ಭಯದ ಜಗತ್ತಿಗೆ ಮೇರಿ ಮಾತೆ ಭರವಸೆಯೇ ದಾರಿದೀಪ: ಬಿಷಪ್ ಜೆರಾಲ್ಡ್ ಲೋಬೊ

KannadaprabhaNewsNetwork |  
Published : Aug 16, 2025, 12:02 AM IST
15ಮೇರಿ | Kannada Prabha

ಸಾರಾಂಶ

ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಧಾನ ಬಲಿಪೂಜೆ ನಡೆಯಿತು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಭಯ, ಉದ್ವಿಗ್ನತೆ ಮತ್ತು ಕಷ್ಟಗಳಿಂದ ತುಂಬಿರುವ ಇಂದಿನ ಜಗತ್ತಿನಲ್ಲಿ ಮೇರಿ ಮಾತೆ ಭರವಸೆಯ ದಾರಿದೀಪವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಅವರು ಶುಕ್ರವಾರ ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.ತಮ್ಮ ಜೀವನದಲ್ಲಿ ಮೇರಿ ಮಾತೆಯು ದೇವರ ವಾಕ್ಯಕ್ಕೆ ಸಂಪೂರ್ಣವಾಗಿ ವಿಧೇಯರಾಗಿ ದೇವರಲ್ಲಿ ನಂಬಿಕೆ ಇಟ್ಟರು. ತಮ್ಮ ಜೀವನದಲ್ಲಿ ಬಂದ ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಕೂಡ ಹೆದರಿ ಓಡಲಿಲ್ಲ, ಬದಲಾಗಿ ದೇವರಲ್ಲಿ ತಮ್ಮ ವಿಶ್ವಾಸ ಅಚಲವಾಗಿಸಿದರು. ತನ್ನ ಒಬ್ಬನೇ ಮಗನಾದ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಸಮಯದಲ್ಲಿ ಕೂಡ ತಮ್ಮ ವಿಶ್ವಾಸದಲ್ಲಿ ಸ್ವಲ್ಪವೂ ಕದಲಿಸದೆ ಪರಮಾತ್ಮನಲ್ಲಿ ನಂಬಿಕೆ ಇರಿಸಿದರು ಎಂದರು.ದೇವರ ಮೇಲಿನ ನಂಬಿಕೆ ಸದಾ ನಮಗೆ ಭರವಸೆಯ ಬೆಳಕಾಗಿದ್ದು, ಸಂತೋಷದಲ್ಲಾಗಲಿ ಕಷ್ಟದಲ್ಲಾಗಲಿ ದೇವರ ಮೇಲಿನ ವಿಶ್ವಾಸ ಕಳೆದುಕೊಳ್ಳದೆ ಇರುವಂತೆ ಮೇರಿ ಮಾತೆ ನಮಗೆ ಸಂದೇಶ ನೀಡಿದ್ದಾರೆ. ಅಗತ್ಯದಲ್ಲಿರುವವರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿದ್ದ ಮೇರಿ ಮಾತೆ ಅವರ ಉದಾರತೆಯ ಗುಣ ನಾವು ಕೂಡ ಇತರರಿಗೆ ಸಹಾಯ ಮಾಡಲು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.ಮಾತೆ ಮರಿಯಾ, ಭರವಸೆಯ ರಾಣಿ ಎಂಬುದು ಈ ಮಹೋತ್ಸವದ ವಿಷಯವಾಗಿದ್ದು, ಹಬ್ಬಕ್ಕೆ ಪೂರ್ವ ಸಿದ್ಧತೆಯಾಗಿ 9 ದಿನಗಳ ನವೇನಾ ಪ್ರಾರ್ಥನೆ ಜರುಗಿದ್ದು, ವಾರ್ಷಿಕ ಮಹೋತ್ಸವದಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸಿದ್ದರು.ಕಲ್ಮಾಡಿ ವೆಲಂಕಣಿ ಮಾತೆ ಪುಣ್ಯಕ್ಷೇತ್ರದ ನಿರ್ದೇಶಕ ಬ್ಯಾಪ್ಟಿಸ್ಟ್ ಮಿನೇಜಸ್, ಹಬ್ಬ ಆಯೋಜನೆ ಮತ್ತು ವ್ಯವಸ್ಥೆಯಲ್ಲಿ ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಮಹೋತ್ಸವದಲ್ಲಿ ಸಹಕರಿಸಿದ ದಾನಿಗಳು ಹಾಗೂ ಪ್ರಾಯೋಜಕರಿಗೆ, ಧರ್ಮಾಧ್ಯಕ್ಷರು ಆಶೀರ್ವದಿತ ಮೇಣದ ಬತ್ತಿಗಳನ್ನು ನೀಡಿ ಸನ್ಮಾನಿಸಿದರು.ಈ ವೇಳೆ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಐಡಾ ಡಿಸೋಜಾ, ಕಾರ್ಯದರ್ಶಿ ಸ್ಟ್ಯಾನ್ಲಿ ಮಿನೇಜಸ್, 20 ಆಯೋಗಗಳ ಸಂಚಾಲಕ ಜೆನವಿವ್ ಲೋಬೊ, ಧರ್ಮಪ್ರಾಂತ್ಯದ ಕುಲಪತಿ ಸ್ಟೀಫನ್ ಡಿಸೋಜಾ, ಉಡುಪಿ ಶೋಕಮಾತಾ ದೇವಾಲಯದ ಪ್ರಧಾನ ಧರ್ಮಗುರು ಚಾರ್ಲ್ಸ್ ಮಿನೇಜಸ್, ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಆಲ್ಬನ್ ಡಿಸೋಜಾ ಹಾಗೂ ಇತರ ಧರ್ಮಗುರುಗಳು ಉಪಸ್ಥಿತರಿದ್ದರು.

PREV

Recommended Stories

ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅಳವಡಿಸಿಕೊಳ್ಳಿ
ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು