ಮಠಗಳಿಂದ ಸಾಮಾಜಿಕ ಬದಲಾವಣೆಗೆ ಪ್ರೇರಣೆ: ರಾಜಯೋಗೇಂದ್ರ ಮಹಾಸ್ವಾಮೀಜಿ

KannadaprabhaNewsNetwork | Published : Feb 16, 2024 1:50 AM

ಸಾರಾಂಶ

ಸಿದ್ದಯ್ಯನಕೋಟೆಯಲ್ಲಿ ಕಾಯಕ ಯೋಗಿ ಬಸವಲಿಂಗ ಸ್ವಾಮೀಜಿ ಪಟ್ಟಾಧಿಕಾರ ರಜತ ಮಹೋತ್ಸವದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ನಿರಂಜನ ಜಗದ್ಗುರು ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮೀಜಿ ಮಾತನಾಡಿದರು.

ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು

ನಾಡಿನ ಮಠ ಮಾನ್ಯಗಳಿಂದ ಸಿಗುವಂತಹ ನೈತಿಕ ಶಿಕ್ಷಣದಿಂದ ಮಾನವನ ಬದುಕು ಹಸನಾಗುವುದಲ್ಲದೆ ಸಮಾಜದ ಬದಲಾವಣೆಗೆ ಪ್ರೇರಣೆಯಾಗಿದೆ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ನಿರಂಜನ ಜಗದ್ಗುರು ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಸಿದ್ದಯ್ಯನ ಕೋಟೆಯಲ್ಲಿ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾ ಮಠ, ಚಿತ್ತರಗಿ ಚಿಜ್ಯೋತಿ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಕ್ರೀಡಾ ಯುವಕ ಸಂಘದ ಸಹಯೋಗದಲ್ಲಿ ಗುರುವಾರ ಆರಂಭಗೊಂಡ ಕಾಯಕ ಯೋಗಿ ಬಸವಲಿಂಗ ಸ್ವಾಮೀಜಿ ಪಟ್ಟಾಧಿಕಾರ ರಜತ ಮಹೋತ್ಸವದ ಸಮಾರಂಬದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಶರಣರ ಪಾತ್ರ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದರು.

12ಶತಮಾನದಲ್ಲಿ ಬಸವಾದಿ ಪ್ರಮಥರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ನೈತಿಕ ಶಿಕ್ಷಣ ಬೋಧಿಸಿದರು. ಮೇಲು, ಕೀಳೆಂಬ ಮನೋಭಾವನೆ ದೂರ ಸರಿಸಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಬಸವಾದಿ ಶರಣರ ಹಾದಿಯಲ್ಲಿಯೇ ಸಾಗುತ್ತಿರುವ ನಾಡಿನ ಮಠ ಮಾನ್ಯಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿವೆ. ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಲಕ್ಷಾಂತರ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಜತೆಗೆ ಅವರಲ್ಲಿ ನಯ ವಿನಯ ಕಲಿಸುವ ಮೂಲಕ ಸಂಸ್ಕಾರವಂತರನ್ನಾಗಿಸುತ್ತಿವೆ ಎಂದರು.

ಮಹಾಂತ ಸ್ವಾಮೀಜಿ ಆಶೀರ್ವಾದದಿಂದ ಗಡಿ ಭಾಗದಲ್ಲಿ ತಲೆ ಎತ್ತಿರುವ ಇಲ್ಲಿನ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಬಸವಾದಿ ಶರಣರ ತತ್ವಾದರ್ಶಗಳನ್ನು ಉಣ ಬಡಿಸುತ್ತಾ 25 ವರ್ಷಗಳಿಂದ ಕಾಯಕ ತತ್ವವನ್ನು ಸಾರುತ್ತಾ ಸಾಮಾಜಿಕ, ಶೈಕ್ಷಣಿಕವಾಗಿ ಶ್ರೀ ಮಠವನ್ನು ನಾಡಿನಲ್ಲಿ ಗುರುತಿಸುವಂತೆ ಮಾಡಿರುವುದು ಸಂತಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಮಠವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಆಶಿಸಿದರು.

ಶಿವಮೊಗ್ಗ ಬೆಕ್ಕಿನ ಕಲ್ಮಠ ನಿರಂಜನ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ, ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಮಠ ಮಾನ್ಯಗಳ ಕೊಡುಗೆ ಅಪಾರ. ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿವೆ. 12ನೇ ಶತಮಾನದಿಂದಲೂ ದಾರ್ಮಿಕ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಕೂಡಲ ಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಶ್ರೀಮಾನ್ ನಿರಂಜನ ಜಗದ್ಗುರು ಡಾ. ಮಾತೆ ಗಂಗಾ ದೇವಿಯವರು ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು. ಭಕ್ತರಿಗೆ ದ್ವಜ ಗೀತೆ ಹಾಡಿ ಸರ್ವರಿಗೂ ಬಸವ ಒಳಿತನ್ನು ಮಾಡಲಿ ಎಂದು ಆಶೀರ್ವದಿಸಿದರು. ಶ್ರೀ ಮಠದ ಬಸವಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾದೀಶರು ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಇಳಕಲ್ ವಿಜಯ ಮಹಂತೇಶ್ವರ ಮಠದ ಗುರು ಮಹಾಂತ ಸ್ವಾಮೀಜಿ, ಶ್ರೀ ಮಠದ ಬಸವಲಿಂಗ ಸ್ವಾಮೀಜಿ, ವಿದ್ಯಾರ್ಥಿಗಳಾದ ಎಚ್.ಗಣೇಶ, ಟಿ.ಪ್ರಿಯಾ, ಎಸ್.ಕೆ.ಚಿನ್ಮಯ, ಶ್ರೀ ಮಠದ ಪಿ.ಆರ್. ಕಾಂತರಾಜ್, ಮುಖಂಡ ಮರಿಸ್ವಾಮಿ, ದಾವಣಗೆರೆ ಬಸವ ಬಳಗದ ಮಂದಾಕಿನ ತಾಯಿ ಇದ್ದರು.

ಲಿಂಗೈಕ್ಯ ಡಾ.ಮಹಾಂತ ಶಿವಯೋಗಿಗಳ ಆಶೀರ್ವಾದದಿಂದ ಹಿಂದುಳಿದ ತಾಲೂಕಿನಲ್ಲಿ ತಲೆ ಎತ್ತಿದ ವಿಜಯ ಮಹಂತೇಶ್ವರ ಮಠವನ್ನು ನಾಡಿನುದ್ದಕ್ಕೂ ಪರಿಚಯಿಸುವಲ್ಲಿ ಬಸವಲಿಂಗ ಶ್ರೀಗಳ ಶ್ರಮ ಅವಿಸ್ಮರಣೀಯ. ಹಲವು ಸವಾಲುಗಳ ನಡುವೆ ಸಾಗಿ ಬಂದ ಶ್ರೀ ಮಠ ರಜತ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆ ತರಿಸಿದೆ.

ಕೆ.ಬಸಣ್ಣ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ , ಸಿದ್ದಯ್ಯನ ಕೋಟೆ

Share this article