ಬ್ಯಾಡಗಿ: ಹಾವೇರಿ ಗದಗ ಲೋಕಸಭಾ ಕ್ಷೇತ್ರದ ನೂತನ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜೂ.20 ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಅಭಿನಂದನಾ ಸಭೆ ಏರ್ಪಡಿಸಲಾಗಿದೆ.
ಮಂಗಳವಾರ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಗದಗ-ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಯಗಳಿಸುವ ಮೂಲಕ ಸತತ 4ನೇ ಬಾರಿಗೆ ಕಮಲ ಅರಳಿಸಿದ್ದಲ್ಲದೇ ಸದರಿ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.ಮಾಜಿ ಸಂಸದ ಶಿವಕುಮಾರ ಉದಾಸಿಯವರ ಅಭಿವೃದ್ಧಿ ಕಾಮಗಾರಿ ಮತ್ತು ಅಭಿವೃದ್ಧಿ ಪರವಾದ ಚಿಂತನೆಗಳು ಬಿಜೆಪಿ ತನ್ನ ಗುರಿಯನ್ನು ಸುಲಭವಾಗಿ ತಲಪುವಂತೆ ಮಾಡಿದ್ದು ಕ್ಷೇತ್ರದ ಮತದಾರರು ಪಕ್ಷದ ಮೇಲಿಟ್ಟಿರುವ ನಂಬಿಕೆ ಕಾರಣವಾಗಿದೆ. ನಿರೀಕ್ಷಿತ ಮುನ್ನಡೆ ಸಾಧಿಸಲು ಸಾಧ್ಯವಾಗದಿದ್ದರೂ ಕೇಂದ್ರದಲ್ಲಿ ನಮ್ಮದೇ ಸರ್ಕಾರ ರಚನೆಯಾಗಿದ್ದು ಕಾಂಗ್ರೆಸ್ ಮತಕೊಟ್ಟು ತಪ್ಪು ಮಾಡಿದ್ದೇವೆ ಎನ್ನುವಂತೆ ಕ್ಷೇತ್ರದೆಲ್ಲೆಡೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ತೋರಿಸುತ್ತೇವೆ ಎಂದರು.
ಒಂದೇ ವರ್ಷಕ್ಕೆ ಬೇಡವಾದ ರಾಜ್ಯ ಸರ್ಕಾರ: ರಾಜ್ಯದ ಮತದಾರರನ್ನು ಉಚಿತ ಗ್ಯಾರಂಟಿ ಎಂಬ ಸಂಕೋಲೆಯಲ್ಲಿ ಸಿಲುಕಿಸಿ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದ ರಾಜ್ಯದ ಜನರಿಗೆ ಮೋಸವೆಸಗಿದ್ದು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರಸ್ ತಿರಸ್ಕರಿಸಿದ್ದಾರೆ, ಕೇವಲ 1 ವರ್ಷದಲ್ಲಿ ಪ್ರಸ್ತುತ ಸರ್ಕಾರ ಯಾರಿಗೂ ಬೇಡವಾಗಿದ್ದು, ದೇಶಕ್ಕೆ ನರೇಂದ್ರ ಮೋದಿಯೇ ಅಂತಿಮ ಸತ್ಯವೆಂಬ ತೀರ್ಪು ನೀಡಿದ್ದಾರೆ ಎಂದರು. ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮಾಜಿ ಶಾಸಕರು, ಜಿಪಂ. ತಾಪಂ. ಗ್ರಾಪಂ ಹಾಗೂ ಪುರಸಭೆಯ ಹಾಲಿ ಮಾಜಿ ಸದಸ್ಯರು ಚುನಾಯಿತ ಜನಪ್ರತಿನಿಧಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಸದಸ್ಯರು ಕಾರ‍್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಉಪಾಧ್ಯಕ್ಷ ಎನ್.ಎಸ್. ಬಟ್ಟಲಕಟ್ಟಿ ಹೇಳಿದರು.