ಈ ಸಲದ ಬೇಸಿಗೆ ರಣಭೀಕರವಾಗಿ ಇರಲಿದೆ : ಉ. ಕರ್ನಾಟಕಕ್ಕೆ ಈ ಬಾರಿ ಸುಡುಬಿಸಿಲು, ಉಷ್ಣ ಅಲೆ

KannadaprabhaNewsNetwork |  
Published : Mar 02, 2025, 01:19 AM ISTUpdated : Mar 02, 2025, 08:21 AM IST
ಬೇಸಿಗೆಯಲ್ಲಿ ಮಹಿಳೆಯರು | Kannada Prabha

ಸಾರಾಂಶ

ಈ ಸಲದ ಬೇಸಿಗೆ ರಣಭೀಕರವಾಗಿ ಇರಲಿದೆ ಎಂಬ ಸುಳುಹು ಫೆಬ್ರವರಿಯಲ್ಲಿ ಸಿಕ್ಕ ಬೆನ್ನಲ್ಲೇ ಉತ್ತರ ಕರ್ನಾಟಕದ ಪ್ರದೇಶಗಳು ಸೇರಿದಂತೆ ದೇಶದ 15 ರಾಜ್ಯಗಳು ಮೇವರೆಗೆ ಅತಿಯಾದ ತಾಪಮಾನ ಹಾಗೂ ಉಷ್ಣ ಅಲೆಯಿಂದ ತತ್ತರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

 ನವದೆಹಲಿ: ಈ ಸಲದ ಬೇಸಿಗೆ ರಣಭೀಕರವಾಗಿ ಇರಲಿದೆ ಎಂಬ ಸುಳುಹು ಫೆಬ್ರವರಿಯಲ್ಲಿ ಸಿಕ್ಕ ಬೆನ್ನಲ್ಲೇ ಉತ್ತರ ಕರ್ನಾಟಕದ ಪ್ರದೇಶಗಳು ಸೇರಿದಂತೆ ದೇಶದ 15 ರಾಜ್ಯಗಳು ಮೇವರೆಗೆ ಅತಿಯಾದ ತಾಪಮಾನ ಹಾಗೂ ಉಷ್ಣ ಅಲೆಯಿಂದ ತತ್ತರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಶನಿವಾರ ಹೇಳಿಕೆ ನೀಡಿರುವ ಅದು, ‘ಬಿಸಿಲ ತಾಪದಲ್ಲಿನ ಏರುಗತಿಯು ಏಪ್ರಿಲ್‌ನಿಂದ ಮೇ ವರೆಗೂ ಮುಂದುವರಿಯಲಿದ್ದು, ಈ ಬಾರಿ ದೇಶದ ಹಲವೆಡೆ ಉಷ್ಣಾಂಶವು ಸಾಮಾನ್ಯಕ್ಕಿಂತ ಜಾಸ್ತಿಯೇ ಇರಲಿದೆ. ಉಷ್ಣ ಅಲೆ ಕೂಡ ಹೆಚ್ಚಾಗಲಿದೆ’ ಎಂದು ಮುನ್ಸೂಚನೆ ನೀಡಿದೆ.

ಮುಖ್ಯವಾಗಿ ಕರ್ನಾಟಕದ ಉತ್ತರ ಕರ್ನಾಟಕ ಭಾಗ, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸೇರಿ 15 ರಾಜ್ಯಗಳಲ್ಲಿ ಈ ಮಾರ್ಚ್‌ನಿಂದ ಮೇವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣ ಅಲೆಗಳು ಬೀಸುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಜ್ಞರು ಹೇಳಿದ್ದಾರೆ.

ಗಂಭೀರ ಅಪಾಯ:

ಉಷ್ಣ ಅಲೆಯು ಬೆಳೆ ಮತ್ತು ಜನ, ಜಾನುವಾರುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಉಷ್ಣಾಂಶ ಕಡಿಮೆ ಇರುತ್ತದೆ. ಆದರೆ ಕಳೆದ ವರ್ಷವೂ ಸರಾಸರಿಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿತ್ತು. ಆ ದಾಖಲೆಯನ್ನು ಈ ವರ್ಷದ ಉಷ್ಣಾಂಶ ಮುರಿದಿದೆ. ಉಷ್ಣಾಂಶದಲ್ಲಿನ ಈ ಏರಿಕೆಯು ಚಳಿಗಾಲದಲ್ಲಿ ಹೆಚ್ಚಾಗಿ ಬೆಳೆಯುವ ಗೋಧಿ, ಸಾಸಿವೆ ಮತ್ತಿತರ ಬೆಳೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ, ತೀವ್ರ ಬಿಸಿಲ ಅಲೆಗಳಿಂದಾಗಿ ಬಿತ್ತನೆ ಕಾರ್ಯವೂ ವಿಳಂಬವಾಗುವ ಹಿನ್ನೆಲೆಯಲ್ಲಿ ಅದು ಒಟ್ಟಾರೆ ಕೃಷಿ ಉತ್ಪಾದನೆ ಮೇಲೂ ಪ್ರಭಾವ ಬೀರುವ ಭೀತಿ ಇದೆ.

ಫೆಬ್ರವರಿಯಲ್ಲಿ ದಾಖಲೆ ಉಷ್ಣಾಂಶ

- ಸರಾಸರಿ 22.04 ಡಿಗ್ರಿ ತಾಪ ದಾಖಲು

- ಇದು ವಾಡಿಕೆಗಿಂತ 1.34 ಡಿಗ್ರಿ ಹೆಚ್ಚು

ನವದೆಹಲಿ: ಜಾಗತಿಕ ತಾಪಮಾನ ಏರಿಕೆ ಭೀತಿ ಬೆನ್ನಲ್ಲೇ ದೇಶದಲ್ಲಿ 1901ರ ಬಳಿಕ ಫೆಬ್ರವರಿ ತಿಂಗಳಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಉಷ್ಣಾಂಶ ದಾಖಲಾಗಿದೆ. ದೇಶದಲ್ಲಿ ಹವಾಮಾನ ಕುರಿತ ದಾಖಲೆಗಳನ್ನು ಸಂಗ್ರಹಿಸಲು ಆರಂಭಿಸಿದ ನಂತರದ ದಾಖಲೆ ಉಷ್ಣಾಂಶ ಇದು.

ಒಟ್ಟಾರೆ 22.04 ಡಿಗ್ರಿ ಸೆಲ್ಸಿಯಸ್‌ ಈ ತಿಂಗಳಲ್ಲಿ ದಾಖಲಾಗಿದೆ. ಇದು ವಾಡಿಕೆ ಸರಾಸರಿ ಉಷ್ಣಾಂಶಕ್ಕಿಂತ 1.34 ಡಿಗ್ರಿ ಹೆಚ್ಚು. ಇದೇ ವಾತಾವರಣ ಮೇ ವರೆಗೂ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ