ಸಮರ್ಪಕ ಯೂರಿಯಾ ಗೊಬ್ಬರ ಪೂರೈಸಲು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ

KannadaprabhaNewsNetwork |  
Published : Jul 11, 2025, 11:48 PM IST
11ಎಚ್‌ವಿಆರ್2 | Kannada Prabha

ಸಾರಾಂಶ

ಗೊಬ್ಬರದ ವಿಚಾರದಲ್ಲಿ ಬ್ಲ್ಯಾಕ್ ಮಾರ್ಕೆಟ್ ಪ್ರಾರಂಭ ಆಗಿದೆ. ಡೀಲರ್‌ಗಳು ಗೊಬ್ಬರವನ್ನು ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಹಾವೇರಿ: ರಾಜ್ಯದಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಉತ್ತಮವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆಗಿದೆ. ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇದೆ. ಆದರೆ, ಗೊಬ್ಬರ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತ್ಯಧಿಕ ಯೂರಿಯಾ ಅಗತ್ಯ ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆ ಮಾಡುವುದು ಕೃಷಿ ಇಲಾಖೆಯ ಕರ್ತವ್ಯ. ಕೃಷಿ ಇಲಾಖೆ ಯಾವುದೇ ಮುಂದಾಲೋಚನೆ ಇಲ್ಲದೇ ಕೆಲಸ ಮಾಡುತ್ತಿದೆ ಎಂದರು.

ಗೊಬ್ಬರದ ವಿಚಾರದಲ್ಲಿ ಬ್ಲ್ಯಾಕ್ ಮಾರ್ಕೆಟ್ ಪ್ರಾರಂಭ ಆಗಿದೆ. ಡೀಲರ್‌ಗಳು ಗೊಬ್ಬರವನ್ನು ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರುವ ವ್ಯವಸ್ಥೆ ಮಾಡುತ್ತಿದ್ದಾರೆ. ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಗೊಬ್ಬರ ಒದಗಿಸುವ ಕೆಲಸ ಆಗುತ್ತಿಲ್ಲ. ಕೃಷಿ ಸಚಿವರು ಈ ವರ್ಷದ ಅಗತ್ಯತೆಯ ಅನುಗುಣವಾಗಿ ಜಿಲ್ಲೆಯ ರೈತರ ಬೇಡಿಕೆ ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹೆಣ್ಣುಮಕ್ಕಳ ಮಾರಾಟ ಜಾಲ: ಹಾನಗಲ್ಲ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಹೆಣ್ಣುಮಕ್ಕಳು ಮಾರಾಟ ಜಾಲ ಪತ್ತೆಯಾಗಿರುವುದು ದುರಂತ. ಒಟ್ಟಾರೆ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಈ ತರದ ಚಟುವಟಿಕೆಗಳು ಸಮಾಜಕ್ಕೆ ಮಾರಕ. ಜಿಲ್ಲೆಯಲ್ಲಿ ಜೂಜು ಹೆಚ್ಚಾಗಿದೆ. ಮುಕ್ತವಾಗಿ ಇಸ್ಪೀಟ್ ಆಡುತ್ತಾರೆ. ಚಿಕ್ಕಮಕ್ಕಳನ್ನು ಬೇರೆ ಕಡೆಯಿಂದ ತಂದು ಮಾರಾಟ ಮಾಡುವ ಜಾಲ ಪತ್ತೆಯಾಗಿರುವುದು ದುರಂತ. ಇಂಥ ಜಾಲ ನಮ್ಮ ಜಿಲ್ಲೆಯಲ್ಲಿದೆ ಅನ್ನುವುದು ನಂಬಲು ಆಗುತ್ತಿಲ್ಲ ಎಂದರು.ಪ್ರಕರಣದ ಆರೋಪಿಗಳನ್ನು ಇನ್ನೂ ಬಂಧನ ಮಾಡಿಲ್ಲ. ಯಾರು ಮುಖ್ಯವಾಗಿ ದಂಧೆ ನಡೆಸುತ್ತಿದ್ದಾರೋ ಅವರನ್ನು ಬಂಧನ ಮಾಡಿಲ್ಲ. ಈ ಪ್ರಕರಣದಲ್ಲಿ ಎಸ್‌ಪಿ ಮುತವರ್ಜಿ ವಹಿಸಬೇಕು. ಹೆಣ್ಣುಮಕ್ಕಳ ಸುರಕ್ಷತೆ ಏನು? ಬ್ಯಾಗವಾದಿ ಗ್ರಾಮದಲ್ಲಿ ಆರೋಪಿ ಲಕ್ಕವ್ವ ಮನೆ ಎದುರಿಗೇ ಅಂಗನವಾಡಿ ಇದೆ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮಲಗಿಕೊಂಡಿದಿಯಾ? ಇಲಾಖೆಯಿಂದ ದೂರು ಕೊಟ್ಟಿಲ್ಲ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಡೀ ಜಿಲ್ಲೆಯಲ್ಲಿ ಯಾರು ಕಳ್ಳರಿದ್ದಾರೆ, ಅವರಿಗೆ ರಕ್ಷಣೆ ಇದೆ. ಗೂಂಡಾಗಳು ಎರಡು ಮೂರು ತಾಸಿನಲ್ಲಿ ಬಿಡುಗಡೆ ಆಗುತ್ತಾರೆ. ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರೇ ರಾಜಿ ಮಾಡುತ್ತಿದಾರೆ ಎಂಬ ಮಾಹಿತಿ ಇದೆ. ರಾಜೀ ಪ್ರಯತ್ನದ ಬಗ್ಗೆಯೂ ತನಿಖೆ ಆಗಬೇಕು. ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಸಚಿವರು, ಮುಖ್ಯಮಂತ್ರಿ ರಾಜಕೀಯ ಕುರ್ಚಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣನವರ ಇದ್ದರು. ಸಿಎಂ ಸಿದ್ದರಾಮಯ್ಯ ಮುಂದುವರಿಕೆ ಬಗ್ಗೆ

ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಲಿ: ಬೊಮ್ಮಾಯಿ

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಇರುತ್ತಾರೊ ಇಲ್ಲವೋ ಅನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ಹೇಳಬೇಕು. ಕಾಂಗ್ರೆಸ್ ಹೈಕಮಾಂಡ್ ಎಲ್ಲಿಯವರೆಗೆ ಸ್ಪಷ್ಟತೆ ಕೊಡುವುದಿಲ್ಲವೋ ಅಲ್ಲಿಯವರೆಗೂ ಈ ನಾಟಕ ನಡೆಯುತ್ತಿರುತ್ತದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 5 ವರ್ಷ ನಾನೇ ಸಿಎಂ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯನವರು ಎಷ್ಟು ಬಾರಿ 5 ವರ್ಷ ಇರುತ್ತೇನೆ ಅಂತ ಹೇಳುತ್ತಾರೊ ಅಷ್ಟು ಬಾರಿ ಅವರ ಮುಂದುವರಿಕೆ ಬಗ್ಗೆ ಪ್ರಶ್ನೆ ಬರುತ್ತದೆ. ಈ ವಿಚಾರದಲ್ಲಿ ಯಾರು ಮಾತನಾಡಬೇಕೋ ಅವರು ಸುಮ್ಮನೇ ಇದ್ದಾರೆ. ಹೈಕಮಾಂಡ್ ಎಲ್ಲಿವರೆಗೂ ಈ ಬಗ್ಗೆ ಸ್ಪಷ್ಟತೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಈ ನಾಟಕ ನಡೆಯುತ್ತಲೇ ಇರುತ್ತದೆ ಎಂದರು.ರಾಜ್ಯ ಸರ್ಕಾರದಲ್ಲಿ ಗುತ್ತಿಗೆ ನೌಕರರಿಗೂ ಸಂಬಳ ಕೊಡಲು ಹಣ ಇಲ್ಲ. ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ಮೂರ್ನಾಲ್ಕು ತಿಂಗಳಿಗೊಮ್ಮೆ ಸಂಬಳ ಹಾಕುತ್ತಿದ್ದಾರೆ ಎಂದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ