ಮಹಾತ್ಮರೆಲ್ಲರಿಗೂ ತಾಯಿಯೇ ಪ್ರೇರಣೆ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ಮಗು ತಪ್ಪು ದಾರಿ ತುಳಿಯದಂತೆ ನೋಡಿಕೊಳ್ಳುವುದು ತಾಯಿಯ ಜವಾಬ್ದಾರಿ. ಉನ್ನತ ಮಟ್ಟದ ಸಂಸ್ಕೃತಿ, ಸ್ತ್ರೀಯರ ಬಗ್ಗೆ ಗೌರವ, ನೈತಿಕತೆ ಮೂಡಿಸುವ ಕೆಲಸವನ್ನು ತಾಯಿಯೇ ಮಾಡಬೇಕು. ಪ್ರಾಣ ಹೋದರೂ ತಪ್ಪು ಹೆಜ್ಜೆ ಇಡದಂತೆ ತಾಯಿ ಪ್ರೇರಣೆ ನೀಡಬೇಕು.

ಬಳ್ಳಾರಿ: ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಶಿವಾಜಿ ಮಹಾರಾಜ್, ವಿಜ್ಞಾನಿ ಐನ್‌ಸ್ಟೀನ್ ಸೇರಿದಂತೆ ಜಗತ್ತು ಬೆಳಗಿದ ಶೇ. 90ರಷ್ಟು ಮಹನೀಯರು ತಾಯಿಯಿಂದಲೇ ಪ್ರೇರಣೆಗೊಂಡವರು. ತಾಯಿ ನೀಡಿದ ಸಂಸ್ಕಾರ ಹಾಗೂ ಪ್ರೇರಣೆಯಿಂದಾಗಿಯೇ ಮಕ್ಕಳು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.

ನಗರದ ರಾಘವ ಕಲಾಮಂದಿರದಲ್ಲಿ ವಿವೇಕ ತೋರಣ ಹಮ್ಮಿಕೊಂಡಿದ್ದ ಮಾತೃಶಕ್ತಿ ಸಮಾವೇಶದಲ್ಲಿ ಮಕ್ಕಳನ್ನು ಬೆಳೆಸುವುದು ಹೇಗೆ ಎಂಬುದರ ಕುರಿತು ಉಪನ್ಯಾಸ ನೀಡಿದರು.

ಮಗು ತಪ್ಪು ದಾರಿ ತುಳಿಯದಂತೆ ನೋಡಿಕೊಳ್ಳುವುದು ತಾಯಿಯ ಜವಾಬ್ದಾರಿ. ಉನ್ನತ ಮಟ್ಟದ ಸಂಸ್ಕೃತಿ, ಸ್ತ್ರೀಯರ ಬಗ್ಗೆ ಗೌರವ, ನೈತಿಕತೆ ಮೂಡಿಸುವ ಕೆಲಸವನ್ನು ತಾಯಿಯೇ ಮಾಡಬೇಕು. ಪ್ರಾಣ ಹೋದರೂ ತಪ್ಪು ಹೆಜ್ಜೆ ಇಡದಂತೆ ತಾಯಿ ಪ್ರೇರಣೆ ನೀಡಬೇಕು. ವಿನಾಕಾರಣ ತನ್ನ ವಿರುದ್ಧ ದೌರ್ಜನ್ಯ ಮಾಡಿದವರ ವಿರುದ್ಧ ಹೋರಾಡುವ ಮನೋಭಾವ ಸಹ ತಾಯಿಯಾದವಳು ಬೆಳೆಸಬೇಕು ಎಂದರು.

ತಿರಸ್ಕಾರದ ಮಾತು ಬೇಡ:

ಮಕ್ಕಳು ಸೂಕ್ಷ್ಮರೀತಿಯಲ್ಲಿ ತಮ್ಮೊಳಗಿನ ವ್ಯಕ್ತಿತ್ವ ತೋರಿಸುತ್ತಲೇ ಇರುತ್ತಾರೆ. ತೆರೆದ ಕಣ್ಣುಗಳಿಂದ ಪೋಷಕರು ಇದನ್ನು ಗಮನಿಸಬೇಕು. ಅಪ್ಪಿ ತಪ್ಪಿಯೂ ಮಕ್ಕಳ ಬಗ್ಗೆ ತಿರಸ್ಕಾರದ ಮಾತುಗಳನ್ನಾಡಬಾರದು. ಶಾಲೆಯಲ್ಲಿ ಸಿಗುವ ಅಂಕಗಳಿಂದ ಮೂರು ಕಾಸಿನ ಪ್ರಯೋಜನವಿಲ್ಲ. ಜೀವನದಲ್ಲಿ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ತುಂಬಿ. ಅಂಕ ಪಡೆದವರೆಲ್ಲ ನ್ಯಾಯನೀತಿಯಿಂದ ಬದುಕುತ್ತಿದ್ದಾರೆ ಎಂದೆನ್ನುಕೊಳ್ಳಬೇಡಿ. ಮನೆಯಲ್ಲಿ ಉತ್ತಮ ಸಂಸ್ಕಾರ ಪಡೆದ ಮಗು, ಅತಿ ಹೆಚ್ಚು ಅಂಕ ಪಡೆದ ಮಗುವಿಗಿಂತಲೂ ಉತ್ತಮನಾಗಿ ಬಾಳುತ್ತಾನೆ ಎಂದರು.

ಬಾಲ್ಯದಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಳ್ಳುತ್ತಲೇ ಇರುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿ. ಆರು ತಿಂಗಳ ಮಗು ಪ್ರತಿಯೊಂದನ್ನು ಗಮನಿಸುತ್ತದೆ ಎಂಬುದು ಪೋಷಕರಿಗೆ ಗೊತ್ತಿರಲಿ. ಮಕ್ಕಳ ಮುಂದೆ ಸಂಸಾರದ ಕಷ್ಟಗಳನ್ನು ಮಾತನಾಡಬಾರದು. ಮಕ್ಕಳ ಮುಂದೆ ಜಗಳ ಮಾಡಬಾರದು. ಅವಾಚ್ಯ ಶಬ್ದಗಳನ್ನು ಬಳಸಬಾರದು. ಬೇರೆಯವರ ಬಗ್ಗೆ ಕೆಟ್ಟ ಮಾತುಗಳನ್ನಾಡಬಾರದು. ಮಕ್ಕಳು ಮನೆಯಲ್ಲಿದ್ದಾಗ ತಂದೆ- ತಾಯಿ ರೀತಿ ಇರಬೇಕೇ ಹೊರತು, ಗಂಡ- ಹೆಂಡತಿಯಂತೆ ಇರಬಾರದು. ಮಹಾತ್ಮರು, ಸಂತರು, ವಿಜ್ಞಾನಿಗಳು, ಮಹಾನ್ ವಿದ್ಯಾವಂತರು, ವಿದ್ವಾಂಸರನ್ನು ಮಕ್ಕಳ ಎದುರು ಹೊಗಳಬೇಕೇ ವಿನಾ, ಸಿನಿಮಾ ನಟರು, ಹೇಗೋಗೋ ಹಣ ಮಾಡಿದವರನ್ನು ಹೊಗಳಬಾರದು. ಮಕ್ಕಳ ಬೆಳವಣಿಗೆ ವಿಚಾರದಲ್ಲಿ ಒಂದಷ್ಟು ಎಡವಿದರೂ ಅವರು ಬೆಳೆದು ದೊಡ್ಡವರಾದ ಬಳಿಕ ನಿಮಗೆ ನಯಾಪೈಸೆ ಗೌರವ ಕೊಡಲ್ಲ ಎಂದರು.

ಮಕ್ಕಳಿಗೆ ಓದಿನ ಗೀಳು ಹತ್ತಲಿ:

ಪ್ರತಿ ಮನೆಯಲ್ಲೂ ಗ್ರಂಥಾಲಯ ಇರಬೇಕು. ಪೋಷಕರು ಓದಿನಲ್ಲಿ ತೊಡಗಿಸಿಕೊಳ್ಳಿ. ಮಕ್ಕಳಿಗೂ ಓದಿನ ಗೀಳು ಹತ್ತುತ್ತದೆ. ತಂದೆ- ತಾಯಿ ಮನೆಯಲ್ಲಿದ್ದಾಗ ಏನು ಮಾಡುತ್ತಾರೆಯೋ ಅದನ್ನೇ ಮಕ್ಕಳು ಮಾಡುತ್ತಾರೆ. ಮಕ್ಕಳ ಬೆಳವಣಿಗೆ ಕಡೆ ಸರಿಯಾದ ಗಮನ ನೀಡಿ. ಉತ್ತಮ ಸಂಸ್ಕಾರ ಕೊಡಿ; ಅವರು ಅಪ್ಪಿ ತಪ್ಪಿಯೂ ತಪ್ಪು ದಾರಿ ತುಳಿಯುವುದಿಲ್ಲ. ಅಪಕೀರ್ತಿ ತರುವುದಿಲ್ಲ. ಓದಿನಲ್ಲಿ ಹಿಂದೆ ಬೀಳುವುದಿಲ್ಲ. ಚಾರಿತ್ರ್ಯ ಹಾಳು ಮಾಡಿಕೊಳ್ಳುವುದಿಲ್ಲ ಎಂದರು.

ವಿವೇಕ ತೋರಣದ ಸಂಯೋಜಕ ಪ್ರಭುದೇವ ಕಪ್ಪಗಲ್ಲು, ಅಡವಿಸ್ವಾಮಿ ಹಾಗೂ ಉಪನ್ಯಾಸ ಮಾಲಿಕೆ ಸಂಚಾಲಕ ಸಿ. ಎರ್ರಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

Share this article