ಹೆದ್ದಾರಿ ಕಾಮಗಾರಿ ವ್ಯವಸ್ಥಿತವಾಗಿ ನಿರ್ವಹಿಸಲು ಸಂಸದ ಚೌಟ ಸೂಚನೆ

KannadaprabhaNewsNetwork |  
Published : Jun 20, 2024, 01:10 AM IST
ಸಭೆಯಲ್ಲಿ ಮಾತನಾಡುತ್ತಿರುವ ಸಂಸದ ಕ್ಯಾ.ಬ್ರಿಜೇಶ್‌ ಚೌಟ. | Kannada Prabha

ಸಾರಾಂಶ

ಬಿ.ಸಿ.ರೋಡ್- ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು, ಕಾಮಗಾರಿಗಳನ್ನು ಅಲ್ಲಲ್ಲಿ ನಡೆಸುವ ಮೊದಲು ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ನಡೆಸಬೇಕು. ಸಂಪೂರ್ಣ ಕಾಮಗಾರಿಯನ್ನು ಸಂಘಟಿತವಾಗಿ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ಎಲ್ಲ ಕಾಮಗಾರಿಗಳನ್ನು ಯೋಜನಾಬದ್ಧ ಮತ್ತು ವ್ಯವಸ್ಥಿತವಾಗಿ ನಡೆಸುವಂತೆ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಇಲಾಖಾ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬಿ.ಸಿ.ರೋಡ್- ಅಡ್ಡಹೊಳೆ, ಸಾಣೂರು- ಬಿಕರ್ನಕಟ್ಟೆ, ಪೂಂಜಾಲಕಟ್ಟೆ- ಚಾರ್ಮಾಡಿ ಸೇರಿದಂತೆ ವಿವಿಧ ಮಹತ್ವದ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿವೆ. ಈ ಯೋಜನೆಗಳು ಪೂರ್ಣಗೊಂಡರೆ ಜಿಲ್ಲೆಯ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಪ್ರಗತಿ ಆಗಲಿದೆ ಎಂದು ಅವರು ಹೇಳಿದರು.

ಬಿ.ಸಿ.ರೋಡ್- ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು, ಕಾಮಗಾರಿಗಳನ್ನು ಅಲ್ಲಲ್ಲಿ ನಡೆಸುವ ಮೊದಲು ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ನಡೆಸಬೇಕು. ಸಂಪೂರ್ಣ ಕಾಮಗಾರಿಯನ್ನು ಸಂಘಟಿತವಾಗಿ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಬಿ.ಸಿ.ರೋಡ್‍ನಿಂದ ಮಾಣಿವರೆಗಿನ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಶೈಲಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಾರ್ವಜನಿಕರ ತಾಳ್ಮೆ ಪರೀಕ್ಷಿಸಿ ಕಾಮಗಾರಿ ನಡೆಸುವುದು ಬೇಡ. ರಾಷ್ಟ್ರೀಯ ಹೆದ್ದಾರಿ ಇಲಾಖೆಯು ತನ್ನ ಸಂಪೂರ್ಣ ಸಾಮರ್ಥ್ಯ, ಮಾನವ ಸಂಪನ್ಮೂಲ ಹಾಗೂ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಾಮಗಾರಿ ನಿರ್ವಹಿಸಬೇಕು. ಜುಲೈ 5ರೊಳಗೆ ಮೆಲ್ಕಾರ್, ಕಲ್ಲಡ್ಕ, ಮಾಣಿ ಮತ್ತು ಉಪ್ಪಿನಂಗಡಿ ಜಂಕ್ಷನ್‍ನಲ್ಲಿ ಸುಗಮ ಸಂಚಾರಕ್ಕೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಇರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಗಡುವು ನೀಡಿದರು.

ಕೇರಳ ಮಾದರಿ ತನ್ನಿ:

ತಲಪಾಡಿ- ಕಾಸರಗೋಡುವರೆಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಯಾವುದೇ ಸಮಸ್ಯೆಗಳಿಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ವಹಿಸಿದೆ. ಇದೇ ಮಾದರಿಯನ್ನು ಅನುಸರಿಸಿ ಕಾಮಗಾರಿ ನಡೆಸುವಂತೆ ಸಂಸದರು ಸೂಚಿಸಿದರು.

ಕಾರ್ಕಳ- ಮೂಡುಬಿದಿರೆ - ಮಂಗಳೂರು ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿಯಲ್ಲಿ ಸಮಸ್ಯೆ ಇರುವ ಸ್ಥಳಗಳನ್ನು ಹೊರತುಪಡಿಸಿ ಉಳಿದೆಡೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು. ಮೂಡುಬಿದಿರೆ ಬೈಪಾಸ್ ನಿರ್ಮಾಣಕ್ಕೆ ಭೂಸ್ವಾಧೀನಗೊಂಡ ಜಮೀನನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಶೀಘ್ರವೇ ಹಸ್ತಾಂತರಿಸಲು ಅಧಿಕಾರಿಗಳಿಗೆ ತಿಳಿಸಿದರು.

ತಲಪಾಡಿ- ಹೆಜಮಾಡಿ ಸರ್ವಿಸ್ ರಸ್ತೆ:

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಲ್ಲಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ. ಆದರೂ ಹಲವು ಕಡೆ ಪ್ರತಿನಿತ್ಯ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಗಳಾಗುತ್ತಿವೆ. ಈ ನಿಟ್ಟಿನಲ್ಲಿ ತಲಪಾಡಿಯಿಂದ ಹೆಜಮಾಡಿವರೆಗೆ ಸಂಪೂರ್ಣವಾಗಿ ವ್ಯವಸ್ಥಿತವಾಗಿ ಸರ್ವಿಸ್ ರಸ್ತೆ ನಿರ್ಮಿಸುವ ಬಗ್ಗೆ ವರದಿ ತಯಾರಿಸಿ ಸಲ್ಲಿಸುವಂತೆ ಎನ್‍ಎಚ್‍ಎಐ ಅಧಿಕಾರಿಗಳಿಗೆ ಸೂಚಿಸಿದರು. ಪುಂಜಾಲಕಟ್ಟೆ - ಚಾರ್ಮಾಡಿ ಹೆದ್ದಾರಿ ಕಾಮಗಾರಿ ಸಂದರ್ಭ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ಸ್ಥಳೀಯ ಗ್ರಾಮ ಪಂಚಾಯತಿಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಬೇಕು ಎಂದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿಪಂ ಸಿಇಒ ಡಾ.ಆನಂದ್ ಕೆ., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಝ್ಮಿ, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಪಿ.ಶ್ರವಣ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಆನಂದ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ