ಆಯ್ಕೆಗೊಂಡರೇ ನೀರಾವರಿಗೆ ಹೆಚ್ಚಿನ ಒತ್ತು

KannadaprabhaNewsNetwork |  
Published : May 04, 2024, 12:35 AM IST
ವಿಷನ್ ವಿಜಯಪುರ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ | Kannada Prabha

ಸಾರಾಂಶ

ಲೋಕಸಭೆಗೆ ಏಕೆ ಹೋಗಬೇಕು? ಹೋದಮೇಲೆ ಏನು ಮಾಡಬೇಕು? ಚುನಾವಣೆಯಲ್ಲಿ ಆಯ್ಕೆ ಆದಮೇಲೆ ಏನು ಮಾಡಬೇಕು ಎಂಬ ದೃಷ್ಠಿಕೋನ ಹಾಗೂ ಸ್ಪಷ್ಟ ಗುರಿ ಇಟ್ಟುಕೊಂಡಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಲೋಕಸಭೆಗೆ ಏಕೆ ಹೋಗಬೇಕು? ಹೋದಮೇಲೆ ಏನು ಮಾಡಬೇಕು? ಚುನಾವಣೆಯಲ್ಲಿ ಆಯ್ಕೆ ಆದಮೇಲೆ ಏನು ಮಾಡಬೇಕು ಎಂಬ ದೃಷ್ಠಿಕೋನ ಹಾಗೂ ಸ್ಪಷ್ಟ ಗುರಿ ಇಟ್ಟುಕೊಂಡಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಆಶೀರ್ವಾದರಿಂದ ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೆ ನನ್ನ ಸದಸ್ಯತ್ವದ ಅವಧಿಯಲ್ಲಿ ಈ ಜಿಲ್ಲೆಯ ಪ್ರಮುಖ ವಿಷಯಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸತತ ಪ್ರಯತ್ನ ಮಾಡಿ, ಜಾರಿಗೆ ತರುವಲ್ಲಿ ಶ್ರಮಿಸುತ್ತೇನೆ. ಇದಕ್ಕಾಗಿ ನಾನು ಹತ್ತು ವಿಷನ್‌ಗಳನ್ನು ಇಟ್ಟುಕೊಂಡಿದ್ದೇನೆ ಎಂದರು. ಇದೇ ವೇಳೆ ವಿಷನ್ ವಿಜಯಪುರ ಎಂಬ 10 ಅಂಶಗಳಿಗೆ ಒತ್ತು ಕೊಡಲಾಗಿದ್ದು, ಅವುಗಳ ಪ್ರಣಾಳಿಕೆ ಬಿಡುಗಡೆ ಮಾಡಿದರು.

ನೀರಾವರಿ: ದಶಕಗಳಿಂದ ನೆನಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ವಿಜಯಪುರ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಲು ಅಗತ್ಯವಿರುವ ಕೇಂದ್ರ ಸರ್ಕಾರದಲ್ಲಿ 2010 ರಿಂದ ನೆನಗುದಿಗೆ ಬಿದ್ದಿರುವ ಬ್ರಿಜೇಶಕುಮಾರ ತೀರ್ಪು ಗೆಜೆಟ್ ನೋಟಿಫಿಕೇಶನಗೊಳಿಸಿ, ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಪೂರ್ಣಗೊಳಿಸುವುದು.

ಕೃಷ್ಣಾ ನ್ಯಾಯಾದೀಕರಣ (ಬ್ರಿಜೇಶಕುಮಾರ ಆಯೋಗ) ತೀರ್ಪು 2010 ರಲ್ಲಿ ನೀಡಿದ್ದರೂ, 15 ವರ್ಷಗಳು ಕಳೆದರೂ ಇನ್ನೂ ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ. ಕೇಂದ್ರ ಸರ್ಕಾರದಿಂದ ಅಂತಿಮ ಅಧಿಸೂಚನೆ ಹೊರಡಿಸಿದರೆ, ಆಲಮಟ್ಟಿ ಅಣೆಕಟ್ಟು ಎತ್ತರಿಸಿ, 130 ಟಿ.ಎಂ.ಸಿ ನೀರು ಬಳಸಿ, ಯುಕೆಪಿ-3 ನೇ ಹಂತದ ಮುಳವಾಡ-ಚಿಮ್ಮಲಗಿ, ಇಂಡಿ, ಪೀರಾಪುರ ಬೂದಿಹಾಳ ಸೇರಿದಂತೆ ಎಲ್ಲ ಯೋಜನೆಗಳನ್ನು ನೀರು ಒದಗಿಸಿ 10 ಲಕ್ಷ ಎಕರೆ ಭೂಮಿಯನ್ನು ವಿಜಯಪುರ ಜಿಲ್ಲೆಯಲ್ಲಿ ನೀರಾವರಿಗೆ ಒಳಪಡಿಸಿ, ಕಾಲುವೆಗಳಿಗೆ ನೀರು ಹರಿಸಿ, ಕೆರೆ, ಹಳ್ಳ-ಕೊಳ್ಳಗಳನ್ನು ತುಂಬಿಸಿ, ಜಿಲ್ಲೆಯನ್ನು ಸಮೃದ್ಧಗೊಳಿಸುವುದು.

ರೈಲ್ವೆ ಸಂಪರ್ಕ: ವಿಜಯಪುರದಿಂದ ರಾಜಧಾನಿ ಬೆಂಗಳೂರು, ವಾಣಿಜ್ಯ ನಗರ ಮುಂಬೈ ಹಾಗೂ ಪ್ರಮುಖ ನಗರ ಹೈದ್ರಾಬಾದಗಳಿಗೆ ಸಂಚರಿಸಲು ರಾತ್ರಿ ಹೊರಟು ಬೆಳಿಗ್ಗೆ ತಲುಪುವಂತೆ ರೈಲ್ವೆ ಸಂಚಾರ ಒದಗಿಸುವುದು.

ವಿಮಾನ: ವಿಜಯಪುರದ ವಿಮಾನ ನಿಲ್ದಾಣ ಆರಂಭಗೊಂಡ ನಂತರ ರಾಷ್ಟ್ರದ ರಾಜಧಾನಿ ದೆಹಲಿ, ರಾಜ್ಯದ ರಾಜಧಾನಿ ಬೆಂಗಳೂರಿಗೆ ಸಂಪರ್ಕಿಸುವಂತೆ ವಿಮಾನಯಾನ ವ್ಯವಸ್ಥೆ ಒದಗಿಸುವುದು.

ಹೆದ್ದಾರಿಗಳು: ವಿಜಯಪುರ ನಗರವನ್ನು ಸಂಪರ್ಕಿಸುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಿಗೆ ಎಲ್ಲ ಕಡೆ ರೈಲ್ವೆ ಮೆಲ್ಸೇತುವೆ ಹಾಗೂ ರಸ್ತೆ ಮೆಲ್ಸೇತುವೆ ನಿರ್ಮಿಸುವುದು ಮತ್ತು ಹೆದ್ದಾರಿಗಳಿಗೆ ಹೆಚ್ಚಿನ ಅನುದಾನ ಒದಗಿಸಿ, ದುರಸ್ತಿಗೊಳಿಸಿ, ಸುಧಾರಣೆಗೊಳಿಸುವುದು.

ಕೃಷಿ ತೋಟಗಾರಿಕೆ: ಕೇಂದ್ರ ಕೃಷಿ ಇಲಾಖೆಯಿಂದ ತೋಟಗಾರಿಕಾ ಬೆಳೆಗಾರರಿಗೆ ನೆರವಾಗಲು ರಾಷ್ಟ್ರೀಯ ದ್ರಾಕ್ಷಿ ಸಂಶೋಧನ ಕೇಂದ್ರ ಹಾಗೂ ತೋಟಗಾರಿಕಾ ವಿವಿಧ ತಳಿಗಳನ್ನು ಅಭಿವೃದ್ಧಿ ಪಡಿಸುವ ಫಾರ್ಮ್ ಆರಂಭಿಸುವುದು.

ಪ್ರವಾಸೋದ್ಯಮ: ಐತಿಹಾಸಿಕ ವಿಜಯಪುರದಲ್ಲಿ ದೆಹಲಿ ಹೊರತು ಪಡಿಸಿದರೆ ಅತೀ ಹೆಚ್ಚು ಸ್ಮಾರಗಳ ನಗರವಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಆದರೆ, ಜಿಲ್ಲೆಗೆ ಆರ್ಥಿಕ ಚೈತನ್ಯ ಒದಗುತ್ತದೆ. ಆದ್ದರಿಂದ ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ವಿಜಯಪುರ ನಗರವನ್ನು ಸೇರ್ಪಡೆಗೊಳಿಸುವುದು.

ಕ್ರೀಡೆ: ದೇಶದಲ್ಲಿಯೇ ಪಂಜಾಬ್ ಹೊರತು ಪಡಿಸಿದರೆ, ಸೈಕ್ಲಿಂಗ್ ಕ್ರೀಡೆಗೆ ವಿಜಯಪುರ ಜಿಲ್ಲೆ ಹೆಸರುವಾಸಿಯಾಗಿದ್ದು, ಕೆಂದ್ರ ಸರ್ಕಾರದ ಕ್ರೀಡಾ ಪ್ರಾಧಿಕಾರ ನೆರವಿನಿಂದ ಅಂತಾರ್‍ರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಿಸುವುದು.

ಸೌಲಭ್ಯ: ಹೈದ್ರಾಬಾದ್‌ ಕರ್ನಾಟಕದ ಮಾದರಿಯಲ್ಲಿ ವಿಜಯಪುರ ಜಿಲ್ಲೆಯನ್ನು 371ಜೆ ಅಡಿಯಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಣ: ಐತಿಹಾಸಿಕ ವಿಜಯಪುರ ನಗರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ, ಐಐಟಿ, ಐಐಎಂ ಮತ್ತಿತರ ಕೇಂದ್ರೀಯ ಆರಂಭಿಸಲು ಪ್ರಯತ್ನ ಮಾಡುತ್ತೇನೆ ಎಂದರು.

ಆದ್ದರಿಂದ ನನಗೆ ಮತ ನೀಡಿ, ಆಯ್ಕೆ ಮಾಡಿದರೆ ಪ್ರಾಮಾಣಿಕವಾಗಿ ಬೇಡಿಕೆ ಈಡೇರಿಕೆಗೆ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಬಿರಾದಾರ, ಚಂದ್ರಕಾಂತ ಶೆಟ್ಟಿ, ಸಂಗಮೇಶ ಬಬಲೇಶ್ವರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರವಾಡ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ
ಜನರ ಆರ್ಥಿಕ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆ ಸಹಾಯಕ: ರವೀಂದ್ರ ಕಲಬುರ್ಗಿ