ದೇವಣಗಾಂವ ಸೇತುವೆ ಮೇಲೆ ಸಂಚಾರಕ್ಕೆ ಸಂಚಕಾರ

KannadaprabhaNewsNetwork | Published : Jul 17, 2024 12:45 AM

ಸಾರಾಂಶ

ತೆಗ್ಗು ದಿನ್ನೆಗಳಿಂದಾಗಿ ಸಂಚಾರ ಮಾಡಲು ಸವಾರರ ತೀವ್ರ ಪರದಾಟ. ಇನ್ನಾದರೂ ಆಗುತ್ತಾ ರಿಪೇರಿ?

ಕನ್ನಡಪ್ರಭ ವಾರ್ತೆ ಆಲಮೇಲ

ತಾಲೂಕಿನ ದೇವಣಗಾಂವ ಗ್ರಾಮದ ಭೀಮಾನದಿಗೆ ಅಡ್ಡಲಾಗಿರುವ ವಿಜಯಪೂರ ಮತ್ತು ಕಲ್ಬುರ್ಗಿ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿರುವ ದೇವಣಗಾಂವ ಸೇತುವೆ ಮೇಲ್ಭಾಗದಲ್ಲಿ ತೆಗ್ಗು ದಿನ್ನೆಗಳನ್ನು ಬಹಳ ಆಗಿರುವುದರಿಂದ ಸಂಚಾರಕ್ಕೆ ತೀವ್ರ ಸಂಚಕಾರ ಎದುರಾಗಿದೆ.

ಕಳೆದ ಹಲವು ವರ್ಷಗಳಿಂದ ಜನಪ್ರತಿನಿಧಿಗಳ ಮತ್ತು ಲೋಕೋಪಯೋಗಿ ಇಲಾಖೆ ನಿರ್ಲಕ್ಷಕ್ಕೆ ಒಳಗಾಗಿರುವ ಈ ಸೇತುವೆ ದುರಸ್ತಿಯಾಗದೆ ಮೇಲ್ಭಾಗದಲ್ಲಿ ಮಳೆಯ ನೀರು ನಿಂತು ನಿಂತು ಸೇತುವೆಯ ಕಂಬಗಳಲ್ಲಿ ನೀರು ಇಳಿಯುತ್ತಿದೆ. ಇದರಿಂದ ಕಂಬಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಶಿಥಿಲವಾಗುವ ಹಂತ ತಲುಪಿವೆ. ಇದು ಹೀಗೆ ಮುಂದುವರಿದರೆ ಕಲ್ಲಿನ ಕಂಬಗಳಲ್ಲಿ ಒಂದೇ ಒಂದು ಕಲ್ಲು ಕುಸಿದು ಅಪಾಯ ತಂದೊಡ್ಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸದ್ಯ ಸೇತುವೆ ತುಂಬೆಲ್ಲ ಹೊಂಡಗಳೇ ನಿರ್ಮಾಣವಾಗಿವೆ. ಸೇತುವೆ ಮೇಲ್ಭಾಗದ ತುಂಬಾ ನೀರು ನಿಂತು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಸಂಚಾರ ನಡೆಸುವುದು ಕೂಡ ತೀವ್ರ ದುಸ್ತರವಾಗಿದೆ. ಜತೆಗೆ ಬೈಕ್‌ ಸವಾರರಂತೂ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೇ ಸಂಚಾರ ನಡೆಸಬೇಕಿದೆ.

ಸೇತುವೆಯ 2 ಭಾಗದ ತಡೆಗೋಡೆಗಳು ಕೂಡ ಶಿಥಿಲಾವಸ್ಥೆಯಲ್ಲಿದ್ದು ಅವು ಕೂಡ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಸೇತುವೆಯು 1960 ರಲ್ಲಿ ಪ್ರಾರಂಭಗೊಂಡು 1963ರಲ್ಲಿ ಉದ್ಘಾಟನೆಗೊಂಡಿತ್ತು. ಸಂಪೂರ್ಣ ಕಲ್ಲಿನಿಂದ ನಿರ್ಮಾಣಗೊಂಡಿರುವ ಕಂಬಗಳು ಇಂದಿಗೂ ಗಟ್ಟಿಯಾಗಿವೆ. ಆದರೆ, ಸೇತುವೆಯನ್ನು ಮೇಲಿನ ರಸ್ತೆಯನ್ನು ರಿಪೇರಿ ಮಾಡಬೇಕಾದ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.

2003-04 ರಲ್ಲಿ ಸೇತುವೆಯ ಕಂಬಗಳು ಇನ್ನೂ ಸುಸ್ಥತಿಯಲ್ಲಿ ಇದ್ದ ಕಾರಣ ಅಂದಿನ ಸರ್ಕಾರ ಮೇಲ್ಭಾಗದ ರಿಪೇರಿ ಮಾಡಿ ಕೈ ತೊಳೆದುಕೊಂಡಿತ್ತು. ಆದರೆ ದುರಾದೃಷ್ಟವಶಾತ ದುರಸ್ತಿಗೊಂಡಿರುವ ಮೇಲ್ಭಾಗವೇ ದುರಸ್ತಿಗೆ ಬಂದಿದೆ.

ಈ ಸೇತುವೆಯು ಕಳೆದ ಏಳು ದಶಕಗಳಿಂದ ಕಲಬುರ್ಗಿ ವಿಜಯಪುರ ಅಲ್ಲದೆ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ, ತುಳಜಾಪುರ, ಲಾತೂರ್, ಆಂಧ್ರಪ್ರದೇಶ, ತೆಲಂಗಾಣದ ಹೈದರಾಬಾದ್ ಸೇರಿದಂತೆ ಎಲ್ಲ ಪ್ರಮುಖ ನಗರಗಳಿಗೆ ಸಂಪರ್ಕ ಸೇತುವೆಯಾಗಿದೆ. ಸದ್ಯದ ಸ್ಥಿತಿ ನೋಡಿದರೆ ಸೇತುವೆಯ ಮೇಲ್ಭಾಗ ಬಹಳ ಹದಗೆಟ್ಟು ಹೋಗಿದೆ. ಆದ್ದರಿಂದ ಕೂಡಲೇ ರಿಪೇರಿ ಮಾಡಿದರೆ ಇನ್ನಷ್ಟು ದಿನಗಳ ಕಾಲ ಈ ಸೇತುವೆ ಜನರ ಪ್ರಯಾಣಕ್ಕೆ ಅನುಕೂಲವಾಗುವುದು

-------ನಾವು ಪ್ರತಿ ದಿನ ಅಫಜಲಪೂರ ನಗರಕ್ಕೆ ವ್ಯಾಪಾರ ವಹಿವಾಟಿಗಾಗಿ ಹೋಗುವುದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೇತುವೆಗೆ ಭೇಟಿ ನೀಡಿ ನಮ್ಮ ಜೀವಹಾನಿ ಸಂಭವಿಸುವ ಮುಂಚೆ ಸೇತುವೆಯನ್ನು ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಡಬೇಕು.

- ದೇವಣಗಾಂವ ಗ್ರಾಮಸ್ಥರು

Share this article