ಮಾತೃ ಭಾಷೇಲಿ ಉತ್ತಮ ಸಾಧನೆ ಸಾಧ್ಯ: ಹೈಕೋರ್ಟ್‌ ನ್ಯಾಯಾಧೀಶ ಎಚ್.ಪಿ.ಸಂದೇಶ್

KannadaprabhaNewsNetwork | Published : Jun 3, 2024 12:31 AM

ಸಾರಾಂಶ

ಅನ್ಯ ಭಾಷೆಯಲ್ಲಿ ಸಾಧಿಸಲು ಸಾಧ್ಯವಾಗದ್ದನ್ನು ತಮ್ಮ ಮಾತೃ ಭಾಷೆಯಲ್ಲಿ ಸಾಧಿಸಲು ಸಾಧ್ಯವಿದೆ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶ ಎಚ್.ಪಿ.ಸಂದೇಶ್ ಹೇಳಿದರು. ಸಕಲೇಶಪುರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಅನ್ಯ ಭಾಷೆಯಲ್ಲಿ ಸಾಧಿಸಲು ಸಾಧ್ಯವಾಗದ್ದನ್ನು ತಮ್ಮ ಮಾತೃ ಭಾಷೆಯಲ್ಲಿ ಸಾಧಿಸಲು ಸಾಧ್ಯವಿದೆ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶ ಎಚ್.ಪಿ.ಸಂದೇಶ್ ಹೇಳಿದರು.

ತಾಲೂಕಿನ ಹೆತ್ತೂರು ಗ್ರಾಮದ ಹೆತ್ತೂರು ಹೋಬಳಿ ಬೆಳಗಾರರ ಸಂಘದ ಅವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೆತ್ತೂರು ಹೋಬಳಿ ಘಟಕದಿಂದ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಳಿಸಿದ ಸಂಪತ್ತು ಅಳಿದು ಹೋಗುತ್ತದೆ. ಆದರೆ ಪಡೆದ ಜ್ಞಾನ, ವಿದ್ಯೆ ಶಾಶ್ವತವಾಗಿ ಉಳಿಯುತ್ತದೆ. ಕನ್ನಡ ಭಾಷೆಯು ಬೇರೆಲ್ಲಾ ಭಾಷೆಗಳಿಗಿಂತ ವಿಶೇಷವಾಗಿದ್ದು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ. ಕನ್ನಡದ ಶ್ರೀಮಂತಿಕೆ, ಪರಂಪರೆ ಮತ್ತು ಕನ್ನಡದ ಸೊಗಡನ್ನು ಬೆಳೆಸಬೇಕು. ಈ ಜಾಗತಿಕ ಕಾಲಮಾನದಲ್ಲಿ ಬೇರೆ ಭಾಷೆಗಳ ಕಲಿಯುವಿಕೆ ಅನಿವಾರ್ಯವಾಗಿದೆ. ಆದರೆ ಮೊದಲ ಆದ್ಯತೆಯನ್ನು ಮಾತೃಭಾಷೆಗೆ ನೀಡಬೇಕು ಎಂದು ಹೇಳಿದರು.

ಹೆತ್ತೂರು ಹೋಬಳಿಯ ೭ ಪ್ರೌಢ ಶಾಲೆಗಳು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರು, ಸಾನ್ವಿ ಪಬ್ಲಿಕ್ ಸ್ಕೂಲ್ ಹೆತ್ತೂರು, ಸಿದ್ದಗಂಗಾ ಪ್ರೌಢಶಾಲೆ, ಶುಕ್ರವಾರ ಸಂತೆ, ಮಶ್ವರ ಪ್ರೌಢಶಾಲೆ, ಎಚ್.ವಿ.ಹಳ್ಳಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೆತ್ತೂರು, ಸರ್ಕಾರಿ ಪ್ರೌಢಶಾಲೆ ಹೊಂಗಡಹಳ್ಳ, ಸರ್ಕಾರಿ ಪ್ರೌಢಶಾಲೆ ವಣಗೂರು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಹೆತ್ತೂರಿನ ೨೪ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಪಡೆದರು.

ಕನ್ನಡ ಸಾಹಿತ್ಯ ಪರಿಷತ್ ಹೆತ್ತೂರು ಹೋಬಳಿ ಘಟಕ ಅಧ್ಯಕ್ಷ ಎಚ್.ಪಿ.ರವಿಕುಮಾರ್, ಶಿವರಾಜು, ಎಚ್.ಜಿ ದೇವರಾಜು, ಡಾ. ದೀಪು, ಯಶ್ವಂತ್, ರಾಧಾಕೃಷ್ಣ, ವಳಲಹಳ್ಳಿ ನಂದೀಶ್, ಸುರೇಶ್, ಹಡ್ಲಹಳ್ಳಿ ರಾಮಚಂದ್ರ, ನಿವೃತ ಶಿಕ್ಷಕ ಲವ, ಅತ್ತಿಗನಹಳ್ಳಿ ಸುರೇಶ್, ರೇಷ್ಮ ರಾಮಚಂದ್ರ, ಕೆ.ಬಿ.ಮಶ್, ಬಾಲುಗೌಡ, ಹೇಮಂತಕುಮಾರ್, ಸುಬ್ರಹ್ಮಣ್ಯ, ವೈಶಾಲಿ ಕೀರ್ತಿ, ಹೊಸಳ್ಳಿ ಜಗನ್ನಾಥ್ ಇದ್ದರು.

Share this article