ರಾಜ್ಯ ಮತ್ತು ಹೊರರಾಜ್ಯಗಳಲ್ಲಿ 33 ಕಳ್ಳತನ ಪ್ರಕರಣಗಳಲ್ಲಿ ಪೊಲೀಸರು ಹುಡುಕುತ್ತಿದ್ದ ಕುಖ್ಯಾತ ಅಂತಾರಾಜ್ಯ ಕಳವು ಆರೋಪಿ ಉಮೇಶ್ ಬಳೆಗಾರ ಯಾನೆ ಉಮೇಶ್ ಪಿ. ಯಾನೆ ಉಮೇಶ್ ರೆಡ್ಡಿ (47)ಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಕಾಪು: ರಾಜ್ಯ ಮತ್ತು ಹೊರರಾಜ್ಯಗಳಲ್ಲಿ 33 ಕಳ್ಳತನ ಪ್ರಕರಣಗಳಲ್ಲಿ ಪೊಲೀಸರು ಹುಡುಕುತ್ತಿದ್ದ ಕುಖ್ಯಾತ ಅಂತಾರಾಜ್ಯ ಕಳವು ಆರೋಪಿ ಉಮೇಶ್ ಬಳೆಗಾರ ಯಾನೆ ಉಮೇಶ್ ಪಿ. ಯಾನೆ ಉಮೇಶ್ ರೆಡ್ಡಿ (47)ಯನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈತ ಮೂಲತಃ ತಮಿಳುನಾಡಿನವನಾಗಿದ್ದು, ಪ್ರಸ್ತುತ ಇಲ್ಲಿನ ಮಲ್ಲಾರು ಗ್ರಾಮದ ಫಕೀರನಕಟ್ಟೆಯಲ್ಲಿ ವಾಸವಾಗಿದ್ದ. ಡಿ. 4 ರಂದು ಹಗಲು ವೇಳೆ ಇಲ್ಲಿನ ಮಲ್ಲಾರು ಗ್ರಾಮದ ರಾಘವೇಂದ್ರ ಕಿಣಿ ಅವರು ಮನೆಗೆ ಬೀಗ ಹಾಕಿದ ಕೀಯನ್ನು ವಿದ್ಯುತ್ ಮೀಟರ್ ಬಾಕ್ಸ್‌ನೊಳಗೆ ಇಟ್ಟು ಹೊರಹೋಗಿದ್ದರು. ಈ ಕೀ ಬಳಸಿ ಮನೆಯ ಬೀಗ ತೆಗೆದು ಒಳಹೊಕ್ಕ ಕಳ್ಳರು ಸುಮಾರು 3.90 ಲಕ್ಷ ಮೌಲ್ಯದ 72 ಗ್ರಾಂ ಚಿನ್ನದ ಆಭರಣಗಳು ಹಾಗೂ ಸುಮಾರು 1,500 ರು. ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಕಾಪು ವೃತ್ತ ನಿರೀಕ್ಷಕ ಅಝಮತ್ ಅಲಿ ಜಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.ಕಿಣಿ ಅವರು ಮೀಟರ್ ಬಾಕ್ಸ್‌ನಲ್ಲಿ ಕೀ ಇಡುವುದು ಗೊತ್ತಿರುವ ಕಳ್ಳರೇ ಈ ಕೃತ್ಯ ಎಸಗಿದ್ದಾರೆ, ಆದ್ದರಿಂದ ಅವರು ಸ್ಥಳಿಯರೇ ಆಗಿರಬೇಕು ಎನ್ನುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಅದೇ ಗ್ರಾಮದಲ್ಲಿ ಆರೋಪಿ ಉಮೇಶ್ ರೆಡ್ಡಿಯನ್ನು ಪತ್ತೆ ಹಚ್ಚಿ, ಶುಕ್ರವಾರ ಬಂಧಿಸಿದ್ದಾರೆ. ಉಮೇಶ್ ಬಳೆಗಾರ ವಿರುದ್ಧ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 16 ಪ್ರಕರಣಗಳು ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 8 ಪ್ರಕರಣಗಳಲ್ಲಿ ಈಗಾಗಲೇ ಶಿಕ್ಷೆಯಾಗಿದೆ.ಕೇರಳದ ತನ್ನಿಪಲಂ, ಮಾವೂರು, ತ್ರಿಶೂರ್ ಮತ್ತು ಕರ್ನಾಟಕದ ದಕ ಜಿಲ್ಲೆಯ ಸುಬ್ರಹ್ಮಣ್ಯ, ಬೆಳ್ತಂಗಡಿ, ಪುತ್ತೂರು ನಗರ, ಮೂಡಬಿದ್ರೆ, ಉಕ ಜಿಲ್ಲೆಯ ಶಿರ್ಸಿ ಗ್ರಾಮಾಂತರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಠಾಣೆಗಳಲ್ಲಿ ಜಾಮೀನುರಹಿತ ಬಂಧನ ವಾರಂಟ್‌ಗಳು ಜಾರಿಯಾಗಿವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಠಾಣೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣೆಯಲ್ಲಿಯೂ ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.