ಹಾನಗಲ್ಲ: ನಾನಾ ಕಾರಣಗಳಿಂದ ತೊಂದರೆಗೆ ಸಿಲುಕಿರುವ ಬಡ ಮತ್ತು ಮಧ್ಯಮ ವರ್ಗಗಳಿಗೆ ಸೇರಿದ ಕುಟುಂಬಗಳಿಗೆ ಕನಿಷ್ಠ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಮಹತ್ವಾಕಾಂಕ್ಷಿಯ ಗ್ಯಾರಂಟಿ ಯೋಜನೆಗಳಿಂದ ಹಾನಗಲ್ ತಾಲೂಕುವೊಂದಕ್ಕೆ ಪ್ರತಿವರ್ಷ ₹300 ಕೋಟಿಗಿಂತ ಹೆಚ್ಚು ಆರ್ಥಿಕ ನೆರವು ಸಿಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ತಾಲೂಕಿನ ಉಪ್ಪುಣಸಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು. ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವನ್ನು ಜನಸಾಮಾನ್ಯರಿಗೆ ನೇರವಾಗಿ ಖಾತೆಗಳ ಮೂಲಕ ನೀಡುವಂಥ ಯೋಜನೆಗಳನ್ನು ದೇಶದ ಬೇರೆ ಯಾವ ರಾಜ್ಯಗಳೂ ಇದುವರೆಗೂ ಜಾರಿಗೆ ತಂದಿಲ್ಲ. ಫಲಾನುಭವಿ ಕುಟುಂಬಗಳು ಪ್ರತಿವರ್ಷ ಸರಾಸರಿ ₹50 ಸಾವಿರ ನೆರವು ಪಡೆದುಕೊಳ್ಳುತ್ತಿವೆ. ಸ್ವಉದ್ಯೋಗ ಆರಂಭಿಸಲು, ಮಕ್ಕಳ ವಿದ್ಯಾಭ್ಯಾಸ, ಔಷಧೋಪಚಾರ, ಕುಟುಂಬದ ನಿರ್ವಹಣೆಗೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ನೀಡುತ್ತಿರುವ ಆರ್ಥಿಕ ನೆರವು ಅನುಕೂಲವಾಗಿದೆ. ಹಾಗಾಗಿ ಇದೀಗ ರಾಜ್ಯದ ಕೋಟ್ಯಂತರ, ತಾಲೂಕಿನ 65 ಸಾವಿರಕ್ಕೂ ಹೆಚ್ಚು ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.ಮನೆ, ಮನೆಗೆ ಗಂಗೆ ಯೋಜನೆ ಪೂರ್ಣಗೊಳಿಸುವುದು, ಸರ್ಕಾರಿ ಶಾಲೆಗೆ ಸೌಲಭ್ಯ ಕಲ್ಪಿಸುವುದು, ರಸ್ತೆ ನಿರ್ಮಾಣ ಹೀಗೆ ನಾನಾ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸಿದ ಶಾಸಕ ಮಾನೆ, ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯವಿದೆ. ಹಾಗಾಗಿ ಸಮುದಾಯ ಕಾಳಜಿ ವಹಿಸಿ, ಮುಂದೆ ಬರಬೇಕಿದೆ ಎಂದರು. ಗ್ರಾಪಂ ವ್ಯಾಪ್ತಿಯ ಉಪ್ಪುಣಸಿ, ಮುಳಥಳ್ಳಿ, ಗುಡ್ಡದಮುಳಥಳ್ಳಿ ಗ್ರಾಮಸ್ಥರು ಸಮಸ್ಯೆಗಳ ಕುರಿತು ಗಮನ ಸೆಳೆದರು.
ಗ್ರಾಪಂ ಅಧ್ಯಕ್ಷ ಬಾಬಾಜಾನ್ ಬಂಕಾಪುರ, ಪಿಡಿಒ ಹನುಮಂತಪ್ಪ ಲಮಾಣಿ ಹಾಗೂ ಗ್ರಾಪಂ ಸದಸ್ಯರು, ಗ್ರಾಮಸ್ಥರು, ಮುಖಂಡರು, ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.