ಕನ್ನಡಪ್ರಭ ವಾರ್ತೆ ಮೈಸೂರು
ಮೊದಲ ತಂಡದಲ್ಲಿ ಆಗಮಿಸಿರುವ ಅಂಬಾರಿ ಆನೆ ಅಭಿಮನ್ಯು, ಧನಂಜಯ, ಗೋಪಿ, ಭೀಮ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮಿ ಮತ್ತು ಲಕ್ಷ್ಮಿ ಆನೆಗಳು ಅರಣ್ಯ ಭವನ ಆವರಣದಲ್ಲಿ 2 ದಿನಗಳ ವಿಶ್ರಾಂತಿ ಪಡೆದು, ಅರಮನೆಯತ್ತ ಹೊರಟವು.
ಅರಮನೆಗೆ ತೆರಳುವ ಮುನ್ನ ಅರಣ್ಯ ಭವನದಲ್ಲಿ ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಕಬ್ಬು, ಬೆಲ್ಲ ನೀಡಲಾಯಿತು. ಬಳಿಕ ಆನೆಗಳಿಗೆ ಹುಲಿ ಯೋಜನೆ ನಿರ್ದೇಶಕ ಡಾ.ಪಿ. ರಮೇಶ್ ಕುಮಾರ್, ಮೈಸೂರು ವೃತ್ತ ಸಿಎಫ್ ಡಾ.ಎಂ. ಮಾಲತಿಪ್ರಿಯಾ, ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ಮೊದಲಾದವರು ಪುಷ್ಪಾರ್ಚನೆ ಮೂಲಕ ಬೀಳ್ಕೊಟ್ಟರು. ಅರಣ್ಯ ಭವನದಿಂದ ಹೊರಟ ಆನೆಗಳು ಕಾಲ್ನಡಿಗೆಯಲ್ಲಿ ಅಶೋಕಪುರಂ, ಅಶೋಕ ವೃತ್ತ, ಆರ್.ಟಿ.ಒ ವೃತ್ತ, ಜೆಎಲ್ ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್ ಹೌಸ್, ಬಿಎನ್ ರಸ್ತೆ ಮೂಲಕ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಂದವು.ಆನೆಗಳು ಸಾಗಿ ಬಂದ ಮಾರ್ಗದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಿದ್ದರು. ಆನೆಗಳ ಗಾಂಭಿರ್ಯದ ನಡಿಗೆಯನ್ನು ಸಾರ್ವಜನಿಕರು ಕಣ್ತುಂಬಿಕೊಂಡರು, ತಮ್ಮ ಮೊಬೈಲ್ ನಲ್ಲಿ ಆನೆಗಳ ಫೋಟೋ, ವಿಡಿಯೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.