ಕನ್ನಡಪ್ರಭ ವಾರ್ತೆ ಅರಸೀಕೆರೆ
ಶ್ರೀಕ್ಷೇತ್ರ ಹಾರನಹಳ್ಳಿ ಕೋಡಿಮಠದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ಆಘಾತಕಾರಿ ಭವಿಷ್ಯ ನುಡಿದಿದ್ದು, ಪ್ರಾಕೃತಿಕ ದೋಷ ಇದೆ, ಐದು ಕಡೆಯೂ ಅಂದರೆ ಭೂಮಿ, ಅಗ್ನಿ, ವಾಯು, ಆಕಾಶ ಎಲ್ಲಾ ಕಡೆ ತೊಂದರೆ ಆಗುತ್ತದೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಆಕಾಶದಲ್ಲಿ ಘಟಿಸುವ ದೊಡ್ಡ ಸುದ್ದಿ ಇದೆ ಎಂದು ಕುತೂಹಲ ಜೊತೆಗೆ ಆತಂಕ ಹೆಚ್ಚುವಂತಹ ವಿಷಯ ಹೊರಹಾಕಿದ್ದಾರೆ.ಇನ್ನೂ ಮಳೆ ಇದೆ, ಅದರಲ್ಲೂ ಇನ್ನೂ ಹೆಚ್ಚಿನ ಅನಾಹುತ ಸಂಭವಿಸುತ್ತವೆ ಎಂದಿರುವ ಕೋಡಿಶ್ರೀ, ಈ ಹಿಂದೆ "ಜನ ಇದ್ದ ಇದ್ದಂಗೆಯೇ ಸಾಯುತ್ತಾರೆ, ಭೂಮಿ ಬಿರುಕು ಬಿಡುತ್ತೆ ಎಂದಿದ್ದೆ, ಗುಡ್ಡ ಜಾರಿ ಹೋಗುತ್ತೆ ಎಂದು ಹೇಳಿದ್ದೆ. ಪ್ರವಾಹದಲ್ಲಿ ಜಗತ್ತಿನಾದ್ಯಂತ ಅನೇಕ ಪ್ರದೇಶ ಮುಳುಗುತ್ತವೆ ಎಂದೂ ಹೇಳಿದ್ದೆ. ಕರ್ನಾಟಕದಲ್ಲಿ ವರ್ಷಧಾರೆಯಿಂದ ಅವಘಡ ಘಟಿಸಲಿವೆ ಎಂದು ಹೇಳಿದ್ದೆ. ಅನೇಕ ಕಡೆಗಳಲ್ಲಿ ಅವು ಘಟಿಸುವೆ ಎಂದು ಹೇಳುವ ಮೂಲಕ ತಾವಾಡಿದ ಭವಿಷ್ಯ ನಿಜವಾಗಿದೆ " ಎಂದು ನುಡಿದರು.
ಒಂದು ಆಕಾಶ ತತ್ವದ ಪ್ರಕಾರ ತೊಂದರೆ ಆಗಬಹುದು. ಅದು ರಾಜನ ಮೇಲೆ ಭಂಗ ಬೀರಲಿದೆ ಎಂದರು. ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕಟ್ ಮಾಡಿಸುತ್ತಾರೆ. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮ ಗೆದ್ದ. ಇದೀಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ತಾನೆ ಎಂದು ಹೇಳಿದ್ದೇನೆ. ಅದರ ಅರ್ಥ ಆಮೇಲೆ ಹೇಳುವೆ ಎನ್ನುವ ಮೂಲಕ ರಾಜಕೀಯವಾಗಿ ನಾಯಕರಿಗೆ ಏಳು-ಬೀಳು, ಹಿನ್ನಡೆ-ಮುನ್ನಡೆಯ ಭವಿಷ್ಯವನ್ನು ಮಹಾ ಭಾರತದ ಪ್ರಸಂಗ ಉದಾಹರಿಸಿ ಹೇಳಿದರು.ರಾಜಕೀಯ ಅದಲು ಬದಲು, ಸೋಲು-ಗೆಲುವು ಸೆಂಟ್ರಲ್ ಹಾಗೂ ರಾಜ್ಯದಲ್ಲೂ ಆಗಲಿದೆ ಎಂದು ತಿಳಿಸಿದರು. ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಅಂತ ಹಿಂದೆ ಹೇಳಿದ್ದೆ ಎಂದು ಹಿಂದಿನ ತಮ್ಮ ಭವಿಷ್ಯವನ್ನು ಮೆಲುಕು ಹಾಕಿದ ಸ್ವಾಮೀಜಿ, ಜಲ, ಅಗ್ನಿ, ಪೃಥ್ವಿ, ವಾಯು ಅಂತ ಇರುತ್ತೆ. ಅದು ಪಂಚಾಗ್ನಿ ಏನು ಬೇಕಾದರೂ ಘಟಿಸಬಹುದು ಎಂದರು.