ಸಮಗ್ರ ಅಭಿವೃದ್ಧಿ ಸಂಕಲ್ಪದಲ್ಲಿ ಬಹುಪಾಲು ಯಶಸ್ವಿ: ಸಂಸದ ಬಿ.ವೈ ರಾಘವೇಂದ್ರ

KannadaprabhaNewsNetwork |  
Published : Jan 17, 2026, 02:45 AM IST
ಪೊಟೊ: 16ಎಸ್‌ಎಂಜಿಕೆಪಿ05ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ಈ ಹಿಂದೆ ವಿದೇಶಗಳಿಗೆ ಹೋಗಿ ಬಂದವರು ಆ ದೇಶ ಹಾಗಿದೆ, ಈ ದೇಶ ಹೀಗಿದೆ ಎಂದು ಹೇಳುತ್ತಿದ್ದರು. ಆದರೆ, ಈಗ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಮ್ಮ ದೇಶವೂ ಆ ಮಟ್ಟಿಗೆ ಇದೆ ಎನ್ನುವಂತೆ ದೇಶವನ್ನು ಅಭಿವೃದ್ಧಿ ಮಾಡಲಾಗುತ್ತಿದೆ‌ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಹಿಂದೆ ವಿದೇಶಗಳಿಗೆ ಹೋಗಿ ಬಂದವರು ಆ ದೇಶ ಹಾಗಿದೆ, ಈ ದೇಶ ಹೀಗಿದೆ ಎಂದು ಹೇಳುತ್ತಿದ್ದರು. ಆದರೆ, ಈಗ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಮ್ಮ ದೇಶವೂ ಆ ಮಟ್ಟಿಗೆ ಇದೆ ಎನ್ನುವಂತೆ ದೇಶವನ್ನು ಅಭಿವೃದ್ಧಿ ಮಾಡಲಾಗುತ್ತಿದೆ‌ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಂಕಲ್ಪ ಹೊಂದಿ ಅದರಲ್ಲಿ ಬಹುಪಾಲು ಯಶಸ್ವಿಯಾಗಿದ್ದೇನೆ ಎಂದರು.

ಸಂಸದನಾಗಿ ನಾನು ನಾಲ್ಕನೇ ಬಾರಿ ಆಯ್ಕೆಯಾಗಿದ್ದೇನೆ. ಇದಕ್ಕೆ ಎಲ್ಲರ ಸಹಕಾರವಿದೆ. ಪತ್ರಕರ್ತರ ಮಾರ್ಗದರ್ಶನವೂ ಇದೆ. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಮತ್ತು ಕೇಂದ್ರದ ಹಲವು ಯೋಜನೆಗಳ ಅಡಿಯಲ್ಲಿ ಬೈಂದೂರು ಸೇರಿದಂತೆ ಇಡೀ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ಪಣತೊಟ್ಟಿದ್ದೇನೆ. ಸಾಕಷ್ಟು ಅಭಿವೃದ್ಧಿ ಕಾರ್ಯವೂ ನನ್ನ ಅವಧಿಯಲ್ಲಿ ಆಗಿದೆ. ಆಗಬೇಕಾದದ್ದೂ ಇದೆ. ಎಲ್ಲರ ಸಹಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಕಂಕಣಬದ್ಧನಾಗಿದ್ದೇನೆ ಎಂದರು.

ಪ್ರಧಾನಿ ಮೋದಿಯವರ ಸ್ವಚ್ಛಭಾರತದ ಅಡಿಯಲ್ಲಿ ಪ್ರತೀ ಹಳ್ಳಿಗೂ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಸ್ವಚ್ಛತೆ, ಅನಿಲ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ರಾಷ್ಟ್ರೀಯ ಹೆದ್ದಾರಿ, ರಸ್ತೆಗಳು, ಮನೆ, ಮೊಬೈಲ್ ಟವರ್‌ಗಳು, ರೈಲ್ವೆ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡು ಸಾಕಷ್ಟು ಅಭಿವೃದ್ಧಿಗಳನ್ನು ಮಾಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಕೂಡ ಹಲವು ಅಭಿವೃದ್ಧಿಗಳು ಈಗಾಗಲೇ ಮುಗಿದಿವೆ ಎಂದು ಹೇಳಿದರು.

ಶಿವಮೊಗ್ಗಕ್ಕೆ ವಂದೇ ಭಾರತ್ ರೈಲನ್ನು ತರುವ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಆದರೆ, ಈ ರೈಲು ಆರಂಭವಾಗಲು ಕೋಟೆಗಂಗೂರಿನ ರೈಲ್ವೆ ಟರ್ಮಿನಲ್ ಕಾಮಗಾರಿ ಪೂರ್ಣಗೊಳ್ಳುವುದು ಅತ್ಯಗತ್ಯವಾಗಿದೆ. ವಂದೇ ಭಾರತ್ ರೈಲಿಗೆ ಅಗತ್ಯವಿರುವ ಶುಚಿಗೊಳಿಸುವಿಕೆ, ನಿರ್ವಹಣೆ ಮತ್ತು ಪ್ಲಾಟ್‌ಫಾರ್ಮ್ ಸೌಲಭ್ಯಗಳು ಕೋಟೆಗಂಗೂರು ಟರ್ಮಿನಲ್‌ನಲ್ಲಿ ಲಭ್ಯವಿರಲಿವೆ. ಅಲ್ಲಿಯವರೆಗೆ ತಾಂತ್ರಿಕ ಕಾರಣಗಳಿಂದಾಗಿ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದು ಸ್ವಲ್ಪ ವಿಳಂಬವಾಗಬಹುದು ಎಂದರು.

ಕೋಟೆಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಟರ್ಮಿನಲ್ ಶಿವಮೊಗ್ಗ ನಗರಕ್ಕೆ ಪರ್ಯಾಯ ಕೇಂದ್ರವಾಗಲಿದೆ. ಈ ಟರ್ಮಿನಲ್ ಉದ್ಘಾಟನೆಯಾದ ನಂತರ ಶಿವಮೊಗ್ಗದಿಂದ ಬೆಂಗಳೂರು ಸೇರಿದಂತೆ ಇತರ ಪ್ರಮುಖ ನಗರಗಳಿಗೆ ಹೆಚ್ಚಿನ ರೈಲುಗಳನ್ನು ಆರಂಭಿಸಲು ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲು ಹಾದಿ ಸುಗಮವಾಗಲಿದೆ ಎಂದರು.

ಶಿವಮೊಗ್ಗ ನಗರದ ಗುಂಡಪ್ಪ ಶೆಡ್, ವಿದ್ಯಾನಗರದ ಅಂಡರ್ ಪಾಸ್ ಕಾಮಗಾರಿಗಳು ಶೀಘ್ರ ಆರಂಭವಾಗಲಿವೆ. ಅಲ್ಲದೆ, ಫ್ರೀಡಂ ಪಾರ್ಕ್ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಿ.ಆರ್.ಎಫ್. ಅನುದಾನದಡಿ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಬಜೆಟ್‌ನಲ್ಲಿ ಒಪ್ಪಿಗೆ ದೊರೆತಿದೆ ಎಂದು ವಿವರಿಸಿದರು.

ವಿಶ್ವಕರ್ಮ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 14,143 ಕುಶಲಕರ್ಮಿಗಳಿಗೆ ತರಬೇತಿ ನೀಡಲಾಗಿದೆ. ಫಲಾನುಭವಿಗಳನ್ನು ಆಯ್ಕೆಮಾಡಿ, 55 ಕೋಟಿ ರು. ಸಾಲ ನೀಡಲಾಗಿದೆ. 8128 ಕಿಟ್ ವಿತರಿಸಲಾಗಿದೆ. ಹಾಗೆಯೇ 247 ಕಾಮಗಾರಿಗಳ ಮೂಲಕ 1177 ಕಿಲೋಮೀಟರ್ ಗ್ರಾಮೀಣ ರಸ್ತೆಯನ್ನು, 528 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೊಸ ಬಜೆಟ್‌ನಲ್ಲಿಯೂ ಸಹ 380 ಕೋಟಿ ಬೇಡಿಕೆಯನ್ನು ಸಲ್ಲಿಸಿದ್ದೇನೆ. ಜಿಲ್ಲೆಯಲ್ಲಿ 398 ಬಿ.ಎಸ್.ಎನ್.ಎಲ್. ಟವರ್‌ಗಳನ್ನು ನಿರ್ಮಿಸುವ ಉದ್ದೇಶ ಹೊಂದಿದ್ದು, ಈಗಾಗಲೇ 232 ಮುಗಿದಿವೆ ಎಂದು ಮಾಹಿತಿ ನೀಡಿದರು.

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಗೆ ಬೀಗ ಹಾಕುವುದನ್ನು ನಾನು ತಪ್ಪಿಸಿದ್ದೇನೆ. ಅಲ್ಲಿ ಇನ್ನೂ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರದ ಅನುದಾನದಿಂದ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿದೆ. ಹಾಗೆಯೇ ಜಿಲ್ಲೆಯ ಎಲ್ಲಾ ಕೋರ್ಟ್‌ಗಳಲ್ಲಿ ಪೀಠೋಪಕರಣಕ್ಕಾಗಿ ತಲಾ 25 ಲಕ್ಷ ರು. ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ಮತ್ತು ಸುಮಾರು 100 ಕೋಟಿ ರು. ವೆಚ್ಚದಲ್ಲಿ ಮಳೆಮಾಪನ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಬಹಳ ದಿನಗಳಿಂದ ನಿರೀಕ್ಷೆಯಲ್ಲಿರುವ ಎಫ್‌ಎಂ ಕೇಂದ್ರ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಸಿಗಂದೂರು ಸೇತುವೆಯಂತೆ ಹಸಿರುಮಕ್ಕಿ ಸೇತುವೆಗೂ ಕೂಡ ಬಿಜೆಪಿ ಅವಧಿಯಲ್ಲಿ ಹಣ ನೀಡಲಾಗಿತ್ತು . ವಿಮಾನ ನಿಲ್ದಾಣದಲ್ಲಿ ಬಾಕಿ ಉಳಿದಿರುವ ಕೆಲಸವನ್ನು ಶೀಘ್ರವೇ ಮುಗಿಸಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರದ ಸಹಕಾರ ಕೂಡ ಕೇಳಲಾಗಿದೆ ಎಂದು ವಿವರಿಸಿದರು.

ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ, ಸಂಪರ್ಕ ರಸ್ತೆಗಳು, ಮೊಬೈಲ್ ಟವರ್‌ಗಳು, ಗ್ರಾಮೀಣ ರಸ್ತೆ, ಹೊಸ ರೈಲುಮಾರ್ಗ, ವಿಐಎಸ್‌ಎಲ್ ಕಾರ್ಖಾನೆ ಉಳುವು ಸೇತುವೆ, ಕುಡಿಯುವ ನೀರಿನ ಯೋಜನೆ, ಎಂಆರ್‌ಎಸ್‌ನಲ್ಲಿ ರಿಂಗ್‌ರೋಡ್ ಅಲ್ಲಿ ಕೆಳಸೇತುವೆ, ಹೊಸ ಆಸ್ಪತ್ರೆ ಇವೆಲ್ಲವೂ ನನ್ನ ಅವಧಿಯಲ್ಲಿ ಆಗಿದೆ ಎಂದರು.

ಸಂವಾದದಲ್ಲಿ ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಸಂಘದ ಜಿಲ್ಲಾಧ್ಯಕ್ಷ ಎಚ್.ಯು.ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ ಇದ್ದರು.

ಈ ಬಹುನಿರೀಕ್ಷಿತ ರೈಲ್ವೆ ಮಾರ್ಗದ ಕಾಮಗಾರಿಗೆ ಸಂಬಂಧಿಸಿದಂತೆ ಈಗಾಗಲೇ ಶೇ.75ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ರೈತರಿಗೆ ಪರಿಹಾರದ ಹಣವನ್ನು ವಿತರಿಸಲು ಇನ್ನೂ ಸುಮಾರು 100 ಕೋಟಿ ರುಪಾಯಿಗಳ ಅನುದಾನದ ಅವಶ್ಯಕತೆಯಿದೆ. ಈ ಭೂಸ್ವಾಧೀನ ಪ್ರಕ್ರಿಯೆಯು ಒಟ್ಟಾರೆ ಶೇ.90ರಷ್ಟು ಪೂರ್ಣಗೊಂಡ ತಕ್ಷಣವೇ ರೈಲ್ವೆ ಇಲಾಖೆಯು ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಿದೆ.

-ಬಿ.ವೈ.ರಾಘವೇಂದ್ರ, ಸಂಸದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್ ಮಕ್ಕಳ ಸಮಯ, ಮನಸ್ಸನ್ನು ಹಾಳು ಮಾಡುತ್ತಿದೆ: ಪಿ.ಬಿ.ಶ್ರೀಕಾಂತ್ ಬೇಸರ
ಸಕಲೇಶಪುರದಲ್ಲಿ ಸಚಿವ ಕೃಷ್ಣ ಬೈರೇಗೌಡ ಜನಸ್ಪಂದನ ಕಾರ್ಯಕ್ರಮ