ಹೊನ್ನಾವರ: ತಾಲೂಕಿನ ಗುಂಡಬಾಳ ನದಿಯಿಂದ ನೆರೆಪೀಡಿತ ಪ್ರದೇಶದ ಕಾಳಜಿ ಕೇಂದ್ರಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಭೇಟಿ ನೀಡಿದರು.ಗುಂಡಿಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ನಂ. 2 ಶಾಲೆಗೆ ಭೇಟಿ ನೀಡಿ ಕಾಳಜಿ ಕೇಂದ್ರದಲ್ಲಿರುವ ನೆರೆ ಸಂತ್ರಸ್ತರೊಂದಿಗೆ ಮಾತನಾಡಿ, ಕಾಳಜಿ ಕೇಂದ್ರದಲ್ಲಿ ಕುಂದುಕೊರತೆಗಳನ್ನು ಆಲಿಸಿದರು. ಎಷ್ಟು ಮನೆಗಳಿಗೆ ನೀರು ನುಗ್ಗುತ್ತದೆ ಎಂದು ಅಧಿಕಾರಿಗಳ ಬಳಿ ಮಾಹಿತಿ ಪಡೆದರು. 150 ಮನೆಗೆ ಪ್ರವಾಹ ಭೀತಿ ಆವರಿಸುತ್ತದೆ ಎಂದು ಪಿಡಿಒ ಅಣ್ಣಪ್ಪ ಮುಕ್ರಿ ತಿಳಿಸಿದರು.
ತಾತ್ಕಾಲಿಕವಾಗಿ ಜನರೇಟರ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕಾಳಜಿ ಕೇಂದ್ರ ಎಂದಮೇಲೆ ಸಣ್ಣಪುಟ್ಟ ಸಮಸ್ಯೆ ಇದ್ದಿದ್ದೆ. ಸ್ವಲ್ಪ ಸುಧಾರಿಸಿಕೊಳ್ಳಿ ಎಂದು ಸಲಹೆ ನೀಡಿದರು. ಗ್ರಾಮದಲ್ಲಿ ಕಂದಾಯ ಜಾಗ ಇದ್ದಲ್ಲಿ ನಿವೇಶನ ನೀಡಲಾಗುವುದು. ಈ ಬಗ್ಗೆ ನಾನು ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ. ನಮ್ಮ ಮೇಲೆ ಭರವಸೆ ಇಡಿ ಎಂದರು.ನಂತರ ಗುಂಡಿಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ನಂ. 1 ಶಾಲೆಗೆ ತೆರಳಿ ಅಲ್ಲಿಯು ಸಹ ನೆರೆ ಸಂತ್ರಸ್ತರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ, ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ, ಮುಖಂಡರಾದ ಗೋವಿಂದ ನಾಯ್ಕ, ಗಣಪತಿ ನಾಯ್ಕ ಬಿ.ಟಿ., ಎಂ.ಎಸ್. ಹೆಗಡೆ ಕಣ್ಣಿ, ಎಚ್.ಆರ್. ಗಣೇಶ ಬಿಜೆಪಿ ಕಾರ್ಯಕರ್ತರು ಇದ್ದರು.ಮಳೆ ಅಬ್ಬರಕ್ಕೆ 5 ಮನೆ ಭಾಗಶಃ ಹಾನಿ
ಕುಮಟಾ: ತಾಲೂಕಿನಾದ್ಯಂತ ಸೋಮವಾರ ಮಳೆ ಅಬ್ಬರದಿಂದ ಸುರಿದಿದ್ದು, ಕುಮಟಾ ವಿಭಾಗದಲ್ಲೇ ಅತಿಹೆಚ್ಚು ದಾಖಲೆಯ ೨೨೧.೮ ಮಿಮೀ ಮಳೆ ಸುರಿದಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.ಕತಗಾಲ ಹೋಬಳಿಯಲ್ಲಿ ೧೫೯.೩ ಮಿಮೀ, ಗೋಕರ್ಣ ಭಾಗದಲ್ಲಿ ೭೩.೨ ಮಿಮೀ ಮಳೆಯಾಗಿದೆ. ಮಳೆಯಿಂದಾಗಿ ೫ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಮತ್ತು ಶಶಿಹಿತ್ತಲು, ಗುಂದ ಇನ್ನಿತರ ಕಡೆಗಳಲ್ಲಿ ೮ ಮನೆಗಳಿಗೆ ನೀರು ನುಗ್ಗಿದೆ.ಕೋನಳ್ಳಿಯ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ೨೫ ಕುಟುಂಬಗಳ ೩೭ ಮಂದಿ, ಊರಕೇರಿ ಕಡವು ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ೨೦ ಕುಟುಂಬಗಳ ೩೫ ಮಂದಿ ವಾಸ್ತವ್ಯ ಹೊಂದಿದ್ದಾರೆ.
ಕುಂಭದ್ರೋಣ ಎಂಬಂತೆ ಭಾನುವಾರ ರಾತ್ರಿಯಿಂದಲೇ ಸುರಿದ ಮಳೆಯ ಅಬ್ಬರಕ್ಕೆ ಕೆರೆ- ಕಟ್ಟೆಗಳೆಲ್ಲಾ ಉಕ್ಕಿ ಹರಿದಿದೆ. ಪಟ್ಟಣದ ವನ್ನಳ್ಳಿ, ಕಲ್ಸಂಕ, ಗುಂದ, ಶಶಿಹಿತ್ಲ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಂದು ನೀರು ನುಗ್ಗಿದ ಮನೆಗಳನ್ನು ವೀಕ್ಷಿಸಿದರು.ಈ ನಡುವೆ ಪಟ್ಟಣ ವ್ಯಾಪ್ತಿಯಲ್ಲಿ ಮಾಡಲಾದ ಒಳಚರಂಡಿ ಮ್ಯಾನ್‌ಹೋಲ್‌ಗಳಲ್ಲೂ ನೀರು ಉಕ್ಕಿ ಹರಿದು ಮೀನುಪೇಟೆ ರಸ್ತೆ, ಗುಜರಗಲ್ಲಿ ಇನ್ನಿತರ ಹಲವೆಡೆ ಸಂಚಾರಕ್ಕೂ ಕಿರಿಕಿರಿ ಅನುಭವಿಸುವಂತಾಗಿದೆ.
ಇದಲ್ಲದೇ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಮಣಕಿ ಮೈದಾನದ ಎದುರಿನ ಪಶು ಆಸ್ಪತ್ರೆ ಬಳಿ ಮ್ಯಾನ್‌ಹೋಲ್ ಕುಸಿಯತೊಡಗಿದ್ದು, ತೀವ್ರ ಅಪಾಯಕಾರಿಯಾಗಿದೆ. ಮ್ಯಾನ್‌ಹೋಲ್ ಮೇಲೆ ಆಕಸ್ಮಿಕವಾಗಿ ವಾಹನ ಸಂಚರಿಸಿದರೆ ಅಪಘಾತದ ಆತಂಕವಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.ಹೆಗಡೆ ರಸ್ತೆಯ ಹಳಕಾರ ಕ್ರಾಸ್ ಬಳಿ ಮಳೆ ನೀರು ತುಂಬಿ ಸುತ್ತಲಿನ ಪ್ರದೇಶ ಜಲಾವೃತವಾಗಿ ಜನವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಹಳಕಾರ ಅರಣ್ಯಪ್ರದೇಶದಿಂದ ಬರುವ ನೀರೆಲ್ಲ ವಿವೇಕ ನಗರದ ಐದನೆಯ ಅಡ್ಡ ರಸ್ತೆಯಲ್ಲೇ ಸಂಪೂರ್ಣ ಹರಿದು ಸುತ್ತಲ ನಿವಾಸಿಗಳು ಆತಂಕ ಪಡುವಂತಾಯಿತು.ಈ ಬಗ್ಗೆ ಮಾಹಿತಿ ಪಡೆದ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಬಂದು ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಸ್ವಚ್ಛತಾ ವಿಭಾಗದ ಅಧಿಕಾರಿ ವೀಣಾ ಹರಿಕಂತ್ರ ಬಂದು ತುರ್ತು ಕ್ರಮ ಕೈಗೊಂಡರು.