ತಾಯಿಯೇ ಮಗು ಕೊಂದಕೇಸ್‌: ಆರೋಪಿ ತಪ್ಪೊಪ್ಪಿಗೆ

KannadaprabhaNewsNetwork |  
Published : Jun 10, 2026, 03:45 AM IST
ಮೋಹನ್  | Kannada Prabha

ಸಾರಾಂಶ

ಐದು ವರ್ಷದ ಮಗುವನ್ನು ತಾಯಿಯೇ ಪ್ರಿಯಕರನೊಂದಿಗೆ ಸೇರಿ ಕೊಂದಿದ್ದ ಪ್ರಕರಣದ ಸಂಬಂಧ ಬಂಧನವಾಗಿರುವ ಆರೋಪಿ ಮೋಹನ್‌ ತಪ್ಪೊಪ್ಪಿಕೊಂಡಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಐದು ವರ್ಷದ ಮಗುವನ್ನು ತಾಯಿಯೇ ಪ್ರಿಯಕರನೊಂದಿಗೆ ಸೇರಿ ಕೊಂದಿದ್ದ ಪ್ರಕರಣದ ಸಂಬಂಧ ಬಂಧನವಾಗಿರುವ ಆರೋಪಿ ಮೋಹನ್‌ ತಪ್ಪೊಪ್ಪಿಕೊಂಡಿದ್ದಾನೆ.

ಹೆತ್ತ ಮಗಳನ್ನೇ ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿ ಕೊಲೆಗೈದ ಆರೋಪದ ಮೇಲೆ ತಾಯಿ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಮೋಹನ್ ವಿರುದ್ಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ ಮೋಹನ್ ತನಿಖಾಧಿಕಾರಿಗಳ ಮುಂದೆ ಕೊಲೆಯ ಭೀಕರ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ತಾನೇ ಕಾಲಿನಿಂದ ಒದ್ದು ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ತಾಯಿ ಪ್ರಿಯಾಂಕಾಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಮಾ.21 ರಂದು ಆರೋಪಿ ಮೋಹನ್ ಹಾಗೂ ಪ್ರಿಯಾಂಕಾ ಮಗು ವೆನ್ನಿಲ್ಲಾಳೊಂದಿಗೆ ತಮಿಳುನಾಡಿನ ಮಧುರೈಗೆ ಮೂರು ದಿನಗಳ ಕಾಲ ಪ್ರವಾಸಕ್ಕೆ ತೆರಳಿದ್ದರು. ಮಾ.24 ರಂದು ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಬಂದಿದ್ದರು. ಅದೇ ದಿನ ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಪ್ರಿಯಾಂಕಾ ಇಂದಿರಾನಗರದಲ್ಲಿ ಶಾಪಿಂಗ್ ಮಾಡಲು ತೆರಳಿದ್ದಳು. ಈ ಸಮಯದಲ್ಲಿ ಕಾರಿನಲ್ಲಿ ಪ್ರಿಯಕರ ಮೋಹನ್ ಮತ್ತು ಮಗು ವೆನ್ನಿಲ್ಲಾ ಮಾತ್ರ ಇದ್ದರು.

ಮಗುವಿನ ಹೊಟ್ಟೆಯ ಭಾಗಕ್ಕೆ ಬಲವಾಗಿ ಒದಿದ್ದ:ಕಾರಿನಲ್ಲಿ ಕುಳಿತಿದ್ದಾಗ ಮಗು ವೆನ್ನಿಲ್ಲಾ ತನಗೆ ಐಸ್‌ಕ್ರೀಂ ಬೇಕೆಂದು ಮೋಹನ್ ಬಳಿ ಹಠ ಹಿಡಿದಿತ್ತು. ಮೋಹನ್ ಹೋಗಿ ಐಸ್‌ಕ್ರೀಂ ತಂದುಕೊಟ್ಟಿದ್ದ. ಆದರೆ ತನಗೆ ಈ ಐಸ್‌ಕ್ರೀಂ ಬೇಡ, ಬೇರೆ ಐಸ್‌ಕ್ರೀಂ ಬೇಕು ಎಂದು ಮಗು ಮತ್ತೆ ಹಠ ಹಿಡಿದು ಜೋರಾಗಿ ಅಳಲು ಆರಂಭಿಸಿತ್ತು. ಇದರಿಂದ ತೀವ್ರ ಕೋಪಗೊಂಡ ಮೋಹನ್ ತನ್ನ ಕಾಲಿನಿಂದ ಮಗುವಿನ ಹೊಟ್ಟೆಯ ಭಾಗಕ್ಕೆ ಬಲವಾಗಿ ಒದ್ದಿದ್ದ.

ಇದರಿಂದ ಮಗು ನೋವು ತಡೆಯಲಾರದೆ ಜೋರಾಗಿ ಕಿರುಚಾಡಿ ಒದ್ದಾಡತೊಡಗಿತ್ತು. ಮಗುವಿನ ಕಿರುಚಾಟ ಕಾರಿನ ಹೊರಗಡೆ ಯಾರಿಗೂ ಕೇಳಿಸಬಾರದೆಂದು ಮೋಹನ್ ಮಗುವಿನ ಮೂಗು ಮತ್ತು ಬಾಯಿಯನ್ನು ತನ್ನ ಎರಡೂ ಕೈಗಳಿಂದ ಬಲವಾಗಿ ಒತ್ತಿ ಹಿಡಿದಿದ್ದ. ಪರಿಣಾಮವಾಗಿ ಉಸಿರಾಡಲು ಸಾಧ್ಯವಾಗದೆ ಮಗು ಕಾರಿನಲ್ಲೇ ಕೊನೆಯುಸಿರೆಳೆದಿತ್ತು ಎನ್ನಲಾಗಿದೆ. ಈ ಸತ್ಯವನ್ನು ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆಯಲ್ಲಿ ಕಳ್ಳಾಟ ಬಯಲು:ಮಗುವಿನ ಮರಣೋತ್ತರ ಪರೀಕ್ಷೆಯಲ್ಲಿ ಆರೋಪಿಗಳ ಕಳ್ಳಾಟ ಬಯಲಾಗಿದೆ. ವರದಿಯಲ್ಲಿ ಮಗುವಿನ ಸಾವು ಸಹಜವಾದುದಲ್ಲ, ಅದು ಕೊಲೆ ಎಂಬುದು ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಮಗುವಿನ ಮೂಗು ಮತ್ತು ಬಾಯಿಯನ್ನು ಬಲವಾಗಿ ಒತ್ತಿ ಹಿಡಿದಿದ್ದರಿಂದ ಉಸಿರಾಟದ ಸಮಸ್ಯೆಯಾಗಿ ಸಾವು ಸಂಭವಿಸಿದೆ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಒಳಗಡೆ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ವರದಿಯಲ್ಲಿ ಧೃಢಪಡಿಸಿದ್ದರು.

ಕೊಲೆ ಮುಚ್ಚಿಡಲು ಹೈಡ್ರಾಮಾ!

ಶಾಪಿಂಗ್ ಮುಗಿಸಿ ಪ್ರಿಯಾಂಕಾ ಕಾರಿನ ಬಳಿ ವಾಪಸ್ ಬಂದಾಗ ಮೋಹನ್ ಮಗು ಮೃತಪಟ್ಟಿರುವುದನ್ನು ತಿಳಿಸಿದ್ದ. ಅಲ್ಲದೆ, ಇದು ಆಕಸ್ಮಿಕವಾಗಿ ನಡೆದುಹೋಯಿತು ಎಂದು ಆಕೆಗೆ ನಂಬಿಸಿದ್ದ. ಆ ಬಳಿಕ ಇಬ್ಬರೂ ಸೇರಿ ಶವವನ್ನು ಕಾರಿನಲ್ಲಿಟ್ಟುಕೊಂಡು ನೇರವಾಗಿ ಕಾಡುಗೋಡಿಯಲ್ಲಿದ್ದ ತಮ್ಮ ವಿಲ್ಲಾಗೆ ತಂದಿದ್ದರು. ಮಗು ನಿದ್ದೆ ಮಾಡುತ್ತಿರುವಂತೆ ಕಾಣಲೆಂದು ಭುಜದ ಮೇಲೆ ಮಲಗಿಸಿಕೊಂಡು ವಿಲ್ಲಾ ಒಳಗೆ ಕರೆದೊಯ್ದಿದ್ದರು. ಅಂದು ರಾತ್ರಿಯಿಡೀ ಮಗುವಿನ ಶವವನ್ನು ಮನೆಯಲ್ಲೇ ಇಟ್ಟುಕೊಂಡು, ಪೊಲೀಸರಿಗೆ ಮತ್ತು ಮನೆಯವರಿಗೆ ಏನು ಹೇಳಬೇಕೆಂದು ಇಬ್ಬರೂ ಒಳಸಂಚು ರೂಪಿಸಿದ್ದರು.

ಮರುದಿನ ಬೆಳಗ್ಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದ ಇಬ್ಬರು, ಮಗು ಬೆಳಗ್ಗೆ ಎದ್ದೇಳುತ್ತಿಲ್ಲ. ಮೆಟ್ಟಿಲುಗಳ ಮೇಲಿಂದ ಕೆಳಗೆ ಬಿದ್ದಿತ್ತು, ಹಾಗಾಗಿ ಮಲಗಿಸಿದ್ದೆವು ಎಂದು ವೈದ್ಯರ ಮುಂದೆ ಸುಳ್ಳು ಕಥೆ ಹೇಳಿದ್ದರು. ಆದರೆ ಪರಿಶೀಲಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿದೆ ಎಂದು ಘೋಷಿಸಿದರು. ಈ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾಂಕಾ ತನಗೇನೂ ತಿಳಿಯದವಳಂತೆ ಆಸ್ಪತ್ರೆಯಲ್ಲೇ ಬಿದ್ದು ಒದ್ದಾಡಿ ಹೈಡ್ರಾಮಾ ಮಾಡಿದ್ದಳು. ತದನಂತರ ಮರಣೋತ್ತರ ಪರೀಕ್ಷೆ ಮುಗಿಸಿ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲಕನ ಶ್ವಾಸಕೋಶದಲ್ಲಿದ್ದಪಿನ್‌ ಹೊರತೆಗೆದ ವೈದ್ಯರು
ಮಾಗಡಿ-ಮೈಸೂರು ರಸ್ತೆಯಲ್ಲಿಪ್ರತ್ಯೇಕ ಸೈಕಲ್ ಪಥ ನಿರ್ಮಾಣ