ಕಲಬುರಗಿ: ಮಕ್ಕಳ ಪಾಲನೆಗೆ ಪೊಲೀಸ್‌ ನಿಯೋಜನೆ 300ಕ್ಕೂ ಹೆಚ್ಚು ದಿನಗೂಲಿಗಳು ಅತಂತ್ರ!

KannadaprabhaNewsNetwork |  
Published : Jan 04, 2024, 01:45 AM ISTUpdated : Jan 05, 2024, 05:23 PM IST
this 16 yr labour child want to buy a house for her mother inspiring kpt

ಸಾರಾಂಶ

ವೀಕ್ಷಣಾಲಯ, ಪ್ಲೇಸ್‌ ಆಫ್‌ ಸೇಫ್ಟಿ ಸಂಸ್ಥೆಗಳಿಗೆ ಪೊಲೀಸ್‌ ಸಿಬ್ಬಂದಿ ನಿಯೋಜನೆಗೆ ಮುಂದಾದ ಸರ್ಕಾರದ ಕ್ರಮದಿಂದ ದಿನಗೂಲಿ ನೌಕರರು ಕಂಗಾಲು.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವೀಕ್ಷಣಾಲಯ, ಪ್ಲೇಸ್‌ ಆಫ್‌ ಸೆಫ್ಟಿ, ಮಕ್ಕಳ ಪಾಲನಾ ಸಂಸ್ಥೆಗಳು, ಬಾಲಕ, ಬಾಲಕಿಯರ ಬಾಲ ಮಂದಿರಗಳಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗಳನ್ನು ಒಳಾಡಳಿತ ಇಲಾಖೆಯಿಂದ ತಕ್ಷಣ ನಿಯೋಜನೆ ಮೇಲೆ ಪಡೆಯುವಂತೆ ಸರಕಾರ ಆದೇಶ ಹೊರಡಿಸಿರೋದರಿಂದ , ಈಗಾಗಲೇ ಈ ಸಂಸ್ಥೆಗಳಲ್ಲಿ ಕಳೆದ 15 ವರ್ಷದಿಂದ ದಿನಗೂಲಿ ಮೇಲೆ ಭದ್ರತಾ ಸಿಬ್ಬಂದಿ ಎಂದು ರಾಜ್ಯಾದ್ಯಂತ ಕೆಲಸದಲ್ಲಿರುವ 300ಕ್ಕೂ ಹೆಚ್ಚು ನೌಕರರ ಕುಟುಂಬಗಳು ಬೀದಿಪಾಲಗುವ ಭೀತಿ ಎದುರಿಸುತ್ತಿವೆ.

ಈಗಾಗಲೇ ಕೈಗಾರಿಕಾ ಭದ್ರತಾ ಪಡೆ ನಿಯೋಜನೆ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ ಆರ್‌. ಇವರು ಕಳೆದ ಡಿ.28ರಂದೇ ಈ ನಿಯೋಜನೆ ಆದೇಶ ಹೊರಡಿಸಿ ತಕ್ಷಣ ಕ್ರಣಕ್ಕೆ ಮುಂದಾಗುವಂತೆ ಸಂಬಂಧಪಟ್ಟವರಿಗೆ ಸೂಚಿಸಿರೋದರಿಂದ ದಿನಗೂಲಿ ನೌಕರರ ಸಮೂಹ ಕಣ್ಣೀರಾಗಿದೆ.

ಸದರಿ ಆದೇಶದ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದ್ದು ಆರ್‌. ಲತಾ ಅವರು ಹೊರಡಿಸಿರುವ ಆದೇಶದಂತೆ ಕಳೆದ ಒಂದೂವರೆ ದಶಕದಿಂದ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸುರಕ್ಷತೆ ಸಿಬ್ಬಂದಿ ಎಂದು ದಿನಗೂಲಿಯಲ್ಲಿದ್ದ 300 ಸಿಬ್ಬಂದಿಗಳನ್ನು ಯಾವುದೇ ಕ್ಷಣದಲ್ಲಾದರೂ ತೆಗೆದು ಹಾಕಬಹುದಾಗಿದೆ.

ಸರಕಾರದ ಆದೇಶದಲ್ಲೇನಿದೆ?:

ರಾಜ್ಯದಲ್ಲಿರುವ 19 ವೀಕ್ಷಣಾಲಯ ಮತ್ತು ಪ್ಲೇಸ್‌ ಆಫ್‌ ಸೆಫ್ಟಿ ಸಂಸ್ಥೆಗಳಲ್ಲಿ ಪ್ರತಿ ಸಂಸ್ಥೆಗೆ 4 ಪೊಲೀಸ್‌ ಸಿಬ್ಬಂದಿಯಂತೆ ಒಟ್ಟು 76 ಹುದ್ದೆ ಅಗತ್ಯವಿದೆ. ಸದರಿ ಸಂಸ್ಥೆಗಳಲ್ಲಿ ಈಗಾಗಲೇ ಮಂಜೂರಾದ 47 ಹುದ್ದೆಗಳೊಂದಿಗೆ ಹೆಚ್ಚುವರಿ 29 ಭದ್ರತಾ ಸಿಬ್ಬಂದಿ ಹುದ್ದೆಗಳ ಸೃಜಿಸಲಾಗಿದೆ. ಸದರಿ 76 ಹುದ್ದೆಗಳನ್ನು ಪೊಲೀಸ್‌ ಇಲಾಖೆಯಿಂದ ನಿಯೋಜನೆ ಮೂಲಕ ಭರ್ತಿ ಮಾಡಬೇಕು, ಸದರಿ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸೇವೆಯನ್ನು ಈ ಕೂಡಲೇ ಕೊನೆಗೊಳಿಸಬೇಕೆಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಮಕ್ಕಳ ಪಾಲನಾ ಸಂಸ್ಥೆಗಳಲ್ಲೂ ದಿನಗೂಲಿಗಳಿಗೆ ಕೋಕ್‌: ರಾಜ್ಯದಲ್ಲಿರುವ 69 ಮಕ್ಕಳ ಪಾಲನಾ ಸಂಸ್ಥೆಗಳಿಗೆ ಪ್ರತಿ ಸಂಸ್ಥೆಗೆ 3 ಗೃಹ ರಕ್ಷಕರಂತೆ ಒಟ್ಟು 207 ಗೃಹ ರಕ್ಷಕ ಸಿಬ್ಬಂದಿಯನ್ನು ಪಡೆಯಲು ಸೂಚಿಸಿದೆ. ಸದರಿ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಮೇಲಿರುವ 180 ಭದ್ರತಾ ಸಿಬ್ಬಂದಿ ಸೇವೆಯನ್ನು ಈ ಕೂಡಲೇ ಮುಕ್ತಾಯಗೊಳಿಸಬೇಕೆಂದು ಆದೇಶದಲ್ಲಿ ಹೇಳಲಾಗಿದೆ. ಮೇಲಿನ ಎರಡೂ ಆದೇಶಗಳನ್ನು ಹಣಕಾಸು ಇಲಾಖೆಯ ಹಿಂಬರಹ ಕಡತಗಳನ್ನು ಉಲ್ಲೇಖಿಸಿ ಅಲ್ಲಿನ ಅಭಿಪ್ರಾದನ್ವಯ ಹೊರಡಿಸಲಾಗಿದೆ ಎಂದೂ ಆದೇಶದಲ್ಲಿ ನಮೂದಿಸಲಾಗಿದೆ.ಬಾಕ್ಸ್‌.

ನೂರಾರು ದಿನಗೂಲಿ ನೌಕರರ ಕುಟುಂಬಗಳು ಅತಂತ್ರ!

ಕಳೆದ 15 ವರ್ಷದಿಂದ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ 300ಕ್ಕೂಹೆಚ್ಚು ಹೊರಗುತ್ತಿಗೆ ಆಧಾರದಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಇವರಿಗೆ ಮಕ್ಕಳ ಸ್ನೇಹಿಯಾಗಿ ಇರೋದು ಹೇಗೆ? ಅಲ್ಲಿ ಕೆಲಸ ಮಾಡೋದು ಹೇಗೆ ಎಂಬಿತ್ಯಾದಿ ವಿಷಯಗಳಲ್ಲಿ ಪಕ್ಕಾ ತರಬೇತಿ ಸಹ ಆಗಿದೆ. ಇದೀಗ ಸರಕಾರ ಈ ಹುದ್ದೆಗಳಿಗೆ ಪೊಲೀಸ್‌ ಬಲ ನಿಯೋಜಿಸಲು ಮುಂದಾಗಿ ಇವರನ್ನೆಲ್ಲ ಯಾವುದೇ ಮುನ್ಸೂಚನೆ ಸಹ ಕೊಡದೆ ದಿಢೀರನೆ ಹಾಗೂ ತಕ್ಷಣ ಜಾರಿಗೆ ಬರುವಂತೆ ಕೆಲಸದಿಂದ ತೆಗೆದು ಹಾಕಲು ಮುಂದಾಗಿರೋದು ದಿನಗೂಲಿಗಳ ನೂರಾರು ಕುಟುಂಬಗಳನ್ನು ಕಂಗಾಲಾಗಿಸಿದೆ.

ಕಳೆದ 15 ವರ್ಷದಂದ ಈ ಕೆಲಸ ಚೊಕ್ಕಾಗಿ ಮಾಡಿಕೊಂಡು ಹೊರಟಿದ್ದೇವೆ. ಈಗ ನೀವು ಕೆಲಸಕ್ಕೆ ಬರಬೇಡಿ ಎಂದು ಸರಕಾರ ಹೇಳಿದರೆ ನಾವು ಹೋಗಬೇಕೆಲ್ಲಿ? ನಮ್ಮನ್ನು ಹೀಗೆ ಅತಂತ್ರ ಮಾಡಿದರೆ ಹೇಗೆಂದು ದಿನಗೂಲಿ ಭದ್ರಕತಾ ನೌಕರರು ಕಣ್ಣೀರು ಹಾಕುತ್ತಿದ್ದಾರೆ.

ಮಕ್ಕಳೊಂದಿಗೆ ಸೂಕ್ಷ್ಮವಾಗಿರಬೇಕು, ಮಕ್ಕಳ ಸ್ನೇಹಿ ಧೋರಣೆ ಉಳ್ಳವರಾಗಿರಬೇಕು. ದಿನಗೂಲಿ ನೌಕರರು ಇದನ್ನೆಲ್ಲ ತರಬೇತಿಯಲ್ಲಿ ಕಲಿತಿದ್ದಾರೆ. ಈಗ ಪೊಲೀಸರು ಆ ಜಾಗಕ್ಕೆ ಬಂದಲ್ಲಿ ಅವರು ಮಕ್ಕಳ ಸ್ನೇಹಿಯಾಗಿರಲು ಸಾಧ್ಯವೇ? ಯಾಕೆ ಈ ರೀತಿ ದುಡುಕಿನ ಆದೇಶ ಸರಕಾರ ಹೊರಡಿಸಿತೋ? ಎಂದು ಮಕ್ಕಳ ಪಾಲನಾ ಕ್ಷೇತ್ರದಲ್ಲಿರುವ ಅನೇಕ ಹಿರಿಯರು ಸದರಿ ಆದೇಶ ಪುಹ ಪರಿಶೀಲಿಸಿ ದಿನಗೂಲಿಗಳಿಗೆ ಕೈ ಬಿಡದಂತಹ ಕ್ರಮಕ್ಕೆ ಮುಂದಾಗುವಂತೆ ಸರಕಾರವನ್ನು ಆಗ್ರಹಿಸುತ್ತಿದ್ದಾರೆ.

2022ರ ಜುಲೈನಲ್ಲೇ ಬಾಲ ನ್ಯಾಯ ಮಂಡಳಿ ಸಭೆಯಲ್ಲಿನ ಚರ್ಚೆಯಂತೆ ಒಳಾಡಿತ ಇಲಾಖೆಗೆ ಪತ್ರ ಬರೆದು ಕೈಗಾರಿಕಾ ಭದ್ರತಾ ಪಡೆಯನ್ನೇ ಮಕ್ಕಳ ಪಾಲನಾ ಸಂಸ್ಥೆಗಳಿಗೆ ನಿಯೋಜಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಉಪ ಲೋಕಾಯುಕ್ತ ಫಣಿಂದ್ರ ಅವರು ಕೋಲಾರದ ಮಕ್ಕಳ ಪಾಲನಾ ಸಂಸಸ್ಥೆಗಳಿಗೆ ಭೇಟಿ ನೀಡಿದ್ದಾಗ ಕೈಗಾರಿಕಾ ಭದ್ರತಾ ಪಡೆ ನಿಯೋಜನೆ ಬಗ್ಗೆ ಅಭಿಪ್ರಾಯಪಟ್ಟಿದ್ದರು.

ಇವೆಲ್ಲ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ 19 ವೀಕ್ಷಣಾಲಯ, ಪ್ಲೇಸ್‌ ಆಫ್‌ ಸೇಫ್ಟಿ ಸಂಸ್ಥೆಗಳಿಗೆ ಅಗತ್ಯವಿರುವ ಒಟ್ಟು 76 ಹುದ್ದೆಗಳಲ್ಲಿ ಈಗಾಗಲೇ 47 ಮಂಜೂರಾದ ಹುದ್ದೆಗಳೊಂದಿಗೆ ಹೆಚ್ಚುವರಿ 29 ಹುದ್ದೆ ಸೃಜಿಸಲು, ಹಾಗೂ ಸದರಿ ಹುದ್ದೆಗಳನ್ನು ಪೊಲೀಸ್‌ ಇಲಾಖೆಯಿಂದ ನಿಯೋಜನೆ ಮೂಲಕ ಭರ್ತಿ ಮಾಡಲು ಹಾಗೂ ರಾಜ್ಯದಲ್ಲಿರುವ 69 ಮಕ್ಕಳ ಪಾಲನಾ ಸಂಸ್ಥಗಳಿಗೆ 207 ಗೃಹ ರಕ್ಷಕ ಸಿಬ್ಬಂದಿಯನ್ನು ಪಡೆಯಲು ಆರ್ಥಿಕ ಇಲಾಖೆ ಸಹಮತಿಸಿದ್ದರ ಹಿನ್ನೆಲೆಯಲ್ಲಿ ಸದರಿ ಆದೇಶ ಹೊರಡಿಸಲಾಗಿದೆ ಎಂದು ಸರಕಾರ ಆದೇಶದ ಪೀಠಿಕೆಯಲ್ಲಿ ವಿವರಿಸಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ