ಮಾವಿನ ಮೇಳದ ಕುರಿತು ಹೆಚ್ಚಿನ ಪ್ರಚಾರ ಅಗತ್ಯ: ಶಾಸಕ ಮಹೇಶ ಟೆಂಗಿನಕಾಯಿ

KannadaprabhaNewsNetwork |  
Published : May 24, 2026, 02:15 AM IST
ಜಿಲ್ಲಾ ಮಟ್ಟದ ಮಾವು ಮೇಳಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಪ್ರತಿವರ್ಷ ನಿರ್ದಿಷ್ಟ ತಿಂಗಳಲ್ಲಿ ಮಾವು ಮೇಳ ಆಯೋಜಿಸಿದಲ್ಲಿ ಜನರಿಗೆ ಮೇಳದ ಕುರಿತು ಮುಂಚಿತವಾಗಿ ತಿಳಿಯಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿ: ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಾವು ಮೇಳವನ್ನು ಆಯೋಜನೆ ಮಾಡುವಂತಾಗಲಿ. ಈ ಮೇಳದ ಕುರಿತ ಹೆಚ್ಚಿನ ಪ್ರಚಾರದ ಅವಶ್ಯಕತೆಯಿದೆ. ಪ್ರತಿವರ್ಷ ನಿರ್ದಿಷ್ಟ ತಿಂಗಳಲ್ಲಿ ಮಾವು ಮೇಳ ಆಯೋಜಿಸಿದಲ್ಲಿ ಜನರಿಗೆ ಮೇಳದ ಕುರಿತು ಮುಂಚಿತವಾಗಿ ತಿಳಿಯಲಿದೆ ಎಂದು ಶಾಸಕ ಮಹೇಳ ಟೆಂಗಿನಕಾಯಿ ಹೇಳಿದರು.

ಅವರು ಇಲ್ಲಿನ ಎಪಿಎಂಸಿಯ ವಿವಿಧೋದ್ದೇಶ ವಸ್ತು ಪ್ರದರ್ಶನ ಆವರಣದಲ್ಲಿ ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ತೋಟಗಾರಿಕೆ ಇಲಾಖೆ, ಕೃಷಿ ಮಾರಾಟ ಇಲಾಖೆ, ಜಿಎಸ್ ಫೌಂಡೇಶನ್‌ ಹಾಗೂ ಜಿಲ್ಲಾಡಳಿತ ಸಹಯೋಗದೊಂದಿಗೆ "ಮಾರುಕಟ್ಟೆ ಮತ್ತು ಮೌಲ್ಯವರ್ಧನೆ " ಶೀರ್ಷಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಮಾವು ಮೇಳ ಹುಬ್ಬಳ್ಳಿ -2026 ಉದ್ಘಾಟಿಸಿ ಮಾತನಾಡಿದರು.

ರೈತರು ಗುಣಮಟ್ಟದ ಮಾವಿನ ಹಣ್ಣು ತಂದಿದ್ದಾರೆ. ರೈತರ ಫಸಲನ್ನು ನೋಡಿ ಸಂತೋಷವಾಯಿತು. ರೈತರಿಗೆ ಬೆಳೆದ ಫಸಲನ್ನು ವಿದೇಶಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿ ಮಾಹಿತಿ ಒದಗಿಸುವುದು ಅವಶ್ಯಕವಾಗಿದೆ. ಇದರಿಂದ ಜಿಲ್ಲೆಯ ಮಾವುಗಳು ಬೇರೆ ಬೇರೆ ದೇಶಗಳಿಗೆ ರಫ್ತಾಗಲು ಸಾಧ್ಯವಾಗುತ್ತವೆ ಎಂದರು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ದೊಡ್ಡ ದೊಡ್ಡ ಕಟ್ಟಡಗಳು ನಮಗೆ ಆಹಾರ ಒದಗಿಸುವುದಿಲ್ಲ. ಸಸಿಗಳನ್ನು ನೆಡಲು ಜನರು ಮುಂದಾಗಬೇಕಿದೆ. ಭೂಮಿಯ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೇಳದ ಬಗ್ಗೆ ಹೆಚ್ಚಿನ ಪ್ರಚಾರ ಅವಶ್ಯಕವಾಗಿದೆ ಎಂದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಮಾತನಾಡಿ, ಮಾವು ರಾಷ್ಟ್ರೀಯ ಹಣ್ಣು ಆಗಿದೆ. ರೈತರು ವರ್ಷಪೂರ್ತಿ ಶ್ರಮವಹಿಸಿ ಮಾವು ಬೆಳೆಯುತ್ತಾರೆ. ಆದರೆ, ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಮೋಸವಾಗುತ್ತಿದೆ. ದೇಶದಲ್ಲಿ ಸಾವಿರಕ್ಕೂ ಅಧಿಕ ಮಾವಿನ ತಳಿಗಳಿವೆ. ಉತ್ತಮ ಬೆಳೆಗೆ ಉತ್ತಮ ಬೆಲೆ ದೊರೆಯಬೇಕು. ಜಿಲ್ಲೆಯ ಮಾವು ಬೇರೆ ದೇಶಗಳಿಗೂ ರಫ್ತಾಗಬೇಕು ಎಂದರು.

ಜಿಎಸ್ ಗ್ಲೋಬಲ್‌ನ ಜಿಷಾನ್ ಸಿರಸಂಗೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಕೆ.ಎಚ್. ಗುರುಪ್ರಸಾದ್, ಕೃಷಿ ಮಾರಾಟ ತರಬೇತಿ ಮಹಾವಿದ್ಯಾಲಯದ ಪ್ರಾಚಾರ್ಯ ಆಶಿಕ್ ಅಲಿ ಡಿ.ಎಂ. ಮಾತನಾಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಮೋಹನ ಹೊಸಮನಿ, ಚನ್ನು ಹೊಸಮನಿ, ನಿವೃತ್ತ ಪ್ರಾಧ್ಯಾಪಕ ಬಿ.ಬಿ.ಪಾಟೀಲ, ಚಿದಾನಂದ ಮನಸೂರ ಸೇರಿದಂತೆ ಖರೀದಿದಾರರು, ರಫ್ತುದಾರರು, ಸಾರ್ವಜನಿಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರಿ ಬಿಸಿಲು ಲೆಕ್ಕಿಸದೆ ಅಂಜನಾದ್ರಿಗೆ ಅಪಾರ ಭಕ್ತಗಣ
ತುಂಗಭದ್ರಾ ನದಿ ಒಡಲಲ್ಲಿ ಮರ್ರಂ ಅಕ್ರಮ