ಖಾಸಗಿ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ

KannadaprabhaNewsNetwork | Published : Mar 25, 2024 12:55 AM

ಸಾರಾಂಶ

ಸರ್ಕಾರಿ ಕಾಲೇಜಲ್ಲಿ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸರ್ಕಾರಿ ಕ್ಷೇತ್ರಗಳಿಗಿಂತ ಖಾಸಗಿ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ವಿಫುಲವಾಗಿರುವುದರಿಂದ ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯಗಳ ತರಬೇತಿ ನೀಡಲಾಗುತ್ತಿದೆ ಎಂದು ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ.ಎಸ್. ಬಿ.ಅಪ್ಪಾಜಿಗೌಡ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ವಾದ್ವಾನಿ ಪೌಂಡೇಶನ್ ಅವರ ಸಹಯೋಗರೊಂದಿಗೆ ಹಮ್ಮಿಕೊಂಡಿದ್ದ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮ ಹಾಗೂ ಬೋಧಕರಿಗೆ 2 ದಿನದ ಕಾರ್ಯಗಾರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪದವಿಯನ್ನು ಮುಗಿಸಿದ ಮೇಲೆ ಮುಂದೇನು ಎಂಬ ಪ್ರಶ್ನೆ ಅವರನ್ನು ಕಾಡುತ್ತದೆ. ಯಾವ ಉದ್ಯೋಗದ ಮೂಲಕ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಎಂಬುದರ ಬಗ್ಗೆ ಸೂಕ್ತ ಮಾರ್ಗದರ್ಶನವಿಲ್ಲದೆ ಹಲವು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ತರಬೇತಿ ಪಡೆದ ಪ್ರಾಧ್ಯಾಪಕರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ಶ್ರಮಿಸಬೇಕು ಎಂದು ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಆರ್.ಶ್ರೀಕಾಂತ್ ಅವರು ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆ ವಾಗ್ವಾನಿ ಪೌಂಡೇಶನ್ ಅವರ ಸಹಯೋಗದೊಂದಿಗೆ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯ ತರಬೇತಿಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳು ಪದವಿ ನಂತರ ಸೂಕ್ತ ಉದ್ಯೋಗಗಳನ್ನು ಪಡೆದುಕೊಳ್ಳಲು ಸಹಾಯಕವಾಗಲಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪ್ರಾಯೋಗಿಕವಾಗಿ 60 ಕಾಲೇಜುಗಳನ್ನ ಆಯ್ಕೆ ಮಾಡಿಕೊಂಡು ಅಪ್ರೆಂಟೀಸ್ ಆಧಾರದ ಮೇಲೆ ಎರಡು ವರ್ಷಗಳು ಕಾಲೇಜಿನಲ್ಲಿ ಅಧ್ಯಯನ ಮಾಡಿ ಮೂರನೇ ವರ್ಷ ಕೈಗಾರಿಕೆಗಳಲ್ಲಿ ಕೆಲಸ ಮಾಡಿ ತಿಂಗಳಿಗೆ 11 ರಿಂದ 15 ಸಾವಿರ ಶಿಷ್ಯವೇತನವನ್ನು ಪಡೆಯುವ ವಿಶಿಷ್ಟ ಕೋರ್ಸ್ ಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್.ಚಂದ್ರಮ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೈಸೂರು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕ ಎ. ಬಿ.ನಾಗೇಂದ್ರಪ್ರಸಾದ್, ವಿಶೇಷಾಧಿಕಾರಿ ಎ.ಅರುಣ್ ಕುಮಾರ್, ವಾದ್ವಾನಿ ಫೌಂಡೇಶನ್ ನ ಮಾಸ್ಟರ್ ಟ್ರೈನರ್ ಸ್ವಾತಿ ಪುತ್ರನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪವಿತ್ರ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರೊ. ಎ.ಎಂ.ಶಿವಸ್ವಾಮಿ ಸ್ವಾಗತಿಸಿದರು .ಪ್ರೊ.ಲೋಕೇಶ್ ನಿರೂಪಿಸಿದರೆ, ಪ್ರೊ.ಮಂಜುನಾಥ ಅವರು ವಂದಿಸಿದರು.

Share this article