರಿಗಳು ಎಂದರು.

ಪತ್ರಿಕೋಧ್ಯಮ ವಿಭಾಗದ ಉಪನ್ಯಾಸಕರಾದ ಎ.ವಿ.ರಶ್ಮಿ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯಕ್ತ ಎಂ.ಬಿ.ಚನ್ನಕೇಶವ, ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ, ಪರೀಕ್ಷಾ ನಿಯಂತ್ರಕ ಕೆ.ಡಿ.ಮುರುಳೀಧರ್, ಉಪನ್ಯಾಸಕ ಎಚ್.ಸಿ.ಭವ್ಯ, ಕೆ.ಎ.ಶೃತಿ ಇದ್ದರು.

ಹಾಸನದಲ್ಲಿ ಒಂದು ದಿನದ ಶೈಕ್ಷಣಿಕ ವಿಶೇಷ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮೈಸೂರು ಮಾನಸ ಗಂಗೋತ್ರಿಯ ಪ್ರೊ.ಎಂ.ಎಸ್. ಸಪ್ನ ಮಾತನಾಡಿದರು.

Share this article