ವಿಜಯಪುರ: ನಗರಕ್ಕೆ ನೀರು ಪೂರೈಸುವ ಭೂತನಾಳ ಕೆರೆಗೆ ಮತ್ತಷ್ಟು ನೀರು ಹರಿಸಲಾಗುತ್ತಿದ್ದು, ಅರಕೇರಿ ಏತ ನೀರಾವರಿ ಮೂಲಕವೂ ಇಂದಿನಿಂದ ನೀರು ಬಿಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಈಗ ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ದೃಷ್ಟಿಯಿಂದ ಅರಕೇರಿ ಏತ ನೀರಾವರಿ ಮೂಲಕ ನೀರು ಹರಿಸುವಂತೆ ಸೂಚಿಸಿದ್ದೇನೆ. ಅದರಂತೆ, ಕೆರೆಯ ಮತ್ತೊಂದು ಭಾಗಕ್ಕೆ ಇಂದಿನಿಂದ ನೀರು ಹರಿಸಲಾಗುತ್ತಿದೆ. ವಿದ್ಯುತ್ ಮೋಟಾರ್‌ಗಳನ್ನು ಬಳಸದೆ ನೈಸರ್ಗಿಕವಾಗಿ ನೀರು ಹರಿದು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಭೂತನಾಳ ಕೆರೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಾಗಲಿದೆ. ಹೀಗಾಗಿ ಈ ಬಾರಿಯ ಬೇಸಿಗೆಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದೆಂಬ ವಿಶ್ವಾಸ ನನಗಿದೆ.
ಈಗ ಭೂತನಾಳ ಕೆರೆಗೆ ನೀರು ತುಂಬಿಸುತ್ತಿರುವುದರಿಂದ ಮುಂದಿನ ಮೂರು ತಿಂಗಳು ಬೇಸಿಗೆಯಲ್ಲಿ ಕುಡಿಯಲು ನೀರಿನ ಸಮಸ್ಯೆ ಆಗುವುದಿಲ್ಲ ಎಂದು ಸಚಿವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.