ಕನ್ನಡಪ್ರಭ ವಾರ್ತೆ ಉಡುಪಿ
ಕೇಂದ್ರ ರೈಲ್ವೆ ಖಾತೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಗುರುವಾರ ದೆಹಲಿಯಲ್ಲಿ ಭೇಟಿಯಾಗಿ, ರೈಲ್ವೆಗೆ ಸಂಬಂಧಿಸಿ ಉಡುಪಿ ಜಿಲ್ಲೆಯ ನಾಲ್ಕು ಪ್ರಮುಖ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಿದರು.ಪ್ರಸ್ತುತ ಇರುವ ಪಂಚಗಂಗಾ ರೈಲಿನ ಬಳಕೆದಾರರನ್ನು ಹೊರತುಪಡಿಸಿ, ತಡರಾತ್ರಿ ಉಡುಪಿ, ಕುಂದಾಪುರ, ಕಾರವಾರ ಕಡೆ ಪ್ರಯಾಣ ಬೆಳೆಸುವ ಅಸಂಖ್ಯಾತ ರೈಲು ಬಳಕೆದಾರರಿಗಾಗಿ ಪಡೀಲ್ ಬೈಪಾಸ್ ಮೂಲಕ ಹೊಸದಾಗಿ ಬೆಂಗಳೂರು - ಕಾರವಾರ ನಡುವೆ ರೈಲು ಓಡಿಸುವಂತೆ ಸಂಸದರು ರೈಲ್ವೆ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ರೈಲ್ವೆ ಸಚಿವರು ಸಹಮತ ವ್ಯಕ್ತಪಡಿಸಿದರು. ಜೊತೆಗೆ ಈಗಾಗಲೇ ಸಂಚರಿಸುತ್ತಿರುವ ಎರ್ನಾಕುಲಂ - ನಿಜಾಮುದ್ದೀನ್ ರೈಲಿಗೆ ಕುಂದಾಪುರದಲ್ಲಿ ನಿಲುಗಡೆ ನೀಡುವ ಸಂಸದರ ಬೇಡಿಕೆಗೂ ಸಚಿವರು ಒಪ್ಪಿಗೆ ನೀಡಿಕೊಂಡರು.
ಅಲ್ಲದೇ ಮತ್ಸ್ಯಗಂಧ ರೈಲಿನ ಬೋಗಿಗಳು ಅತ್ಯಂತ ಹಳೆಯದಾದ ಐ.ಸಿ.ಎಪ್. ಮಾದರಿಯದಾಗಿದ್ದು ತಕ್ಷಣವೇ ಅದನ್ನು ಆಧುನಿಕ ಎಚ್.ಎಚ್.ಬಿ. ಕೋಚಿಗೆ ಮೇಲ್ದರ್ಜೆಗೆ ಏರಿಸಬೇಕು ಎಂದು ಸಂಸದರು ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಸಚಿವರು ಭರವಸೆ ನೀಡಿದರು.ಮುಖ್ಯವಾಗಿ ಬಹುದಿನದ ಬೇಡಿಕೆಯಾದ ಕೊಂಕಣ ರೈಲ್ವೆ ವಿಭಾಗವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಬೇಕೆಂಬ ಮನವಿಯೊಂದಿಗೆ ಮಂಗಳೂರಿನ ಲೋಕಸಭಾ ಸದಸ್ಯರಾದ ಬ್ರಿಜೇಶ್ ಚೌಟ ಮತ್ತು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರಿಬ್ಬರು ಹಿಂದೆ ರೈಲ್ವೆ ಸಚಿವರಿಗೆ ಕೊಟ್ಟ ಮನವಿಯನ್ನು ನೆನಪಿಸಿದರು. ಈ ಬೇಡಿಕೆಗೆ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ ರಾಜ್ಯಗಳ ಸಚಿವರ ಸಹಮತವನ್ನು ವಿವರಿಸಿದ್ದಾರೆ ಎಂದು ಸಂಸದ ಕೋಟ ಅವರು ವಿವರಿಸಿದರು.
ಈ ಎಲ್ಲ ಬೇಡಿಕೆಗಳನ್ನು ಆಲಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೊಂಕಣ್ ರೈಲ್ವೆ ವಿಲೀನದ ಬಗ್ಗೆ ಕೂಡಲೇ ರಾಜ್ಯ ಸರ್ಕಾರದಿಂದ ವರದಿ ತರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.