ಧಾರವಾಡ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯ ರಿಸರ್ಚ್ ಪಾರ್ಕ್ ಹಾಗೂ ಹೆಡ್ ಹೆಲ್ಡ್ ಹೈ ಫೌಂಡೇಶನ್ ಮಧ್ಯೆ ಕೃತಕ ಬುದ್ಧಿಮತ್ತೆ ಬಳಕೆಯ ತರಬೇತಿ ಕುರಿತು ಮಂಗಳವಾರ ಒಡಂಬಡಿಕೆ ನಡೆಯಿತು.
ನಗರದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಐಐಟಿ ನಿರ್ದೇಶಕ ಡಾ. ಮಹಾದೇವ ಪ್ರಸನ್ನ ಹಾಗೂ ಹೆಡ್ ಹೆಲ್ಡ್ ಹೈ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಮದನ್ ಪದಕಿ ಒಡಂಬಡಿಕೆಗೆ ಸಹಿ ಹಾಕಿದರು.ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಸಾಕ್ಷರತೆ, ಕೃತಕ ಬುದ್ಧಿಮತ್ತೆ ಅಳವಡಿಕೆ, ದೈನಂದಿನ ಜೀವನದಲ್ಲಿ ಡಿಜಿಟಲ್ ಸಾಧನಗಳು ಹಾಗೂ ಮಾರುಕಟ್ಟೆ ಬಳಕೆ, ಗ್ರಾಮೀಣ ಭಾಗದಲ್ಲಿನ ಸವಾಲುಗಳಿಗೆ ಕೃತಕ ಬುದ್ಧಿಮತ್ತೆ ಪರಿಹಾರೋಪಾಯಗಳು, ತಂತ್ರಜ್ಞಾನದ ಅಳವಡಿಕೆಗೆ ಅಡತಡೆಗಳನ್ನು ಗುರುತಿಸುವುದು, ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಸ್ಥಿತ್ಯಂತರಕ್ಕೆ ಪೂರಕ ವಾತಾವರಣ ಸೃಷ್ಟಿಗೆ ತರಬೇತಿ ನೀಡುವ ಕುರಿತು ೩ ವರ್ಷಗಳ ಅವಧಿಯ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಹೆಡ್ ಹೆಲ್ಡ್ ಹೈ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಮದನ್ ಪದಕಿ ಮಾತನಾಡಿ, 2011ರಲ್ಲಿ ಆರಂಭಗೊಂಡ ನಮ್ಮ ಫೌಂಡೇಶನ್ ಪ್ರಸ್ತುತ 22 ರಾಜ್ಯಗಳ 100 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಭಾಗದ ಜನರು ಡಿಜಿಟಲ್, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ವಂಚಿತರಾಗಬಾರದು ಎಂದು ಆಸಕ್ತ ರೈತರು, ಗ್ರಾಮೀಣ ಭಾಗದ ಯುವಕರು, ಸಣ್ಣ ಉದ್ಯಮಗಳಿಗೆ 30 ಗಂಟೆಗಳ ಆನ್‌ಲೈನ್ ಹಾಗೂ ಆಫ್‌ಲೈನ್ ತರಬೇತಿ ನೀಡಲಾಗುವುದು. ಎಐ ತರಬೇತಿಯೊಂದಿಗೆ ಎಐ ದುರ್ಬಳಕೆಯಿಂದ ಮೋಸಗಳು ನಡೆಯುತ್ತಿರುವ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು. ದೇಶಾದ್ಯಂತ 10 ಸಾವಿರ ಜನರಿಗೆ ತರಬೇತಿ ನೀಡುವ ಉದ್ದೇಶವಿದ್ದು, 3-4 ತಿಂಗಳಲ್ಲಿ ಉತ್ತರ ಕರ್ನಾಟಕ ಭಾಗದ ಸಾವಿರ ಜನರಿಗೆ ತರಬೇತಿ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಶಶಿಧರ ಶೆಟ್ಟರ, ಪಂಕಜ್ ಸಿಂಗ್ ಠಾಕೂರ, ಐಐಐಟಿ ಡಾ. ದೀಪಕ ಕೆ.ಟಿ., ಉದ್ಯಮಿ ರಾಮ ಸುಬ್ರಮಣ್ಯ ಇದ್ದರು.