ಬರೋಬ್ಬರಿ 20 ವರ್ಷ ನಂತರ ಮರಳಿ ಒಂದಾದ ತಾಯಿ-ಮಗ!

KannadaprabhaNewsNetwork |  
Published : Nov 18, 2024, 12:07 AM IST
20 ವರ್ಷಗಳಿಂದ ದೂರವಿದ್ದ ತಾಯಿಯನ್ನು ಮಗನ ಬಳಿ ಸೇರಿಸಲಾಯಿತು. ಹಿರಿಯ ಸಮಾಜ ಸೇವಕ ಟಿ.ಜಿ.ಮಂಜುನಾಥ್, ಕವಾಲಿ ಸೋಮಶೇಖರ್, ಕರಕುಚ್ಚಿ ಮೋಹನ್. ಮತ್ತಿತರರು ಇದ್ದಾರೆ. | Kannada Prabha

ಸಾರಾಂಶ

ತರೀಕೆರೆ, ಕಾರಣಾಂತರದಿಂದ ಸುಮಾರು 20 ವರ್ಷ ಕಾಲ ದೂರವಿದ್ದ ತರೀಕೆರೆ ಸಮೀಪದ ಭಾವಿಕೆರೆ ಗ್ರಾಮದ ತಾಯಿ - ಮಗ ಮರಳಿ ಒಂದಾದ ಮನ ಮಿಡಿಯುವ ಘಟನೆ ಇತ್ತೀಚೆಗೆ ನಡೆದಿದೆ.

ಅನಾಥರಂತಿದ್ದ ತಾಯಿಯನ್ನು ಮಗನ ಬಳಿ ಸೇರಿಸಿದ ಸಮಾಜ ಸೇವಕ ಟಿ.ಜಿ.ಮಂಜುನಾಥ್

ಕನ್ನಡಪ್ರಭ ವಾರ್ತೆ, ತರೀಕೆರೆ

ಕಾರಣಾಂತರದಿಂದ ಸುಮಾರು 20 ವರ್ಷ ಕಾಲ ದೂರವಿದ್ದ ತರೀಕೆರೆ ಸಮೀಪದ ಭಾವಿಕೆರೆ ಗ್ರಾಮದ ತಾಯಿ - ಮಗ ಮರಳಿ ಒಂದಾದ ಮನ ಮಿಡಿಯುವ ಘಟನೆ ಇತ್ತೀಚೆಗೆ ನಡೆದಿದೆ.

ತಾಯಿ - ಮಗ ಒಂದಾಗಲು ಪ್ರಮುಖ ಕಾರಣಕರ್ತರು ಸಮಾಜ ಸೇವಕ ಟಿ.ಜಿ. ಮಂಜುನಾಥ್‌. ಈ ಮಾನವೀಯ ಕಾರ್ಯ ಜನ ಮೆಚ್ಚುಗೆಗೂ ಪಾತ್ರವಾಗಿದೆ. ಮಂಜುನಾಥ ಅವರ ಕಾಳಜಿಯಿಂದಾಗಿ ಬಾವಿಕೆರೆ ಗ್ರಾಮದ ವಯೋವೃದ್ಧೆ ಚಂದ್ರಮ್ಮ ಮತ್ತು ಮಗ ಕುಮಾರ್‌ ಮಮತೆಯ ಮಡಿಲು ಸೇರಿದ್ದಾರೆ.

ಹಲವು ವರ್ಷ ಭಾವಿಕೆರೆಯಲ್ಲಿ ಒಬ್ಬಳೆ ವಾಸವಾಗಿದ್ದು ನಂತರ ಕಾರಣಾಂತರದಿಂದ ವೃದ್ಧಾಶ್ರಮ ಸೇರಿದ್ದ ತಾಯಿ 20 ವರ್ಷದಿಂದ ಮಗನ ಮುಖವನ್ನೇ ನೋಡಿರಲಿಲ್ಲ. ಅದೇ ರೀತಿ ತಾಯಿ ಚಂದ್ರಮ್ಮ ಬದುಕಿಲ್ಲವೆಂದು ಭಾವಿಸಿದ್ದ ಮಗ ಪುಣ್ಯಾರಾಧನೆ ಇತ್ಯಾದಿ ಪೂಜೆ ಒಂದು ವರ್ಷ ಹಿಂದೆ ಮಾಡಿ ಮುಗಿಸಿದ್ದರು. ಈ ಸಮ್ಮಿಲನ ಈಗ ಇಬ್ಬರಲ್ಲೂ ಆನಂದ ತಂದಿದೆ.ಮಗನಿದ್ದು ಅನಾಥರಾಗಿದ್ದ ಚಂದ್ರಮ್ಮ:

ಇಪ್ಪತ್ತು ವರ್ಷ ಹಿಂದೆ ಚಂದ್ರಮ್ಮನವರ ಮಗ ಕುಮಾರ್‌ ಮನೆ ಬಿಟ್ಟು ಬೆಂಗಳೂರಿಗೆ ಹೋಗಿ ಹೋಟೆಲ್‌ ನಲ್ಲಿ ಕೆಲಸ ಮಾಡಿ ಕೊಂಡಿದ್ದನು. ಊರಿಗೆ ಹಿಂದಿರುಗಿ ಬಂದಿರಲಿಲ್ಲ. ಚಂದ್ರಮ್ಮ ಊರಿನಲ್ಲೆ ವಾಸಿಸುತ್ತಿದ್ದರು. ಸುಮಾರು ಒಂದೂವರೆ ವರ್ಷ ಹಿಂದೆ ಒಮ್ಮೆ ತರೀಕೆರೆ ಪಟ್ಟಣಕ್ಕೆ ಬಂದಾಗ ಅಂದು ತಮ್ಮ ಊರಿಗೆ ಹಿಂದಿರುಗಲು ಸಾಧ್ಯವಾಗದೆ ರಸ್ತೆ ಪಕ್ಕದಲ್ಲಿ ಮಲಗಿದ್ದರು. ಇದನ್ನು ಕಂಡು ಯಾರೋ ಬಸ್ಸು ಹತ್ತಿಸಿ ಕಳಿಸಿದ್ದು, ಬಸ್ಸಿನಲ್ಲಿ ಬೇರೆ ಬೇರೆ ಊರುಗಳಿಗೆ ಹೋಗಿ ದಾರಿ ತಪ್ಪಿದ್ದ ಚಂದ್ರಮ್ಮ ಮನೆ ಸೇರುವ ಬದಲು ಕೊನೆಗೆ ಕೆ.ಆರ್‌. ಪೇಟೆಯ ಮಾತೃಭೂಮಿ ವೃದ್ಧಾಶ್ರಮಕ್ಕೆ ಸೇರಿಕೊಂಡಿದ್ದರು.ಮಂಜುನಾಥ ಅವರು ನಿರಾಶ್ರಿತ ವೃದ್ಧರೊಬ್ಬರನ್ನು ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋದಾಗ, ಚಂದ್ರಮ್ಮ ತರೀಕೆರೆ ತಾಲೂಕಿನವರು ಎಂದು ತಿಳಿದು ಬಂದಿದೆ. ಚಂದ್ರಮ್ಮ ಅವರು ತರೀಕೆರೆ ಹತ್ತಿರದ ಭಾವಿಕೆರೆಯವಳು ನಾನು. ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಕೋರಿದ್ದಾರೆ. ಭಾವಿಕೆರೆಗೆ ಹೋಗಿ ಸಂಬಂಧಿಕರನ್ನು ಸಂಪರ್ಕಿಸಿದಾಗ ಮಗನ ಫೋನ್ ನಂಬರ್ ಸಿಕ್ಕಿತು. ಮಗನಿಗೆ ಫೋನ್ ಮಾಡಿ ತಿಳಿಸಿ ಅವನನ್ನು ಕರೆಸಿಕೊಂಡು ಜೊತೆಯಲ್ಲಿ ಅವರ ತಾಯಿಯನ್ನು ಕಳಿಸಿ ಕೊಡಲಾಯಿತು. ತಾಯಿ ಮಗ ಒಂದಾಗಿದ್ದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದು ಮಂಜುನಾಥ್‌ ಸಂತಸದ ಕ್ಷಣ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಾಹಿತಿ ಮನಸುಳಿ ಮೋಹನ್, ಕವಾಲಿ ಸೋಮಶೇಖರ್, ಕರಕುಚ್ಚಿ ಮೋಹನ್ ಉಪಸ್ಥಿತರಿದ್ದರು.------------------

15ಕೆಟಿಆರ್.ಕೆ.10

20 ವರ್ಷಗಳಿಂದ ದೂರವಿದ್ದ ತಾಯಿ ಮಗನ ಬಳಿ ಸೇರಿದ ಕ್ಷಣ. ಹಿರಿಯ ಸಮಾಜ ಸೇವಕ ಟಿ.ಜಿ. ಮಂಜುನಾಥ್, ಕವಾಲಿ ಸೋಮಶೇಖರ್, ಕರಕುಚ್ಚಿ ಮೋಹನ್. ಮತ್ತಿತರರು ಇದ್ದಾರೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ