ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರು ತಾಲೂಕಿನಲ್ಲಿ ರೈತರ ಪಂಪ್‌ಸೆಟ್‌ನ ಮೋಟರ್‌ಗಳು ಸಾಲು ಸಾಲಾಗಿ ಸುಡುತ್ತಿವೆ. ವಿದ್ಯುತ್‌ನ ಏರಿಳಿತದಿಂದಾಗಿ ರೈತರ ಜಮೀನಿನ ಸ್ಟಾರ್ಟರ್ ಗಳು, ಮೋಟರ್ ಗಳು ಸುಟ್ಟು ಬರಗಾಲದಲ್ಲೂ ರೈತರಿಗೆ ಬರೆ ಎಳೆದಂತೆ ಆಗುತ್ತಿದೆ. ನಗರ ಭಾಗದ ಮೋಟರ್ ವೈಂಡಿಂಗ್ ವರ್ಕ್ಸ್ ಗಳು ಸುಟ್ಟ ಮೋಟರ್‌ಗಳಿಂದಲೇ ತುಂಬಿದ್ದು, ಇನ್ನು ಹಳ್ಳಿಗಳಲ್ಲಿ ಮೋಟರ್ ಸುತ್ತುವವರಿಗೂ ಇದರಿಂದ ಬಿಡುವಿಲ್ಲದ ಕೆಲಸ!. ನಗರ ಭಾಗದಲ್ಲಿ 20ಕ್ಕೂ ಹೆಚ್ಚು ಮೋಟರ್ ಸ್ಟೋರ್ ಅಂಗಡಿಗಳಿದ್ದು, ಹಳ್ಳಿಗಳಿಂದ ರೈತರ ಸುಟ್ಟ ಮೋಟರ್, ಸ್ಟಾರ್ಟರ್‌ಗಳು ಬಂದು ವೈಂಡಿಂಗ್ ಅಂಗಡಿ ತುಂಬುತ್ತಿವೆ. ತಾಲೂಕಿನಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಬೋರ್‌ವೆಲ್‌ಗಳಿವೆ. ಬೇಸಿಗೆ ಮತ್ತು ಬರಗಾಲದ ಬಿಸಿಗೆ ಬೋರ್‌ವೆಲ್ ನೀರು ಪಾತಾಳ ಸೇರುತ್ತಿದೆ. ಕೆಲ ವೊಮ್ಮೆ ಭೂಮಿಯ ಆಳದಲ್ಲಿರುವ ಮೋಟರ್ ಪಂಪ್‌ಗೆ ನೀರು ಸಿಗದೇ ಖಾಲಿ ಓಡಿ ಸುಟ್ಟು ಹೋಗುವುದು ನಿಜವಾದರೂ ವಿದ್ಯುತ್ ಏರಿಳಿತವೇ ಹೆಚ್ಚಿನ ಹಾನಿ ಮಾಡಲಿದೆ ಎಂಬುದು ನೂರರಲ್ಲಿ 80 ರೈತರ ಆರೋಪವಾಗಿದೆ. ಕೆಲವೊಮ್ಮೆ ಲೋ ವೋಲ್ಟೇಜ್, ಇನ್ನೊಮ್ಮೆ ಹೈ ವೋಲ್ಟೇಜ್‌ನಿಂದಾಗಿ ಟ್ರಾನ್ಸ್ ಫಾರ್ಮರ್ ಪೆಟ್ಟಿಗೆಗಳೇ ಸುಡುತ್ತಿವೆ, ಇನ್ನು ಮೋಟರ್ ಪಂಪ್‌ಗಳು ಹಾಳಾಗುವುದಿಲ್ಲವಾ ಎನ್ನುತ್ತಾರೆ ರೈತ ಚನ್ನಕೇಶವ. 5 ರಿಂದ 20 ಹೆಚ್‌ಪಿ ತನಕ ಇರುವ ಮೋಟರ್‌ಗಳು ಒಮ್ಮೆ ಸುಟ್ಟು ರಿಪೇರಿಗೆ ಬಂದರೆ ರೈತರಿಗೇ 5 ರಿಂದ ಹತ್ತು ಸಾವಿರ ಖರ್ಚು ಬರುತ್ತದೆ. ಮೋಟರ್ ಎತ್ತಿ ಇಳಿಸಿದ್ದಕ್ಕೆ 2 ರಿಂದ 3 ಸಾವಿರ ರೈತ ನೀಡಬೇಕಾಗುತ್ತದೆ. ರೈತರ ಉಪಕರಣಗಳಲ್ಲಿ ತೊಂದರೆಯಿದ್ದು ಸುಟ್ಟು ಹೋದರೆ ಒಂದು ಲೆಕ್ಕ. ಆದರೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿ ರೈತನಿಗೆ ತೊಂದರೆಯಾದರೆ ಹೇಗೆ? ವೋಲ್ಟೇಜ್ ಡ್ರಾಪ್ ನ ಸಮಸ್ಯೆಯಿಂದ ಈ ರೀತಿಯ ಹೆಚ್ಚಿನ ಹಾನಿಯಾಗುತ್ತದೆ ಎಂಬುದು ರೈತರ ಜೊತೆ ಮೋಟರ್ ರಿಪೇರಿ ಕಾರ್ಮಿಕರ ಆರೋಪವಾಗಿದೆ. ಬರಗಾಲದ ಈ ಹೊತ್ತಲ್ಲಿ ಕಡಿಮೆಯಾದ ಅಂತರ್ಜಲದಲ್ಲಿ ಇರುವ ನೀರಲ್ಲೇ ಅಡಿಕೆ, ತೆಂಗು ಉಳಿಸಿಕೊಳ್ಳಲು ಪರದಾಡುವ ರೈತನಿಗೆ ಹೀಗೆ ಪದೇ ಪದೇ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತೊಂದರೆಯಾಗುತ್ತಿದ್ದರೆ ರೈತ ಉಳಿಯುವುದಾರೂ ಹೇಗೆ? ಎಂಬುದು ತಾಲೂಕಿನ ರೈತರ ಅಳಲಾಗಿದೆ.ಇನ್ನು, ವಿದ್ಯುತ್ ವ್ಯತ್ಯಯವೇ ಮೋಟರ್ ಸುಡಲಿಕ್ಕೆ ಮುಖ್ಯ ಕಾರಣವಲ್ಲ. ಸುಮಾರು 700-800 ಅಡಿವರೆಗೂ ಬೋರ್‌ಗಳಿದ್ದು ನೀರಿನ ಮಟ್ಟ ಕಡಿಮೆಯಾಗಿ ಮೋಟರ್ ಗಳು ನೀರಿಲ್ಲದೇ ಖಾಲಿ ರನ್ ಆಗಿಯೂ ಹೋಗುತ್ತವೆ. ಬಹಳಷ್ಟು ರೈತರು ಕಂಡೆನ್ಸರ್ ಹಾಕಿ ನೀರು ಎತ್ತಿಕೊಳ್ಳುವುದು ಸಹ ಈ ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಬೆಸ್ಕಾಂ ಇಲಾಖೆ ಎಇಇ, ಪೀರ್ ಸಾಬ್.ಕೃಷಿ ಬಿಟ್ಟು ಗುಳೆ ಹೋಗಬೇಕಾದೀತು!ತಾಲೂಕಿನಲ್ಲಿ ಭೀಕರ ಬರಗಾಲವಿದ್ದು, ಅಂತರ್ಜಲ ಸಂಪೂರ್ಣ ಕುಸಿತ ಕಂಡಿದ್ದು, ತೋಟಗಾರಿಕೆ, ಕೃಷಿ ಚಟುವಟಿಕೆಗಳು ಸ್ತಬ್ಧವಾಗುವಂತಾಗಿದೆ. ಇಂಥ ಸಂದರ್ಭ ದಲ್ಲಿ ಬೆಸ್ಕಾಂ ಇಲಾಖೆಯಿಂದ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡದೆ ಕಳಪೆ ವಿದ್ಯುತ್‌ನಿಂದಾಗಿ ಮೋಟರ್, ಪಂಪ್‌ಸೆಟ್ಟುಗಳು ಸುಟ್ಟು ಹೋಗುತ್ತಿವೆ. ಒಂದು ಮೋಟರ್ ಸುಟ್ಟರೆ ಅದನ್ನು ಎತ್ತಲು ಇಳಿಸಲು ಮತ್ತು ಸುಟ್ಟಿರುವ ಮೋಟರ್ ಸುತ್ತಿಸಲು ಒಟ್ಟು ಹತ್ತು ಸಾವಿರ ರು. ಖರ್ಚಾಗುತ್ತದೆ. ವಾರಕ್ಕೆ 2 ಬಾರಿ ಮೋಟರ್ ಸುಡುತ್ತಿವೆ. ಇದಕ್ಕೆ ಹೊಣೆ ಯಾರು? ರೈತರನ್ನು ಕಾಪಾಡುವವರು ಯಾರು? ಇದು ಹೀಗೇ ಮುಂದುವರೆದರೆ ರೈತರು ಕೃಷಿ ಬಿಟ್ಟುಗುಳೆ ಹೋಗಬೇಕಾಗುತ್ತದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸುತ್ತಾರೆ.