ಶಿವಮೊಗ್ಗ: ಮಲೆನಾಡಿನ ಜನರು ಹಲವು ವರ್ಷಗಳಿಂದ ಎದುರಿಸುತ್ತಿರುವ ‘ಮಂಗನ ಕಾಯಿಲೆ’ ಎಂಬ ಗಂಭೀರ ಕಾಯಿಲೆಗೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರ ಒದಗಿಸುವಂತೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರನ್ನು ಶುಕ್ರವಾರ ದೆಹಲಿ ಕಚೇರಿಯಲ್ಲಿ ಭೇಟಿಯಾಗಿ ಸಮಗ್ರ ಚರ್ಚೆ ನಡೆಸಿದರು.
ಮಂಗನ ಕಾಯಿಲೆ ಲಸಿಕೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ಎನ್‌ಐವಿ ಮೂಲಕ ಸಂಶೋಧನೆಗೆ ವೇಗ, ಶಿವಮೊಗ್ಗದಲ್ಲಿ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಉಪ-ಕೇಂದ್ರ ಸ್ಥಾಪನೆ ಮಾಡುವಂತೆ ಕೇಂದ್ರ ಸಚಿವರಿಗೆ ಆಗ್ರಹಿಸಿದರು.
ಮಂಗನ ಕಾಯಿಲೆ ನಿರ್ಮೂಲನೆಗೆ ಅಗತ್ಯವಾದ ವೈಜ್ಞಾನಿಕ ನೆರವು, ಆರ್ಥಿಕ ಬೆಂಬಲ ಹಾಗೂ ಎಲ್ಲ ಅಗತ್ಯ ಕ್ರಮಗಳನ್ನು ಅತ್ಯಂತ ಶೀಘ್ರವಾಗಿ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.ಈ ಬಾರಿ ಕೆ.ಎಫ್.ಡಿ. ರೋಗವು ಸಾಮಾನ್ಯಕ್ಕಿಂತ ಮೊದಲೇ ದಾರುಣವಾಗಿ ಮರುಕಳಿಸಿದ್ದು, 2024ರಲ್ಲಿ ಇದರಿಂದಾಗಿ 14 ಮಂದಿ ಸಾವನ್ನಪ್ಪಿದರೆ, 2025 ರಲ್ಲಿ ಈಗಾಗಲೇ 8 ರಿಂದ 10 ಮಂದಿ ಪ್ರಾಣ ಕಳೆದುಕೊಂಡಿದ್ದು, ಈ ನಿಟ್ಟಿನಲ್ಲಿ ಸಂಸದರ ಒತ್ತಾಯ ಪರಿಸ್ಥಿತಿಗಳ ಗಂಭೀರತೆಯನ್ನು ತೋರಿಸಿದೆ. ಶಾಶ್ವತವಾಗಿ ಉಪ-ಕೇಂದ್ರದ ಮೂಲಕ ಕಡಿಮೆ ಸಮಯದಲ್ಲಿ, ಸಮಗ್ರ ರೋಗ ಕಣ್ಗಾವಲು, ಮಾಹಿತಿ ಸಂಗ್ರಹ, ಅಧ್ಯಯನ ಸಾಧ್ಯವಾಗಲಿದೆ. ಈ ಪ್ರಾದೇಶಿಕ ಸಾರ್ವಜನಿಕ ಆರೋಗ್ಯ ಸನ್ನದ್ಧತೆಯನ್ನು, ಕೇಂದ್ರ ಸರ್ಕಾರದ ರಾಷ್ಟ್ರೀಯ "ಒಂದು ಆರೋಗ್ಯ " ಪರಿಕಲ್ಪನೆಯೊಂದಿಗೆ ಅಳವಡಿಸಿಕೊಳ್ಳುವಂತೆ ಕೇಳಿರುವ ಸಂಸದ ರಾಘವೇಂದ್ರ, ಗ್ರಾಮೀಣ ಮತ್ತು ಅರಣ್ಯ- ಅವಲಂಬಿತ ಸಮುದಾಯಗಳು ಇನ್ನು ಮುಂದೆ ಪುನರಾವರ್ತಿತ ಪ್ರಾಣಿಜನ್ಯ ಜೀವಭಯಕ್ಕೆ ಗುರಿಯಾಗಕೂಡದು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.
ಕೆಎಫ್‌ಡಿ ನಿರ್ವಹಣೆಗಾಗಿ ಕರ್ನಾಟಕಕ್ಕೆ ನೀಡುತ್ತಿರುವ ನಿರಂತರ ಮತ್ತು ಸಕಾಲಿಕ ಬೆಂಬಲಕ್ಕಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಂಸದ ರಾಘವೇಂದ್ರ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರ ತನ್ನ ಪರಿಣಾಮಕಾರಿ ಬೆಂಬಲವನ್ನು ಮುಂದುವರಿಸಲಿದ್ದು, ಏಳು ದಶಕಗಳಷ್ಟು ಹಳೆಯದಾದ, ಮಲೆನಾಡು ಪ್ರದೇಶಕ್ಕೆ "ವಾರ್ಷಿಕ ಶಾಪ "ದಂತಾಗಿರುವ ಮಂಗನ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಅಗತ್ಯವಾದ ವೈಜ್ಞಾನಿಕ ನೆರವು, ಆರ್ಥಿಕ ಬೆಂಬಲ ಮತ್ತು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.