ಕನ್ನಡಪ್ರಭ ವಾರ್ತೆ ತುಮಕೂರು
ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸರ್ವೇಲೆನ್ಸ್ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಈ ಜಾಗೃತಿ ಜಾಥಾಕ್ಕೆ ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ರಾಮೇಗೌಡ, ಡಾ. ಚೇತನ್ ಹಾಗೂ ಐ.ಎಮ್.ಎ. ಕಾರ್ಯದರ್ಶಿ ಡಾ. ಮಹೇಶ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ರಾಮೇಗೌಡ, ಈ ಜಾಥಾವು ಜಿಲ್ಲಾ ಆಸ್ಪತ್ರೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದವರೆಗೆ ಸಂಚರಿಸಲಿದೆ ಎಂದರು. ವಿಶ್ವದೆಲ್ಲೆಡೆ ಫೆ.4 ವಿಶ್ವ ಕ್ಯಾನ್ಸರ್ ದಿನಾಚರಣೆಯಾಗಿ ಆಚರಣೆ ಮಾಡುತಿದ್ದೇವೆ. ಕಾರಣ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ತುಂಬಾ ವೇಗವಾಗಿ ಹರಡುತ್ತಿದ್ದು ಇದು ಒಂದು ಮಾರಕ ಕಾಯಿಲೆ ಈ ಮಾರಕ ಕಾಯಿಲೆ ವೇಗವಾಗಿ ಹರಡುತ್ತಿರುವುದರಿಂದ ಸಾವು ನೋವುಗಳು ಹೆಚ್ಚು ಸಂಭವಿಸುತ್ತಿವೆ ವಿಶ್ವದಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿರುವುದು ಕ್ಯಾನ್ಸರ್ ಕಾಯಿಲೆಯಿಂದಲೇ ಎಂದು ತಿಳಿಸಿದರು.
ಡಾ. ಚೇತನ್ ಮಾತನಾಡಿ, ಕಳೆದ ಒಂದು ಒಂದೂವರೆ ದಶಕದಿಂದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸುತ್ತಿದೆ ಗಾಳಿ ನೀರು ಆಹಾರದಲ್ಲಿರುವ ಮಲಿನತೆ ಆಹಾರದಲ್ಲಿ ಟೆಸ್ಟಿಂಗ್ ಪೌಡರ್, ಜಂಕ್ ಫುಡ್ ಅತಿಯಾದ ಸೇವನೆ, ಮದ್ಯಪಾನ ಮಾದಕ ವಸ್ತುಗಳು ಮನುಷ್ಯನ ಆರೋಗ್ಯದ ಮೇಲೆ ತುಂಬಾ ಹೆಚ್ಚಿನ ಪರಿಣಾಮ ಬೀರುತ್ತವೆ ಎಂದರು. ಈ ಕ್ಯಾನ್ಸರ್ ಕಾಯಿಲೆಯಿಂದ ತಗಲುವ ಖರ್ಚು ವೆಚ್ಚ ಕೆಳ ದರ್ಜೆ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಭಾರಿ ಆಘಾತ ಉಂಟಾಗುತ್ತದೆ ಎಂದರು. ಆಯುಷ್ಮಾನ್ ಭಾರತ್ ನಿಂದ ಒಂದು ಆಸ್ಪತ್ರೆಯಿಂದ ಸುಮಾರು 4 ಕ್ಯಾನ್ಸರ್ ಕೇಸ್ ಗಳು ದಾಖಲಾಗುತ್ತಿವೆ ಎಂದರು.ಸ್ಮಾರ್ಟ್ ಸಿಟಿ ವತಿಯಿಂದ ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ತುಮಕೂರು ಜಿಲ್ಲೆ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಜಾಥಾದಲ್ಲಿ ಜಿಲ್ಲಾ ಆಸ್ಪತ್ರೆಯ ಶುಶ್ರೂಷ ಶಾಲೆಯ ಬೋಧಕ ವರ್ಗ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಎನ್‌ಸಿಸಿ ವಿದ್ಯಾರ್ಥಿಗಳು, ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ. ಘಟಕದ ಡಾ. ಮಂಜುನಾಥ್ ಗುಪ್ತ, ಡಾ. ರಾಹುಲ್, ಡಾ. ರಾಕೇಶ್, ಡಾ. ಪವಿತ್ರಾ, ಡಾ. ನಾಗರಾಜ್ ಪಾಟೀಲ್ ಹಾಗೂ ಜಿಲ್ಲಾ ಆಸ್ಪತ್ರೆಯ ತಜ್ಞವೈದ್ಯರಾದ ಡಾ. ಮಹಾಲಕ್ಷ್ಮಮ್ಮ, ಡಾ. ಪ್ರಸನ್ನಕುಮಾರ್ ಡಾ. ವೆಂಕಟೇಶ್ ಬಾಬು ಮತ್ತಿತರರು ಹಾಜರಿದ್ದರು.