- ಕಲ್ಲೇದೇವರಪುರ, ಸಂಗೇನಹಳ್ಳಿ, ಬೆಣ್ಣೆಹಳ್ಳಿ, ಬಸಪ್ಪನಹಟ್ಟಿ, ಗೌರಮ್ಮನಹಟ್ಟಿಗೆ ಡಿಸಿ, ಜಿಪಂ ಸಿಇಒ ಭೇಟಿ
- ಜಗಳೂರಿನ ಸಂಗೇನಹಳ್ಳಿ ಕೆರೆಗೆ ಸಂಸದೆ ಡಾ.ಪ್ರಭಾ ಬಾಗಿನ ಅರ್ಪಿಸಲು ತೆರಳಿದ ವೇಳೆ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದ್ದ ಗ್ರಾಮಸ್ಥರು
- ಸಂಗೇನಹಳ್ಳಿ ಕೆರೆ ಸುತ್ತ ಸ್ವಚ್ಛತೆಗೆ ಚಾಲನೆ, ಹೆದ್ದಾರಿ ಪಕ್ಕದ ಗ್ರಾಮಗಳ ಬಳಿ ಬಾಕ್ಸ್ ಚರಂಡಿಗಳ ನಿರ್ಮಾಣಕ್ಕೆ ಸೂಚನೆ- ಸಂಗೇನಹಳ್ಳಿ ಕೆರೆಯನ್ನು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲೂ ಅಭಿವೃದ್ಧಿ ಕ್ರಮ ಕೈಗೊಳ್ಳಲು ಸಂಸದೆ ಸಲಹೆ
ಕಳೆದ ವಾರ ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆಗೆ ಬಾಗಿನ ಅರ್ಪಿಸಲು ತೆರಳಿದ ವೇಳೆ ಕಲ್ಲೇದೇವರಪುರ, ಸಂಗೇನಹಳ್ಳಿ, ಬೆಣ್ಣೆಹಳ್ಳಿ, ಬಸಪ್ಪನಹಟ್ಟಿ, ಗೌರಮ್ಮನಹಟ್ಟಿ ಗ್ರಾಮಗಳ ಗ್ರಾಮಸ್ಥರು 10ಕ್ಕೂ ಹೆಚ್ಚು ಸಮಸ್ಯೆಗಳನ್ನು ಸಂಸದರ ಬಳಿ ಹೇಳಿಕೊಂಡಿದ್ದರು.
ಸಂಸದರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮತ್ತು ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರು ಭಾನುವಾರ ಕಲ್ಲೇದೇವರಪುರ, ಸಂಗೇನಹಳ್ಳಿ, ಬೆಣ್ಣೆಹಳ್ಳಿ, ಬಸಪ್ಪನಹಟ್ಟಿ, ಗೌರಮ್ಮನಹಟ್ಟಿ ಗ್ರಾಮಗಳಿಗೆ ಭೇಟಿ ನೀಡಿದರು. ಸಂಗೇನಹಳ್ಳಿ ಕೆರೆಯ ಸುತ್ತ ಸ್ವಚ್ಛತಾ ಕ್ರಮಕ್ಕೆ ಚಾಲನೆ ನೀಡಿದರು.
ಕಲ್ಲೇದೇವರಪುರ ಗ್ರಾಮದಲ್ಲಿನ ವಿದ್ಯುತ್ ಪರಿವರ್ತಕ ಸ್ಥಳಾಂತರಿಸಲು ಸೂಚನೆ ನೀಡಿದ ಮೇರೆಗೆ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಆಗಮಿಸಿ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಿದರು. ಸಂಗೇನಹಳ್ಳಿ ಗ್ರಾಮದ ಶಾಲಾ ಕೊಠಡಿ ದುರಸ್ತಿ ಮತ್ತು ಸೇತುವೆ ನಿರ್ಮಾಣ ಮಾಡಲು ಹಾಗೂ ಕಲ್ಲೇದೇವರಪುರ ಗ್ರಾಮದ ಸುಪ್ರಸಿದ್ಧ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನ ದುರಸ್ತಿಗೆ ಸ್ವಲ್ಪ ಸಮಯಾವಕಾಶದ ಬಗ್ಗೆ ಸಿಇಒ ಅವರು ಕೋರಿ, ಆದಷ್ಟು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಮತ್ತು ಸಿಇಒ ಅವರೊಂದಿಗೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಶಿವಮೂರ್ತಿ, ಜಗಳೂರು ತಹಸೀಲ್ದಾರ್, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಕುಮಾರಿ, ತಾಪಂ ಮಾಜಿ ಸದಸ್ಯ ಸೂರಪ್ಪ, ಮುಖಂಡ ಕೊಟ್ಟಿಗೆ ತಿಪ್ಪೇಸ್ವಾಮಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಇತರರು ಪಾಲ್ಗೊಂಡಿದ್ದರು. ಕಲ್ಲೇದೇವರಪುರ, ಸಂಗೇನಹಳ್ಳಿ, ಬೆಣ್ಣೆಹಳ್ಳಿ, ಬಸಪ್ಪನಹಟ್ಟಿ, ಗೌರಮ್ಮನಹಟ್ಟಿ ಗ್ರಾಮಗಳ ಸಮಸ್ಯೆಗಳನ್ನು ಆಲಿಸಲು ಇಡೀ ಜಿಲ್ಲಾಡಳಿತವನ್ನು ಗ್ರಾಮಗಳಿಗೆ ಕಳುಹಿಸಿಕೊಟ್ಟ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.
ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲಾಡಳಿತ ಜಗಳೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ನೀಡಿದರು.
-15ಕೆಡಿವಿಜಿ36: ಸಂಗೇನಹಳ್ಳಿ ಕೆರೆಯ ಸುತ್ತ ಸ್ವಚ್ಛತೆ ನಂತರ ಕಂಡು ಬಂದ ರಸ್ತೆ.