ಕೊಪ್ಪಳ: ಭಕ್ತಿ ಮಾರ್ಗದಿಂದ ದೇವರನ್ನು ಕಾಣುವ ಮೂಲಕ ಬದುಕು ಶ್ರೇಷ್ಠತೆ ಪಡೆಯಲು ಸಾಧ್ಯವಿದೆ ಎಂಬುದನ್ನು ಇಡಿ ಜಗತ್ತಿಗೆ ತೋರಿಸಿದ ಮಹಿಳೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂದು ಮೈನಹಳ್ಳಿ-ಬಿಕನಳ್ಳಿಯ ಶ್ರೀಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.
ಹೇಮರಡ್ಡಿ ಮಲ್ಲಮ್ಮ ಬಾಂಧವ್ಯದ ಬೆಲೆ ಜಗತ್ತಿಗೆ ಸಾರಿದ ಸ್ತ್ರೀ ಕುಲ ರತ್ನ ಆಗಿದ್ದಾಳೆ ಹಾಗೂ ಎಂದಿಗೂ ದ್ವೇಷಭಾವ ತೋರಲಿಲ್ಲ. ಮನುಕುಲದ ಕಲ್ಯಾಣ ಬಯಸಿದ ತಾಯಿ ಮಲ್ಲಮ್ಮ ಎಂದರು.
ಹೂವಿನಹಡಗಲಿಯ ಶ್ರೀಹಿರಿ ಶಾಂತವೀರ ಸ್ವಾಮೀಜಿ ಮಾತನಾಡಿ, ದಾಸೋಹ ಸೇವೆ, ಪ್ರೀತಿ, ಪ್ರೇಮ, ಭಕ್ತಿ, ಜಂಗಮರ ಆರಾಧನೆಗೆ ಹೆಸರುವಾಸಿ ಘಟ್ಟಿರಡ್ಡಿಹಾಳ ಗ್ರಾಮ. ಸತ್ಯ ನೀತಿ ಪಾಲಿಸುವ ಗುಣವಂತರಿಗೆ ಪರಮಾತ್ಮ ಬೆನ್ನೆಲುಬಾಗಿ ನಿಂತಿರುತ್ತಾನೆ. ಭಗವಂತನ ಸ್ಮರಣೆಯಿಂದ ಸಾರ್ಥಕ ಬದುಕು ಸಾಧ್ಯ. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಹಾಗೂ ದಾನದ ಗುಣ ಬೆಳೆಸಿಕೊಳ್ಳಿ ಇದು ನಿಮ್ಮನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತದೆ. ಶರಣರು ಸಂತರು ಶಿವಯೋಗಿಗಳು ಸಮಾಜಕ್ಕೆ ಬದುಕಿದವರು. ಶರಣರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.ಅಳವಂಡಿಯ ಶ್ರೀಮರುಳಾರಾಧ್ಯ ಶಿವಾಚಾರ್ಯ ಮಾತನಾಡಿ, ಕಾಯಕ, ದಾಸೋಹ,ಶ್ರದ್ಧೆಯ ಬದುಕನ್ನು ಜಗತ್ತಿಗೆ ತಿಳಿಸುತ್ತಾ ಹೇಮರೆಡ್ಡಿ ಮಲ್ಲಮ್ಮ. ಆಕೆಯ ವಿಚಾರಧಾರೆ ಜೀವನದಲ್ಲಿ ಅಳವಡಿಸಿಕೊಳ್ಳಿ. ಮಲ್ಲಮ್ಮನ ಆದರ್ಶ ಬದುಕನ್ನು ಎಲ್ಲರೂ ಅರಿತು ನಡೆದರೆ ಸುಂದರ ಜೀವನ ಪ್ರಾಪ್ತವಾಗುತ್ತದೆ. ಮಲ್ಲಮ್ಮ ತಾಯಿ ಕೌಟುಂಬಿಕ ಸಮಸ್ಯೆ ಮೆಟ್ಟಿ ನಿಂತು ಸಮಾಜದಲ್ಲಿ ಹೆಣ್ಣಿನ ಮಹತ್ವ ವಿಶ್ವಕ್ಕೆ ಸಾರಿದ್ದಾಳೆ ಎಂದರು.
ಅಲಂಕೃತಗೊಂಡ ಅಡ್ಡ ಪಲ್ಲಕ್ಕಿಯಲ್ಲಿ ಮಲ್ಲಮ್ಮನ ಮೂರ್ತಿ ಹಾಗೂ ವೇಮನರ ಭಾವಚಿತ್ರ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆಯಲ್ಲಿ ನಂದಿಕೋಲು ನೃತ್ಯ ಸೇರಿದಂತೆ ವಿವಿಧ ವಾದ್ಯ ಮೇಳಗಳು ಗಮನ ಸೆಳೆದವು. ಮೆರವಣಿಗೆಯಲ್ಲಿ ಮಹಿಳೆಯರು ಕುಂಭಮೇಳ ಹಾಗೂ ಕಳಸ ಹೊತ್ತು ಸಾಗಿದರು.