ಹುಲಿಗೆಮ್ಮ ಸನ್ನಿಧಿಗೆ 3 ಲಕ್ಷಕ್ಕೂ ಅಧಿಕ ಭಕ್ತರು

KannadaprabhaNewsNetwork |  
Published : Oct 29, 2023, 01:00 AM ISTUpdated : Oct 29, 2023, 01:01 AM IST
ಅಮ್ಮನವರ ದರ್ಶನ ಪಡೆಯಲು ಸಾಲುಗಟ್ಟಿ ನಿಂತ ಭಕ್ತರು,   ಟ್ರಾಪಿಕ್ ಜಾಮ್ ನಲ್ಲಿ ರೆಲ್ವೆ ಗೇಟ್ ಹಾಕಿದರೂ  ರೆಲ್ವೆ ಗೇಟ ದಾಟಿಕೊಂಡು ದರ್ಶನಕ್ಕಾಗಿ ಹೋಗುತ್ತಿರುವ ಭಕ್ತರು  | Kannada Prabha

ಸಾರಾಂಶ

ಸೀಗಿ ಹುಣ್ಣಿಮೆ ಪ್ರಯುಕ್ತ ಶನಿವಾರ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ 3 ಲಕ್ಷಕ್ಕೂ ಅಧಿಕ ಭಕ್ತರು ಆಗಮಿ ದೇವಿ ದರ್ಶನ ಪಡೆದರು.

ಮುನಿರಾಬಾದ್: ಸೀಗಿ ಹುಣ್ಣಿಮೆ ಪ್ರಯುಕ್ತ ಶನಿವಾರ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ 3 ಲಕ್ಷಕ್ಕೂ ಅಧಿಕ ಭಕ್ತರು ಆಗಮಿ ದೇವಿ ದರ್ಶನ ಪಡೆದರು.

ಇಂದು ಚಂದ್ರಗ್ರಹಣ ಇದ್ದರೂ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ದರ್ಶನ ಪಡೆದರು. ದೂರದ ಊರಿನವರು ಶುಕ್ರವಾರ ರಾತ್ರಿ ದೇವಸ್ಥಾನ ಆವರಣದಲ್ಲಿ ವಾಸ್ತವ್ಯ ಹೂಡಿ ಬೆಳಗಿನಜಾವ 3 ಗಂಟೆಯಿಂದ ದೇವಿ ದರ್ಶನ ಪಡೆಯಲು ಸಾಲಿನ ನಿಂತರು. ದೇವಸ್ಥಾನ ಬಾಗಿಲು ತೆರೆಯುತ್ತಿದ್ದಂತೆ ದರ್ಶನ ಪಡೆಯಲು ಭಕ್ತರು ಮುಗಿಬಿದ್ದರು.

ಬೆಳಿಗ್ಗೆ 10 ಗಂಟೆವರೆಗೆ ಸುಮಾರು 1 ಲಕ್ಷ, ಮಧ್ಯಾಹ್ನ 1 ಗಂಟೆಗೆ 2 ಲಕ್ಷ, ಸಂಜೆ 5 ಗಂಟೆಯ ವೇಳೆಗೆ 3 ಲಕ್ಷಕ್ಕೂ ಅಧಿಕ ಭಕ್ತರು ಬಂದು ಹೋದರು. ಬಿಜಾಪುರ, ಬಾಗಲಕೋಟೆ, ಇಲಕಲ್, ಕೊಪ್ಪಳ , ಗದಗ, ಹುಬ್ಬಳ್ಳಿ , ಹೊಸಪೇಟೆ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಕಡೆಯಿಂದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಆಗಮಿಸಿದ ಭಕ್ತರು ಹುಲಿಗಿ ಕ್ರಾಸ್‌ನಲ್ಲಿ ಇಳಿದು ಅಲ್ಲಿಂದ ಹುಲಿಗಿಗೆ ತೆರಳಿ ದರ್ಶನ ಪಡೆದರು. ಸಾವಿರಾರು ಜನರು ಖಾಸಗಿ ವಾಹನದಲ್ಲೂ ಆಗಮಿಸಿದ್ದರು.

ಚಂದ್ರಗ್ರಹಣ ಹಿನ್ನೆಲೆಯಲ್ಲಿ ಸಂಜೆ 7 ಗಂಟೆವರೆಗೆ ಸಾರ್ವಜನಿಕರಿಗೆ ದೇವಿ ದರ್ಶನವಿದೆ. ಗ್ರಹಣದ ಹಿನ್ನೆಲೆಯಲ್ಲಿ ಹರಕೆ ರಥೋತ್ಸವ ಸೇವೆ ಸ್ಥಗಿತಗೊಳಿಸಲಾಗಿದೆ.

ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆ ಬಸ್ ನಿಲ್ದಾಣಗಳಿಂದ ರಸ್ತೆ ಸಾರಿಗೆ ನಿಗಮವು ಹುಲಿಗಿ ಗ್ರಾಮಕ್ಕೆ ವಿಶೇಷ ಬಸ್ ಸೌಕರ್ಯ ಏರ್ಪಡಿಸಲಾಗಿತ್ತು. ಈ ನಿಲ್ದಾಣಗಳಲ್ಲಿ ಬಸ್ ಹತ್ತಲು ಭಾರಿ ನೂಕು-ನುಗ್ಗಲು ಆಯಿತು. ಬಸ್ ಹತ್ತಲು ಮಹಿಳಾ ಪ್ರಯಾಣಿಕರು ಹರಸಾಹಸಪಟ್ಟರು.

ಹುಲಿಗಿ ರೈಲ್ವೆ ಗೇಟ್ ಸಮೀಪ ಭಾರಿ ಟ್ರಾಫಿಕ್ ಜಾಮ್: ಹುಲಿಗಿ ರೈಲ್ವೆ ಗೇಟ್‌ನಲ್ಲಿ ಅರ್ಧ ಗಂಟೆಗೊಮ್ಮೆ ರೈಲ್ವೆ ಗೇಟೆ ಹಾಕಿದ ಹಿನ್ನೆಲೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸಂಭವಿಸಿತು. ರೈಲ್ವೆ ಗೇಟ್ ಹಾಕಿದಾಗ ಎರಡೂ ಬದಿಯ ವಾಹನಗಳು ನಿಲ್ಲುತ್ತಿದ್ದವು. ಹುಲಿಗಿಯಲ್ಲಿ ತ್ವರಿತಗತಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣದಿಂದ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಯಲಿದೆ.

ರೈಲು ಸಂಚರಿಸುವ ಸಮಯದಲ್ಲಿ ರೈಲ್ವೆ ಗೇಟ್ ಹಾಕಿದ್ದನ್ನು ಲೆಕ್ಕಿಸದೇ ಭಕ್ತರು ಜೀವ ಲೆಕ್ಕಿಸದೇ ರೈಲ್ವೆ ಗೇಟ್ ಕ್ರಾಸ್ ಮಾಡಿ ಅಮ್ಮನವರ ದರ್ಶನಕ್ಕೆ ತೆರಳುತ್ತಿದ್ದರು. ಇನ್ನೊಂದೆಡೆ ಭಕ್ತರು ರೈಲ್ವೆ ಟ್ರ್ಯಾಕ್ ಮೇಲೆ ನಡೆದು ದೇವಸ್ಥಾನಕ್ಕೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ