ಕನ್ನಡಪ್ರಭ ವಾರ್ತೆ ಕಾಳಗಿ
ಎರಡನೇ ತಿರುಪತಿಯಂದೇ ಪ್ರಖ್ಯಾತಿ ಪಡೆದಿರುವ ಸುಗೂರ (ಕೆ) ಗ್ರಾಮದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿನ ವೈಕುಂಠ ಏಕದಶಿ ಕಾರ್ಯಕ್ರಮಕ್ಕೆ 70 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ದ್ವಾದಶಿ ಉತ್ಸವ ಹಾಗೂ ಉತ್ತರ ದ್ವಾರ ದರ್ಶನವು ಅದ್ಧೂರಿಯಾಗಿ ನಡೆಯುತ್ತದೆ.ಪ್ರತಿ ವರ್ಷವೂ ವೈಕುಂಠ ಏಕಾದಶಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಕ್ಷೀರ ಸಾಗರ ಯೋಗ ಮುದ್ರೆಯಲ್ಲಿ ಶೇಷಸಾಯಿ ಮೇಲೆ ಶಯನಿಸಿದ ಶ್ರೀಹರಿಯು ಎದ್ದ ದಿನವೇ ವೈಕುಂಠ ಏಕಾದಶಿಯ ಆಚರಣೆಯ ಪ್ರತೀಕವಾಗಿದೆ.
ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ, ಡಿ.23ರಂದು ಮಧ್ಯರಾತ್ರಿ 1.30ಕ್ಕೆ ದೇಗುಲ ತೆರೆಯಲಾಗುತ್ತದೆ. ತೋಮಾಲ ಸೇವಾ, 3 ಗಂಟೆಗೆ ಮೊದಲ ನೈವೇದ್ಯ, 4 ಗಂಟೆಗೆ ಅಸ್ತನಾಮ್ ಪೂಜೆ, ವೈಕುಂಠ ದ್ವಾರ ಪೂಜೆ , 5 ಗಂಟೆಗೆ ವೈಕುಂಠ ದ್ವಾರ ತೆರೆಯುತ್ತಾರೆ.ಬೆಳಗ್ಗೆ 4 ಗಂಟೆಗೆ ದೇವಸ್ಥಾನದಿಂದ ಪುಷ್ಕರಣಿಯವರೆಗೆ ವೆಂಕಟೇಶ್ವರ ಸ್ವಾಮಿಯ ಮೆರವಣಿಗೆ ನಡೆಯುವುದು. ನಂತರ ಪುಷ್ಕರಣಿಯಿಂದ ತಂದಿರುವ ಜಲದಿಂದ, 5 ಗಂಟೆಗೆ ವೆಂಕಟೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ ತಿರುಪತಿ ತಿರುಮಲ ಸ್ವಾಮಿಯಲ್ಲಿ ಉತ್ಸವದ ಮಾದರಿಯಲ್ಲಿ ನಡೆಯುವುದು.
ಬೆ.6.30ಕ್ಕೆ ಮಹಾಮಂಗಲ ಪೂಜೆ, 7 ಗಂಟೆಗೆ ತುಳಸಿ ಅರ್ಚನೆ, ಹಲವು ಪೂಜೆ ಕೈಂಕರ್ಯಗಳು ಪೂಜ್ಯ ಸನತದಾಸ ಮಹಾರಾಜರ ನೇತೃತ್ವದಲ್ಲಿ ನೆರವೇರುವುದು.ಲಕ್ಷ್ಮೀ ಪದ್ಮಾವತಿ ಸಹಸ್ರ ಪೂಜೆ, ಉತ್ತರ ದ್ವಾರ ದರ್ಶನ ನಡೆಯುವುದು. ವೈಕುಂಠ ದ್ವಾರದಲ್ಲಿ ಸುಮಾರು ಏಳು ಪ್ರಕಾರದ 20 ಕ್ವಿಂಟಲ್‌ನ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗುತ್ತದೆ.
ಡಿ.24ರಂದು, ದ್ವಾದಶಿ ದಿನದಂದು ಬೆಳಗ್ಗೆ ವೆಂಕಟೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ, ಅರ್ಚನೆ, ಮಂಗಳಾರತಿ ನಡೆಯುವುದು. ನಂತರ ದೇವಸ್ಥಾನ ಪಕ್ಕದ ಬೆಟ್ಟದ ಮೇಲೆ ಬಿತ್ತದೆ, ಉಳುಮೆ ಮಾಡದೆ ಬೆಳೆದಿರುವ ವಿಸ್ಮಯಕಾರಿ ಭತ್ತದ ಮಹಾಪ್ರಸಾದ ಮತ್ತು ದೇವಸ್ಥಾನದಲ್ಲಿ ತರಯಾಸಿದ್ದ ಲಡ್ಡುಗಳನ್ನು ವಿತರಿಸಲಾಗುವುದು. ರಾತ್ರಿ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರಿಂದ ಹರಿ-ಹರ ಭಜನೆ ಕೀರ್ತನೆ ನಡೆಯಲಿವೆ. ಈ ಉತ್ಸವಕ್ಕೆ ಕಲ್ಯಾಣ ಕರ್ನಟಕ, ಆಂದ್ರ ಮತ್ತು ಮಹಾರಾಷ್ಟ್ರ ಸೇರಿ ವಿವಿಧ ಭಾಗದ ಭಕ್ತಾದಿಗಳು ಬರಲಿದ್ದಾರೆ.ರಾತ್ರಿ 11 ಗಂಟೆಗೆ ವೈಕುಂಠ ದ್ವಾರ ಮುಚ್ಚಲಾಗುವುದು. ನಂತರ ಶಯನ ಸೇವೆ ನೆರವೇರುವುದು. ಅರ್ಚಕ ಕೇಶವದಾಸ ಮಹಾರಾಜ, ಬಾಲಕದಾಸ ನಾಗಾಸಾಧು, ಶಿವಂ ಶಾಸ್ತ್ರೀ, ಸುಭ್ರಮಣ್ಣ್ಯಂ ಶಾಸ್ತ್ರೀ, ತಿರುಮಲ ತಿರುಪತಿ ಸಂಚಾಲಕ ಕೃಷ್ಣದಾಸ ಮಹಾರಾಜ, ಸನ್ನಥದಾಸ ಮಹಾರಾಜ, ಪರಮೇಶ್ವರ ಪಾಟೀಲ, ಅಶೋಕ ರೆಮ್ಮಣಿ, ದತ್ತು ಮುಚ್ಚಟ್ಟಿ, ಸಿದ್ದು ಕೇಶ್ವರ, ನಿಂಗಯ್ಯ ಗುತ್ತೇದಾರ, ಬಸವರಾಜ ಪೂಜಾರಿ, ಖೇಮು ರಾಠೋಡ, ನರಸಿಂಗ್ ಚವ್ಹಾಣ, ಅಣ್ಣರಾವ ರಾಠೋಡ, ಸಂಜು ರಾಠೋಡ, ಜಗನ್ನಾಥ ಕೊಳ್ಳಿ, ಭೀಮಶಾ ಅಂಕನ, ಭೀಮರಾವ ರಾಠೋಡ, ಭೀಮರಾವ ರಾಠೋಡ, ದೀಲಿಪ ಪರತನ್, ಶಿವಕುಮಾರ ಕಲಶೇಟ್ಟಿ, ದಾವುದ್ ಮೋಜಾವರ, ಮೋಹನ ಚವ್ಹಾಣ, ಅನೀಲ ಚವ್ಹಾಣ, ಶಿವನಂದ ಹಡಪಾದ, ಶಾಮರಾವ್ ಒಡೆಯರಾಜ, ಬಾಬುರಾವ ಕುಂಬಾರ ಉತ್ಸವದ ಉಸ್ತುವಾರಿಯಲ್ಲಿರುತ್ತಾರೆ.