ನಂದಿಗಿರಿ ಪ್ರದಕ್ಷಿಣೆಗೆ ಚಾಲನೆ ನೀಡಿದ ಸಂಸದ ಡಾ.ಕೆ.ಸುಧಾಕರ್

KannadaprabhaNewsNetwork |  
Published : Feb 02, 2026, 01:15 AM IST
ಸಿಕೆಬಿ-2   ನಂದಿಗಿರಿ ಪ್ರದಕ್ಷಿ ಯಲ್ಲಿ ಸಂಸದ ಡಾ.ಕೆ.ಸುಧಾಕರ್‌ ಹೆಜ್ಜೆ ಹಾಕಿದರು | Kannada Prabha

ಸಾರಾಂಶ

1936 ರಲ್ಲಿ ಮಹಾತ್ಮ ಗಾಂಧೀಜಿಯವರು ನಂದಿಗಿರಿಧಾಮಕ್ಕೆ ನಡೆದುಕೊಂಡು ಹೋಗಿ 45 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಆ ಸಮಯದಲ್ಲಿ ಅವರು ನಂದಿ ಬೆಟ್ಟವನ್ನು ʼಆರೋಗ್ಯಧಾಮʼ ಎಂದು ಬಣ್ಣಿಸಿದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆರೋಗ್ಯ ಹಾಗೂ ಅಧ್ಯಾತ್ಮದ ಸಮ್ಮಿಲನದ ಗುರುತಾಗಿ ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದ ನಂದಿಗಿರಿ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ತಿಳಿಸಿದರು.

ಗ್ರಾಮದ ಮಾಘಮಾಸದ ಹುಣ್ಣಿಮೆಯ ಅಂಗವಾಗಿ ಭಾನುವಾರ ಸಂಜೆ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ದೇವಾಲಯದಿಂದ ನಂದಿಗಿರಿ ಪ್ರದಕ್ಷಿಣೆಗೆ ಚಾಲನೆ ನೀಡಿ ಮಾತನಾಡಿ, 1936 ರಲ್ಲಿ ಮಹಾತ್ಮ ಗಾಂಧೀಜಿಯವರು ನಂದಿಗಿರಿಧಾಮಕ್ಕೆ ನಡೆದುಕೊಂಡು ಹೋಗಿ 45 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಆ ಸಮಯದಲ್ಲಿ ಅವರು ನಂದಿ ಬೆಟ್ಟವನ್ನು ʼಆರೋಗ್ಯಧಾಮʼ ಎಂದು ಬಣ್ಣಿಸಿದ್ದರು. ನಂದಿ ಬೆಟ್ಟವನ್ನು ದಕ್ಷಿಣದ ಕಾಶಿ ಎಂದೂ ಕರೆಯಲಾಗುತ್ತದೆ. ತಮಿಳುನಾಡಿನ ತಿರುವಣಾಮಲೈನಲ್ಲಿ ಪ್ರತಿ ಪೌರ್ಣಮಿಗೆ ಅರುಣಾಚಲಗಿರಿಯ ಪ್ರದಕ್ಷಣೆ ಮಾಡಿದರೆ ಕೈಲಾಸವನ್ನು ಪ್ರದಕ್ಷಿಣೆ ಮಾಡಿದಷ್ಟೇ ಪುಣ್ಯ ಎಂಬ ನಂಬಿಕೆ ಇಂದಿಗೂ ಇದೆ. ಆದರೆ ದೂರದ ತಿರುವಣಾಮಲೈಗೆ ತೆರಳಲು ಆಗದು ಎಂದು ನಂದಿಗಿರಿಗೆ ಪ್ರದಕ್ಷಿಣೆ ಮಾಡಿದರೆ ಅದೇ ಪುಣ್ಯಲಭಿಸುತ್ತದೆ ಎಂದರು.

1928ರಲ್ಲಿ ದೊಡ್ಡಬಳ್ಳಾಪುರದ ಸುಬ್ಬರಾಯಪ್ಪ ಮತ್ತು ಗೌರಿಬಿದನೂರು ತಾಲೂಕು ನಾಮಗೊಂಡ್ಲು ಚಿಕ್ಕಣ್ಣ ಎಂಬುವರಿಂದ ಪ್ರಾರಂಭವಾಯಿತು. ಈ ಕಾರ್ಯಕ್ರಮಕ್ಕೆ ಹಲವು ದಶಕಗಳ ಇತಿಹಾಸವಿದೆ. ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರ ನಂದಿಗಿರಿಯನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತವನ್ನು ಸುತ್ತಿದಂತೆ ಎನ್ನುವ ನಂಬಿಕೆ ಈ ಭಾಗದ ಆಸ್ತಿಕರದ್ದಾಗಿದ್ದು, ಅದೇ ರೀತಿಯಲ್ಲಿ ಇಲ್ಲಿಯೂ ಶ್ರೇಷ್ಠವಾದ ಪ್ರದಕ್ಷಿಣೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದು ಹೇಳಿದರು. ಹುಣ್ಣಿಮೆ ಎಂದರೆ ಚಂದ್ರನು ಪೂರ್ಣರೂಪದಲ್ಲಿ ಬೆಳಗುವ ದಿನವಾಗಿದೆ. ಸೂರ್ಯ ಚಂದ್ರರು ಕಣ್ಣಿಗೆ ಕಾಣುವ ದೇವರೆಂದು ಎಲ್ಲರೂ ನಂಬುತ್ತಾರೆ. ಹಿಂದೂಗಳು ಮಾತ್ರವಲ್ಲದೆ, ಮುಸ್ಲಿಮರು ಕೂಡ ರಂಜಾನ್‌ ಸಮಯದಲ್ಲಿ ಚಂದ್ರನ ಗೋಚರತೆಯನ್ನು ಆಧರಿಸಿ ಹಬ್ಬವನ್ನು ಆಚರಿಸುತ್ತಾರೆ. ಆದ್ದರಿಂದ ಎಲ್ಲ ಧರ್ಮದವರೂ ಚಂದ್ರನನ್ನು ಶ್ರೇಷ್ಠವೆಂದು ಪರಿಗಣಿಸುತ್ತಾರೆ. ಮಾಘಮಾಸದ ಹುಣ್ಣಿಮೆಯ ದಿನ ಶ್ರೇಷ್ಠವಾಗಿದ್ದು, ಇದೇ ದಿನದಂದು ದಿಬ್ಬಗಿರಿ, ಬ್ರಹ್ಮಗಿರಿ, ನಂದಿಗಿರಿ (ನಂದಿಬೆಟ್ಟ), ಚೆನ್ನಗಿರಿ, ಗೋರ್ವಧನ ಗಿರಿ ಸೇರಿದಂತೆ ಪಂಚಗಿರಿಗಳ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಂದಿ ಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸುವುದು ಖುಷಿಯ ವಿಚಾರ. ಕುಟುಂಬ, ಸ್ನೇಹಿತರ ಬಳಗದೊಂದಿಗೆ ನಡೆದುಕೊಂಡು ಹೋಗುವುದರಿಂದ ವಿಶೇಷ ಅನುಭವ ಆಗುವುದು, ದಿನ ನಿತ್ಯ ಕಾಂಕ್ರೀರ್ಟ್ ಕಾಡಿನಲ್ಲಿ ಕೆಲಸದ ಒತ್ತಡದಲ್ಲಿ ಜೀವಿಸುವ ನಮಗೆ ಆಧ್ಯಾತ್ಮಿಕತೆಯ ಭಾವನೆಯಲ್ಲಿ ಬೆಟ್ಟ-ಗುಡ್ಡಗಳ ನಡುವೆ ಕಾಲ್ನಡಿಗೆಯಲ್ಲಿ ಸಾಗುವ ಗಿರಿ ಪ್ರದಕ್ಷಿಣೆಯು ದೈಹಿಕ ಕಸರತ್ತಿನ ಜತೆಗೆ ಮನಸ್ಸಿಗೂ ಖುಷಿ ನೀಡುತ್ತದೆ. ಗಿರಿಪ್ರದಕ್ಷಿಣೆಯ ಕಾರ್ಯಕ್ರಮದಿಂದ ಎಲ್ಲರಲ್ಲೂ ಭಕ್ತಿಭಾವ, ಆಧ್ಯಾತ್ಮಿಕ ಚಿಂತನೆ, ಮಾನಸಿಕ ನೆಮ್ಮದಿ ಹಾಗೂ ದೈಹಿಕ ಆರೋಗ್ಯ ದೊರೆಯಲಿದೆ. ಇದು ಆರೋಗ್ಯ ಹಾಗೂ ಅಧ್ಯಾತ್ಮದ ಸಮ್ಮಿಲನದ ಕಾರ್ಯಕ್ರಮವಾಗಿದೆ ಎಂದು ಹೇಳಿದರು.ಭಕ್ತರಿಗೆ ಅಗತ್ಯ ವ್ಯವಸ್ಥೆ:

ಪ್ರತಿ 4 ಕಿಲೋ ಮೀಟರ್‌ಗಳಿಗೆ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಆಯಾಸ ನೀಗಿಸಿಸಲು ಅಲ್ಲಲ್ಲಿ ಉಪಹಾರ, ಕಾಫಿ, ಟೀ, ಬಾದಾಮಿ ಹಾಲು, ಮಜ್ಜಿಗೆ, ಜ್ಯೂಸ್,ನೀರು, ಬಿಸ್ಕೆಟ್, ಗ್ಲುಕೋಸ್, ಚಾಕೋಲೇಟ್, ಕಲ್ಲುಸಕ್ಕರೆ, ಖರ್ಜೂರ ಸೇರಿದಂತೆ ಹಣ್ಣುಗಳನ್ನು ವಿತರಿಸಲಾಗುವುದು. ಕತ್ತಲೆಯಾಗುವುದರಿಂದ ದಾರಿಯುದ್ದಕ್ಕೂ ಲೈಟಿಂಗ್ ವ್ಯೆವಸ್ಥೆ, ಕಾಡು ಪ್ರಾಣಿಗಳು ಬರುವ ಸಾಧ್ಯತೆ ಇರುವುದರಿಂದ ಅರಣ್ಯ ಮತ್ತು ಪೋಲಿಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತು, ಇದಲ್ಲದೆ ಉಚಿತ ಆರೋಗ್ಯ ಶಿಬಿರ ಮತ್ತು ಔಷಧ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.

ನಂದಿ ಗಿರಿ ಪ್ರದಕ್ಷಿಣೆಯಲ್ಲಿ ಚಿಕ್ಕಬಳ್ಳಾಪುರ,ಶಿಡ್ಲಘಟ್ಟ,ಗೌರಿಬಿದನೂರು, ಚಿಂತಾಮಣಿ, ಬಾಗೇಪಲ್ಲಿ,ಬೆಂಗಳೂರು, ದೊಡ್ಡಬಳ್ಳಾಪುರ, ನೆಲಮಂಗಲ,ದೇವನಹಳ್ಳಿ, ವಿಜಯಪುರ, ಮಾಗಡಿ ತುಮಕೂರು, ಕೋಲಾರ,ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ವಿವಿಧಡೆಯಿಂದ ಭಕ್ತರು ಆಗಮಿಸಿದ್ದರು.

ಸಿಕೆಬಿ-2 ನಂದಿಗಿರಿ ಪ್ರದಕ್ಷಿ ಯಲ್ಲಿ ಸಂಸದ ಡಾ.ಕೆ.ಸುಧಾಕರ್‌ ಹೆಜ್ಜೆ ಹಾಕಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ