ಕನ್ನಡಪ್ರಭ ವಾರ್ತೆ ಶಿರಾ ಪ್ರಜ್ವಲ್ ರೇವಣ್ಣರದ್ದು ದೇಶದಲ್ಲಿ ನಡೆದ ದೊಡ್ಡ ಲೈಂಗಿಕ ಹಗರಣವಾಗಿದೆ. ಇದರಿಂದ ಇಡೀ ಪ್ರಪಂಚದಲ್ಲಿಯೇ ತಲೆ ತಗ್ಗಿಸುವಂತಾಗಿದೆ ಎಂದು ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಜೆ.ಎನ್.ರಾಜಸಿಂಹ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಶುಕ್ರವಾರ ಮಾತನಾಡಿದರು. ಸುಮಾರು 3000 ಹೆಣ್ಣು ಮಕ್ಕಳ ವಿಡಿಯೋ ಕ್ಲಿಪ್ ಇದ್ದಾವೆ ಎಂದರೆ ಆತಂಕ ಪಡುವಂತಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಈ ವಿಷಯ ಇವರ ಕುಟುಂಬಕ್ಕೆ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಶಾಸಕ ಎಚ್.ಡಿ.ರೇವಣ್ಣ ಹಲವಾರು ಅಮಾಯಕ ಹೆಣ್ಣು ಮಕ್ಕಳ ವಿರುದ್ದ ಲೈಂಗಿಕ ದೌರ್ಜನ್ಯ ನಡೆಸಿರುವುದು ಆತಂಕಕಾರಿಯಾಗಿದೆ. ಈ ರೀತಿ ಮಠಾಧೀಶರು ಹಾಗೂ ರಾಜಕಾರಣಿಗಳು ನಡೆದುಕೊಂಡಿರುವುದು ಈ ನಾಡಿನ ಜನತೆ ತಲೆ ತಗ್ಗಿಸುವಂತಾಗಿದೆ. ಪ್ರಜ್ವಲ್ ರೇವಣ್ಣ ಹಗರಣ ಬಯಲಾಗುವ ಸೂಚನೆ ಸಿಗುತ್ತಿದ್ದಂತೆ ಬಿಜೆಪಿ ಸರ್ಕಾರದ ಸಹಕಾರ ಪಡೆದು ಓಡಿ ಹೋಗಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಭರತ್ ಬೆಲ್ಲದಮಡು ಮಾತನಾಡಿ, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣವನ್ನು ಬಯಲಿಗೆ ತಂದಿರುವ ಅವರ ಚಾಲಕ ಹಾಗೂ ಮಾಧ್ಯಮದವರಿಗೆ ಸೂಕ್ತ ರಕ್ಷಣೆ ಕೊಡಬೇಕು. ಇದರ ಬಗ್ಗೆ ಅಮಿತ್ ಶಾ ಆಧಾರ ರಹಿತ ಎಂದು ಹೇಳಿದ್ದಾರೆ. ಎಚ್.ಡಿ.ರೇವಣ್ಣ ಉಡಾಫೆ ರೀತಿ ಮಾತನಾಡಿದ್ದಾರೆ. ಇವರಿಗೆ ಆತ್ಮಸಾಕ್ಷಿ ಇದ್ದರೆ ತಮ್ಮ ಪದವಿಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಶಿವಕುಮಾರ್ ಬೆಲ್ಲದಮಡು, ಗೋಪಾಲ್, ಪ್ರಧಾನ ಕಾರ್ಯದರ್ಶಿ ಹನುಮಂತರಾಯಪ್ಪ, ಗುಮ್ಮನಹಳ್ಳಿ ಮಂಜುನಾಥ್, ಶಿವಣ್ಣ ಕಲ್ಲರ್ದಗೆರೆ, ಸಣ್ಣಭೂತಣ್ಣ, ತಾಲೂಕು ಅಧ್ಯಕ್ಷ ವೀರಕ್ಯಾತಯ್ಯ, ಮಧುಗಿರಿ ಉಸ್ತುವಾರಿ ರಾಮಕೃಷ್ಣ, ಗೋಪಾಲ್, ಕುಮಾರ್, ಗಂಗಣ್ಣ ಹಾಜರಿದ್ದರು.