ಹೊಸ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾದ ನಂತರ ಹೆಚ್ಚು ರಸ್ತೆ ಅಭಿವೃದ್ಧಿ: ಸಚಿವ ಸತೀಶ ಜಾರಕಿಹೊಳಿ

KannadaprabhaNewsNetwork | Published : May 9, 2025 12:32 AM

ಬಜೆಟ್‌ನಲ್ಲಿ ಲೊಕೋಪಯೋಗಿ ಇಲಾಖೆಗೆ ನೀಡಿದ ಅನುದಾನ ಬಳಕೆ ಮಾಡಿಕೊಂಡು ಹೊಸ ರಸ್ತೆಗೆ ಹಣ ನೀಡಿದ್ದೇವೆ.

ಶಿರಸಿ: ಬಜೆಟ್‌ನಲ್ಲಿ ಲೊಕೋಪಯೋಗಿ ಇಲಾಖೆಗೆ ನೀಡಿದ ಅನುದಾನ ಬಳಕೆ ಮಾಡಿಕೊಂಡು ಹೊಸ ರಸ್ತೆಗೆ ಹಣ ನೀಡಿದ್ದೇವೆ. ದುರಸ್ತಿ ಕಾರ್ಯವೂ ನಡೆದಿದ್ದು, ಹೊಸ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾದ ನಂತರ ಇನ್ನೂ ಅನೇಕ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಅವರು ಗುರುವಾರ ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಪಿಡಬ್ಲ್ಯೂಡಿ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಶಾಸಕರು ಬೇಡಿಕೆ ಸಲ್ಲಿಸಿದ್ದಾರೆ. ಎಲ್ಲ ರಸ್ತೆಗೆ ಒಂದೇ ಬಾರಿ ಅನುದಾನ ನೀಡುವುದು ಕಷ್ಟಸಾಧ್ಯ. ಅವಶ್ಯಕತೆಗೆ ಅನುಗುಣವಾಗಿ ಹಂತ ಹಂತವಾಗಿ ಹಣ ಮಂಜೂರಿ ಮಾಡಲಾಗುತ್ತದೆ. ಡಿಸೆಂಬರ್ ೨೦೨೪ ರ ಒಳಗಡೆ ಗುತ್ತಿಗೆದಾರರಿಗೆ ಬಾಕಿ ಉಳಿದಿದ್ದ ಹಣ ನೀಡಿದ್ದೇವೆ. ಮೊದಲು ಟೆಂಡರ್ ಹಾಕುವುದಿಲ್ಲ ಎಂದು ಹೇಳಿರುವುದು ನಿಜ. ಹಂತ ಹಂತವಾಗಿ ಅವರ ಹಣ ಬಿಡುಗಡೆ ಮಾಡುತ್ತಿದ್ದೇವೆ. ಮಾರ್ಚ್ ೨೦೨೫ ರ ಒಳಗಡೆ ಇದ್ದ ಹಣವನ್ನು ನೀಡಿದ್ದೇವೆ ಎಂದರು.

ಇಲಾಖೆಯಿಂದ ರಾಜ್ಯದ ೧೨ ಜಿಲ್ಲೆಗಳಿಗೆ ಕಿರು ಸೇತುವೆ ಯೋಜನೆ ಇದ್ದು, ೨೦೦೮ ರ ಒಳಗಡೆ ಅಗತ್ಯವಿರುವ ಎಲ್ಲ ಸ್ಥಳಗಳಿಗೂ ಕಿರು ಸೇತುವೆ ಮುಗಿಸಬೇಕೆಂದು ನಿರ್ಧಾರ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ₹೧೦ ಕೋಟಿ ಹಿಂದಿನ ವರ್ಷ ₹೨೦ ಕೋಟಿ ನೀಡಲಾಗಿತ್ತು. ಈ ವರ್ಷ ₹೫೦ ಕೋಟಿ ಮೀಸಲಿಟ್ಟಿದ್ದೇವೆ. ಶಾಲಾ ಮಕ್ಕಳಿಗೆ ಅಗತ್ಯವಿರುವ ಸ್ಥಳಗಳಲ್ಲಿ ಕಿರು ಸೇತುವೆ ಕಾಮಗಾರಿಯನ್ನು ಮುಂದಿನ ೨ ವರ್ಷದೊಳಗಡೆ ಮುಕ್ತಾಯಗೊಳಿಸುತ್ತೇವೆ ಎಂದರು.ಕೇಂದ್ರ ಸರ್ಕಾರ ಸಾಮಾನ್ಯ ಜನಗಣತಿ ಕೈಗೊಂಡಿದ್ದು, ರಾಜ್ಯ ಸರ್ಕಾರ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಲು ಮತ್ತು ಯಾವ ಯಾವ ಸಮಾಜ ಎಷ್ಟಿದೆ ಎಂಬುದಕ್ಕೆ ರಾಜ್ಯ ಸರ್ಕಾರ ಒಳ ಮೀಸಲಾತಿ ನಡೆಸುತ್ತಿದೆ. ಕೇಂದ್ರ ಸರ್ಕಾರದ ಜನಗಣತಿ ಮತ್ತು ಇದಕ್ಕೆ ವ್ಯತ್ಯಾಸವಿದೆ. ಒಳಮೀಸಲಾತಿ ಗಣತಿಗೆ ಅವರಿಗೆ ಆನ್‌ಲೈನ್‌ನಲ್ಲಿ ಭರ್ತಿ ಮಾಡುವ ಅಧಿಕಾರ ನೀಡಿದ್ದೇವೆ. ೩-೪ ಹಂತದಲ್ಲಿ ಸರ್ಕಾರವು ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮರಳು ಕೊರತೆಯಿಂದ ಗುತ್ತಿಗೆದಾರರು ಹೊರ ಜಿಲ್ಲೆಯ ಮರಳು ಪಡೆಯುತ್ತಿರುವ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಹಸಿರುಪೀಠದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿರುವುದರಿಂದ ಮರಳು ತೆಗೆಯಲು ತೊಂದರೆಯಾಗುತ್ತಿದೆ. ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಕ್ರಮ ವಹಿಸುವುದು ಅತ್ಯವಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಸದ್ಯ ಸರ್ಕಾರ ಮುಂದಿಲ್ಲ. ನಿಗಮ ಮಂಡಳಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲು ೬ ತಿಂಗಳ ಹಿಂದೆಯೇ ಪಟ್ಟಿ ಸಲ್ಲಿಸಲಾಗಿದ್ದು, ನಿಗಮ ಮಂಡಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರ ನೇಮಕವಾದರೆ ೯೦೦ ಕಾರ್ಯಕರ್ತರು ಖುಷಿಯಾಗಲಿದ್ದಾರೆ. ಅರಣ್ಯ ಅತಿಕ್ರಮಣ ಭೂಮಿ ಮಂಜೂರಿಗೆ ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆ ನಡೆದು, ಪುನರ್ ಪರಿಶೀಲನೆ ಆದೇಶ ಮಾಡಿದೆ. ವರದಿ ಸಲ್ಲಿಕೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುವ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿ ವರದಿ ಕಳುಹಿಸಲು ನಿರ್ಣಯ ಕೈಗೊಳ್ಳಲಾಗಿದೆ. ಇಲ್ಲವಾದಲ್ಲಿ ಅರಣ್ಯ ಇಲಾಖೆಯವರು ನೇರವಾಗಿ ಸಲ್ಲಿಸಿದಾಗ ನಮಗೆ ಅದರ ಕುರಿತು ಮಾಹಿತಿ ಲಭ್ಯವಾಗುವುದಿಲ್ಲ. ಈ ಕಾರಣದಿಂದ ಎಲ್ಲ ಜಿಲ್ಲೆಯಲ್ಲಿಯೂ ಈ ನಿರ್ಧಾರ ಮಾಡಲಾಗಿದೆ ಎಂದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶಾಸಕ ಭೀಮಣ್ಣ ನಾಯ್ಕ, ಮಾಜಿ ಶಾಸಕ ವಿ.ಎಸ್.ಪಾಟೀಲ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಎಸ್.ಕೆ.ಭಾಗ್ವತ್, ಜ್ಯೋತಿ ಪಾಟೀಲ, ಪ್ರಸನ್ನ ಶೆಟ್ಟಿ, ಶೈಲೇಶ ಗಾಂಧಿ ಜೋಗಳೇಕರ, ದೀಪಕ ದೊಡ್ಡೂರು ಇದ್ದರು.