ಚಿತ್ರದುರ್ಗ: ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆ ಮೌಢ್ಯದ ವಿರುದ್ಧ ಹೋರಾಡಿದ ಮಹಾ ಮಾತೆ ಸಾವಿತ್ರಿಬಾಯಿ ಫುಲೆ ಭಾರತದ ಮೊಟ್ಟ ಮೊದಲ ಶಿಕ್ಷಕಿ ಎಂದು ಉಪನ್ಯಾಸಕ ಹರಿಯಬ್ಬೆಯ ತಿಪ್ಪೇಶ್.ಟಿ ಹೇಳಿದರು.
ಜಂಬೂ ದ್ವೀಪ ಕರ್ನಾಟಕ ಮಹಾತ್ಮ ಫುಲೆ ಅಧ್ಯಯನ ಕೇಂದ್ರದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯೆ ಕೇವಲ ಬ್ರಾಹ್ಮಣರ ಸ್ವತ್ತಾಗಿದ್ದ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕೆಂಬ ಛಲ ಅವರಲ್ಲಿತ್ತು. ಪ್ರಶ್ನೆ ಮಾಡದೆ ಯಾವುದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಅಂತಹ ಗುಣ ಅವರದು ಎಂದು ಸ್ಮರಿಸಿದರು.ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಲು ಹೋಗುತ್ತಿದ್ದ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಮೇಲೆ ಕಲ್ಲು, ಮೊಟ್ಟೆ, ಸಗಣಿಯನ್ನು ಎಸೆಯಲಾಗುತ್ತಿತ್ತು. ಇಷ್ಟೆಲ್ಲಾ ಅವಮಾನ ಸಹಿಸಿಕೊಂಡು ಅಕ್ಷರ ಕ್ರಾಂತಿಯನ್ನೇ ಉಂಟು ಮಾಡಿದ್ದರಿಂದ ಭಾರತದ ಮೊಟ್ಟ ಮೊದಲ ಶಿಕ್ಷಕಿ ಎನಿಸಿಕೊಂಡಿದ್ದಾರೆ. ಮನೆ ಮನೆಗೆ ಹೋಗಿ ಹಣ ಬೇಡಿ ನಂತರ ಬ್ರಿಟೀಷರು ಕೊಡುತ್ತಿದ್ದ ಹಣದಿಂದ ಮಕ್ಕಳಿಗೆ ವಿದ್ಯೆ ಕಲಿಸುತ್ತಿದ್ದರು. ಅವರಲ್ಲಿ ದೃಢ ನಿರ್ಧಾರ ದಿಟ್ಟ ನಿಲುವಿತ್ತು. ಮಹಾರಾಷ್ಟ್ರದ ಮರಾಠಿಗರಿಗಷ್ಟೆ ಬೇಕಾದವರಲ್ಲ. ಇಡಿ ಭಾರತದ ಮಹಾನ್ ಚೇತನ ಸಾವಿತ್ರಿಬಾಯಿ ಪುಲೆ ಜ್ಞಾನದಾನ ಶ್ರೇಷ್ಠ ದಾನ ಎನ್ನುತ್ತಿದ್ದರು. ಶಿಕ್ಷಣದ ಜೊತೆ ಪ್ಲೇಗ್ ರೋಗಿಗಳ ಆರೈಕೆ ಮಾಡುತ್ತಲೆ 1897ರಲ್ಲಿ ಅಸು ನೀಗಿದರು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಡಿ.ಟಿ.ಜಗನ್ನಾಥ್ ಮಾತನಾಡಿ ಅಕ್ಷರದವ್ವನ ಆಸೆಯಂತೆ ನಾವೆಲ್ಲರೂ ಹೆಚ್ಚು ಶಿಕ್ಷಣವಂತರಾದಾಗ ಮಾತ್ರ ಸಾವಿತ್ರಿಬಾಯಿ ಫುಲೆರವರ ಶ್ರಮ ಸಾರ್ಥಕವಾಗುತ್ತದೆ.ಸಾವಿತ್ರಿಬಾಯಿ ಫುಲೆ ಕೇವಲ ಶಿಕ್ಷಣ ಕಲಿಸುವುದಕ್ಕಷ್ಟೆ ಸೀಮಿತವಾಗಿರಲಿಲ್ಲ. ಮೌಢ್ಯದ ವಿರುದ್ಧವೂ ನಿರಂತರವಾಗಿ ಹೋರಾಡಿದ ದಿಟ್ಟ ಮಹಿಳೆ. ಅನೇಕ ಅವಮಾನಗಳನ್ನು ಅನುಭವಿಸಿದರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಹೇಳಿಕೊಡುವುದರಿಂದ ಹಿಂದೆ ಸರಿಯಲಿಲ್ಲ. ಅಂತಹ ದೀಮಂತ ಮಹಿಳೆಯ ಹಾದಿಯಲ್ಲಿ ಎಲ್ಲರೂ ಸಾಗಬೇಕಿದೆ ಎಂದು ತಿಳಿಸಿದರು.
ಜಂಬೂ ದ್ವೀಪ ಕರ್ನಾಟಕ ಅಧ್ಯಕ್ಷ ರಾಮಣ್ಣ ಪ್ರಾಸ್ತಾವಿಕ ಮಾತನಾಡುತ್ತ ಬಾಬಾ ಸಾಹೇಬರ ಚಿತ್ರಗಳನ್ನು ಸಾಕಾರಗೊಳಿಸಬೇಕು ಅನ್ನುವುದಾದರೆ ನಮ್ಮ ಬೇರುಗಳನ್ನು ನಾವು ಗಟ್ಟಿಗೊಳಿಸಿಕೊಳ್ಳಬೇಕಾದ ಅಗತ್ಯವಿದೆ. ಅದಕ್ಕಾಗಿ ಸಂಘಟನೆ ಮುಖ್ಯ. ಸಾವಿತ್ರಿಬಾಯಿ ಫುಲೆರವರ ಆಶಯದಂತೆ ಹೆಣ್ಣು ಮಕ್ಕಳು ಶಿಕ್ಷಣವಂತರಾಗಬೇಕು ಎಂದು ಕರೆ ನೀಡಿದರು.ಮಲ್ಲಾಡಿಹಳ್ಳಿ ಪ್ರಾಂಶುಪಾಲದ ಆಯುಶ್ಮತಿ ಸಿದ್ದಲಿಂಗಮ್ಮ ಅಧ್ಯಕ್ಷತೆ ವಹಿಸಿದ್ದರು.ಕೃಷಿ ಅಧಿಕಾರಿ ಡಾ.ಟಿ.ಪಾರ್ವತಮ್ಮ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷೆ ಬಿ.ಟಿ.ಲೋಲಾಕ್ಷಮ್ಮ, ಡಾ.ಮೋಹನ್, ರಾಘವೇಂದ್ರ ವೇದಿಕೆಯಲ್ಲಿದ್ದರು.ಉಪನ್ಯಾಸಕಿ ಡಾ.ಮಮತ, ಮುಖ್ಯ ಶಿಕ್ಷಕ ಹನುಮಂತಪ್ಪ ಇವರುಗಳನ್ನು ಸನ್ಮಾನಿಸಲಾಯಿತು.ಉಪನ್ಯಾಸಕ ಡಾ.ಬಿ.ಎಂ.ಗುರುನಾಥ್ ನಿರೂಪಿಸಿದರು.