- ರಾಷ್ಟ್ರೀಯ ಲೋಕ್ ಅದಾಲತ್ ಪೂರ್ವಭಾವಿ ಸಭೆಯಲ್ಲಿ ನ್ಯಾ.ಮಂಜಪ್ಪ ಸಲಹೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಣ್ಣ ಸಣ್ಣ ವಿಷಯಕ್ಕೆ ಹತ್ತಾರು ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಡದೇ, ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಕಕ್ಷಿದಾರರು ಪ್ರಕರಣಗಳ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು. ದ್ವೇಷ, ಅಸೂಯೇ, ವೈಷಮ್ಯ, ಅಹಂಕಾರಗಳನ್ನು ತ್ಯಜಿಸಿ ಬಾಳಬೇಕು ಎಂದು ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಹೇಳಿದರು.ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸುಪ್ರಿಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶದಂತೆ ಹತ್ತಾರು ವರ್ಷಗಳ ಹಳೇ ಕೇಸುಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಬಹುತೇಕ ಕಕ್ಷಿದಾರರು ಆರೋಗ್ಯ, ಸಮಯ ಹಾಗೂ ಹಣ ಕಳೆದುಕೊಳ್ಳುತ್ತ ಮಾನಸಿಕ- ದೈಹಿಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕೋರ್ಟ್‌ಗೆ ಅಲೆದಾಟ ತಪ್ಪಿಸಿ, ಶೀಘ್ರ ನ್ಯಾಯದಾನ ಉದ್ದೇಶದಿಂದ ಜನತಾ ನ್ಯಾಯಾಲಯದಲ್ಲಿ ವ್ಯಾಜ್ಯಗಳನ್ನು ಇತ್ಯರ್ಥ್ಯಪಡಿಸಿಕೊಳ್ಳುವುದು ಸೂಕ್ತ ಎಂದರು.ಜಿಲ್ಲಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಹಿಂದೆ ಪೂರ್ವಜರು ಗ್ರಾಮ ಪಂಚಾಯಿತಿ ಕಟ್ಟೆಯಲ್ಲೇ ವ್ಯಾಜ್ಯಗಳನ್ನು ನ್ಯಾಯ ತೀರ್ಮಾನ ಮೂಲಕ ಬಗೆಹರಿಸುತ್ತಿದ್ದರು. ಜನಸಂಖ್ಯೆ ಹೆಚ್ಚಾದಂತೆ ಹಳ್ಳಿ ಪಂಚಾಯಿತಿ ಕಟ್ಟೆ ಬಿಟ್ಟು ಸಣ್ಣ-ಸಣ್ಣ ವಿಷಯಕ್ಕೆ ಕೋರ್ಟ್‌ಗೆ ಬಂದು 10ರಿಂದ 20 ವರ್ಷಗಳವರೆಗೆ ಕಕ್ಷಿದಾರರು ಅಲೆದಾಡುತ್ತೀರಿ. ಇದನ್ನು ತಪ್ಪಿಸಲು ನ್ಯಾಯಾಂಗವು ರಾಜಿ ಸಂಧಾನದ ವ್ಯವಸ್ಥೆ ಜಾರಿಗೊಳಿಸಿದೆ. ಆ ಮೂಲಕ ವ್ಯಾಜ್ಯಗಳನ್ನು ಶೀಘ್ರ ಹಾಗೂ ಶಾಶ್ವತವಾಗಿ ಬಗೆಹರಿಸಿಕೊಳ್ಳಬಹುದು. ವ್ಯಾಜ್ಯಗಳನ್ನು ಬಗೆಹರಿಸುವುದು ಕಾನೂನು ಸೇವಾ ಸಮಿತಿ ಧ್ಯೇಯವಾಗಿದೆ. ಕಕ್ಷಿದಾರರು ರಾಜಿ ಸಂಧಾನದಡಿ ನ್ಯಾಯವಾದಿಗಳ ಮೂಲಕ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ನ್ಯಾಯ ಕಂಡುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಪಿ.ಜಯಪ್ಪ ಮಾತನಾಡಿದರು. ಡಿ.14ರಂದು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರ ಜಿಲ್ಲಾ ನ್ಯಾಯಾಧೀಶರು 2 ಟೇಬಲ್‍ಗಳ ಮೂಲಕ ಆಸ್ತಿ, ಕೌಟುಂಬಿಕ ಸಮಸ್ಯೆ ಇನ್ನಿತರೆ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲು ಕಕ್ಷಿದಾರರಿಗೆ ಪೂರ್ವಸಂಧಾನ ಸಭೆ ಮೂಲಕ ಕೆಲವು ಕಕ್ಷಿದಾರರಿಗೆ ಸಲಹೆ ನೀಡಲಾಯಿತು.ಹಿರಿಯ ಸಿವಿಲ್ ನ್ಯಾಯಧೀಶೆ ಪದ್ಮಶ್ರೀ ಎ.ಮನೋಳಿ, ಜೆಎಂಎಫ್‍ಸಿ ನ್ಯಾಯಾಧೀಶ ದೇವದಾಸ, ಹಿರಿಯ ನ್ಯಾಯಾಧೀಶ ಎಸ್.ಎನ್. ಪುಣ್ಯಕೋಟಿ, ಸಿಪಿಐ ಸುನಿಲ್‍ಕುಮಾರ, ನ್ಯಾಮತಿ ಸಿಪಿಐ ಜಯಪ್ಪ ನಾಯ್ಕ, ವಕೀಲರ ಸಂಘದ ಕಾರ್ಯದರ್ಶಿ ಪುರುಷೋತ್ತಮ ನಾಯ್ಕ, ಮಾಜಿ ಅಧ್ಯಕ್ಷ ಉಮೇಶ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಡಿವಾಳ ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು. ನ್ಯಾಯವಾದಿಗಳು ಕಕ್ಷೀದಾರರು ಇದ್ದರು.- - - -21ಎಚ್.ಎಲ್.ಐ2:
ಲೋಕ್ ಅದಾಲತ್ ಸಿದ್ಧತಾ ಸಭೆಯಲ್ಲಿ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಮಾತನಾಡಿದರು.