ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ: ಪಿ.ಎಂ ನರೇಂದ್ರಸ್ವಾಮಿ

KannadaprabhaNewsNetwork | Published : Feb 18, 2025 12:30 AM

ಸಾರಾಂಶ

ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮೆಲ್ಲರ ಚರ್ಚೆಯ ಆಧಾರಿತವಾಗಿ ಹೊಸ ಕಾನೂನು ತಂದು 94 ಸಿ ಅಡಿಯಲ್ಲಿ ನಿರ್ಗತಿಕರಿಗೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ದಾಖಲಾತಿ ಪರಿಶೀಲನೆ ಆಧಾರದ ಮೇಲೆ ತಾಲೂಕಿನ ಮಲ್ಲಿಕ್ಯಾತನಹಳ್ಳಿಯ 26 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ವಿತರಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಶ್ರಮಿಸಲಾಗುತ್ತಿದೆ ಎಂದು ಶಾಸಕ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಸಿದ್ಧಾರ್ಥ ನಗರ ವಾರ್ಡ್ ನಂ. 11ರ ಚರ್ಚ್ ಮುಂಭಾಗ ಪಡಿತರ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬೀದಿಗಳಿಗೆ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ತಾಲೂಕಿನಾದ್ಯಂತ ಕೋಟ್ಯಾಂತರ ರು. ಅನುದಾನದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ಕಂದಾಯ, ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿ ಎಲ್ಲಾ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸುಧಾರಣೆ ತರಲಾಗಿದೆ. ಸರ್ಕಾರದಿಂದ ವಿಶೇಷ ಅನುದಾನ ತಂದು ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುವ ಹಂಬಲ ಹೊಂದಿದ್ದೇನೆ ಎಂದು ಹೇಳಿದರು.

ತಾಲೂಕಿನ ಅಂತರವಳ್ಳಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 65 ಲಕ್ಷ ರು. ವೆಚ್ಚದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಶಂಕುಸ್ಥಾಪನೆ, 10 ಲಕ್ಷ ರು. ವೆಚ್ಚದ ಮಿಕ್ಕೆರೆ, ಹುಲ್ಲೇಗಾಲ, ನೇಣನೂರು, ಚಿಕ್ಕಮೂಲಗೂಡು, 20 ಲಕ್ಷ ರು. ವೆಚ್ಚದಲ್ಲಿ ಬೆಂಡರವಾಡಿ ಪರಿಶಿಷ್ಟ ಜಾತಿ ಸಮುದಾಯದ ರಸ್ತೆ ಅಭಿವೃದ್ಧಿಗೆ ಹಾಗೂ ಕಿರುಗಾವಲು ಗ್ರಾಮದಲ್ಲಿ 39 ಲಕ್ಷ ರು. ವೆಚ್ಚ, 14ನೇ ವಿ.ಸಿ ನಾಲೆಯಿಂದ ಮರಿಗೌಡರ ಸ.ನಂ 242ರ ಜಮೀನಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮೆಲ್ಲರ ಚರ್ಚೆಯ ಆಧಾರಿತವಾಗಿ ಹೊಸ ಕಾನೂನು ತಂದು 94 ಸಿ ಅಡಿಯಲ್ಲಿ ನಿರ್ಗತಿಕರಿಗೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ದಾಖಲಾತಿ ಪರಿಶೀಲನೆ ಆಧಾರದ ಮೇಲೆ ತಾಲೂಕಿನ ಮಲ್ಲಿಕ್ಯಾತನಹಳ್ಳಿಯ 26 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ವಿತರಿಸಲಾಗಿದೆ ಎಂದರು.

ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಚೌಡೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಪುರಸಭೆ ಸದಸ್ಯ ಸಂತೋಷ, ಮುಖಂಡರಾದ ಅಂಬರೀಷ್, ಬಂಕ್‌ ಮಹದೇವು, ಕುಂದೂರು ಪ್ರಕಾಶ್, ವೇದಮೂರ್ತಿ, ಶಶಿಧರ್, ದ್ಯಾಪೇಗೌಡ, ಲಿಂಗರಾಜು, ಕಿರಣ್‌ಶಂಕರ್ ಸೇರಿ ಇತರರು ಇದ್ದರು.

Share this article