ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕುಡಿಯುವ ನೀರು ಹಾಗೂ ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಚಳವಳಿ ರೂಪಿಸಲು ಪಕ್ಷ ತೀರ್ಮಾನಿಸಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್.ಎಲ್. ರಾಧ ಸುಂದರೇಶ್ ಹೇಳಿದರು.ಜಿಲ್ಲೆಯ ಮೂಲ ನಿವಾಸಿಗಳಿಗೆ ಭೂಮಿ ಹಂಚಿಕೆಯಾಗಬೇಕು. ಎಲ್ಲಾ ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸೆಪ್ಟೆಂಬರ್‌ನಲ್ಲಿ ಮೊದಲ ಹಂತದಲ್ಲಿ ನಿವೇಶನ ರಹಿತರು ಮತ್ತು ಭೂಹೀನ ಮೂಲ ನಿವಾಸಿಗಳ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಮಂಡಳಿ ಸಭೆಯಲ್ಲಿ ಮಲೆನಾಡು ಭಾಗದ ಭೂರಹಿತ ಮೂಲ ನಿವಾಸಿಗಳು ಮತ್ತು ನಿವೇಶನ ರಹಿತರ ಸಮಸ್ಯೆ ಕುರಿತು ಚರ್ಚೆ ನಡೆಸಲಾಯಿತು. ಮಲೆನಾಡಲ್ಲಿ ಲಕ್ಷಾಂತರ ಎಕರೆ ಕಂದಾಯ ಭೂಮಿ ಇದ್ದು, ಬಹುಪಾಲನ್ನು ಶ್ರೀಮಂತರು ಒತ್ತುವರಿ ಮಾಡಿದ್ದಾರೆ. ಕೃಷಿ ಮೂಲ ಅರಿಯದ ಹೊರ ಜಿಲ್ಲೆ ಮತ್ತು ರಾಜ್ಯದ ದೊಡ್ಡ ಬಂಡವಾಳ ಗಾರರು ಭೂಮಿ ಖರೀದಿಸುತ್ತಿದ್ದಾರೆಂದರು.ಮಲೆನಾಡಿನಲ್ಲಿ ಕೃಷಿ ಕಾರ್ಮಿಕರಾಗಿದ್ದ ಅದರಲ್ಲಿ ಪ್ರಮುಖವಾಗಿ ದಲಿತ ವರ್ಗದವರು ತಮ್ಮ ಗ್ರಾಮದಲ್ಲೇ ಪರಕೀಯ ರಾಗುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಈಗಿನ ಕಾಂಗ್ರೆಸ್ ಸರ್ಕಾರ ಭೂಮಿ ಒಡೆತನವಿರುವ ಭೂ ಮಾಲೀಕರಿಗೆ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡಲು ಮುಂದಾಗುತ್ತಿದ್ದಾರೆ. ಭೂಹೀನ ಬಡವರ ಬಗ್ಗೆ ಯಾವುದೇ ಕಾಳಜಿ ಇಲ್ಲವೆಂದು ಟೀಕಿಸಿದರು.
ಈ ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ನರಸಿಂಹರಾಜಪುರ, ಕೊಪ್ಪ ಮತ್ತು ತರೀಕೆರೆ ತಾಲೂಕುಗಳಲ್ಲಿ ಕೂಲಿ ಕೆಲಸ ಮಾಡಿ ಹಲವಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿರುವ ಲಕ್ಷಾಂತರ ನಿವೇಶನ ರಹಿತರಿದ್ದು, ಈ ಕುರಿತು 2 ಪಕ್ಷದ ಜನಪ್ರತಿನಿಧಿಗಳು ಕೇವಲ ಹೇಳಿಕೆ ನೀಡುತ್ತಾ ಕಾಲಹರಣ ಮಾಡದೆ ನಿವೇಶನ ರಹಿತರಿಗೆ ನಿವೇಶನ ನೀಡಲು ಮುಂದಾಗಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಸಿಪಿಐ ತಾಲೂಕು ಕಾರ್ಯದರ್ಶಿ ಕೆ.ಎಸ್.ರಮೇಶ್ ಇದ್ದರು.