ಕೊಟ್ಟೂರು: ಲಕ್ಷಾಂತರ ಭಕ್ತರ ಆರಾಧ್ಯದೈವ ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನ ಹಿರೇಮಠದಲ್ಲಿ ಮತ್ತೆ ಮೂರು ಕಾಣಿಕೆ ಹುಂಡಿಗಳನ್ನು ಇರಿಸಲಾಗಿದೆ.
ದೇವಸ್ಥಾನದಲ್ಲಿ ಈಗಾಗಲೇ ಆರು ಹುಂಡಿಗಳಿದ್ದು, ಮತ್ತಷ್ಟು ಹುಂಡಿ ಸ್ಥಾಪನೆ ಮಾಡಿರುವ ಕುರಿತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರಿಗೆ ಸಮರ್ಪಕ ದೇವರ ದರ್ಶನ, ಇತರ ಸೌಲಭ್ಯಗಳನ್ನು ಕಲ್ಪಿಸುವುದಕ್ಕಿಂತ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹಿಸಬೇಕೆಂಬ ಉದ್ದೇಶ ಹೊಂದಿರುವಂತಿದೆ ಎಂದು ಹೇಳಿದ್ದಾರೆ.ಮೊದಲಿರುವ ಹುಂಡಿಗಳು ಭಕ್ತರಿಗೆ ಕೈಗೆಟುಕುವಂತಿವೆ. ಆದಾಗ್ಯೂ ಭಕ್ತರ ಮುಂದೆಯೇ ಹುಂಡಿ ಇರುಬೇಕು ಎಂಬ ಕಾರಣ ನೀಡಿ, ಧಾರ್ಮಿಕ ಇಲಾಖೆ ಅಧಿಕಾರಿಗಳು ೮ ಅಡಿ ಉದ್ದ, ೩ ಅಡಿ ಅಗಲದ ಮೂರು ದೊಡ್ಡ ಹುಂಡಿ ಪೆಟ್ಟಿಗೆಗಳನ್ನು ದೇವಸ್ಥಾನದ ಮಧ್ಯದಲ್ಲಿ, ಪುರುಷರು, ಮಹಿಳೆಯರು ನಿಲ್ಲುವ ಸ್ಥಳದಲ್ಲಿ ಇರಿಸಿದ್ದಾರೆ. ಇರುವ ಅಲ್ಪ ಜಾಗವನ್ನು ಆಕ್ರಮಿಸಿ ಭಕ್ತರಿಗೆ ನಿಲ್ಲಲೂ ಆಗದಂತೆ ಮಾಡಿದ್ದಾರೆ. ಹೆಜ್ಜೆ ಹೆಜ್ಜೆಗೂ ಹುಂಡಿಗಳೇ ಕಾಣುತ್ತಿವೆ. ಮೊದಲೇ ಚಿಕ್ಕ ಸ್ಥಳಾವಕಾಶವಿರುವ ದೇವಸ್ಥಾನದಲ್ಲಿ ಭಕ್ತರು ಹೋಗಿ ಬರಲು, ನಿಲ್ಲಲು, ಬಾಗಿ ನಮಸ್ಕರಿಸಲು ಅವಕಾಶ ಇಲ್ಲದಂತೆ ಆಗಿದೆ ಎನ್ನುವುದು ಭಕ್ತರ ಆಕ್ರೋಶ.
ದೇವಸ್ಥಾನದ ಅಧಿಕಾರಿಗಳ ಕ್ರಮ ಕುರಿತು ಮಾಧ್ಯಮದವರು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಗಮನಕ್ಕೆ ತಂದಾಗ, ಸದ್ಯ ಇರುವ ಹುಂಡಿಗಳ ಹೊರತುಪಡಿಸಿ ಹೊಸದಾಗಿ ಹುಂಡಿ ಇರಿಸಲು ನಾವು ಅನುಮತಿ ನೀಡಿಲ್ಲ. ಭಕ್ತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ವರ್ತಿಸಬೇಕು. ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿ ಹೊಸ ಹುಂಡಿಗಳನ್ನು ತೆರವು ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.ಹಾಲಿ ಇರುವ ಹುಂಡಿಗಳ ಜತೆಗೆ ಭಕ್ತರಿಗೆ ಅನುಕೂಲಕ್ಕೆ ಹೊಸ ಹುಂಡಿಗಳನ್ನು ತಾಪಂ ಇಒ ಇರಿಸಿದ್ದಾರೆ. ಇದರಿಂದ ಯಾರಿಗೂ ತೊಂದರೆಯಿಲ್ಲ. ಭಕ್ತರಿಗೆ ತೊಂದರೆಯಾಗುತ್ತದೆ ಎಂದು ಮನವಿ ಬಂದರೆ ತೆರವು ಮಾಡುತ್ತೇವೆ. ಮೂರು ಹುಂಡಿಗಳನ್ನು ಮಾಡಿಸಲು ಎಷ್ಟು ಹಣ ಖರ್ಚಾಗಿದೆ ಎಂಬ ಮಾಹಿತಿ ಇಲ್ಲ ಎನ್ನುತ್ತಾರೆ ಧಾರ್ಮಿಕ ಇಲಾಖೆಯ ಎಸಿ ಗಂಗಾಧರಪ್ಪ.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ವಾಮಿ ದರ್ಶನಕ್ಕೆ, ಇತರ ಸೌಲಭ್ಯಕ್ಕೆ ಆದ್ಯತೆ ನೀಡಬೇಕಾದ ಅಧಿಕಾರಿಗಳು ದೇವಸ್ಥಾನದ ತುಂಬೆಲ್ಲ ಹುಂಡಿಗಳನ್ನು ಇರಿಸಿ, ವಾಣಿಜ್ಯೀಕರಣ ಮಾಡ ಹೊರಟಿರುವುದು ಖಂಡನೀಯ ಎನ್ನುತ್ತಾರೆ ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ.