ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಕಾಫಿ ಬೆಳೆಗಾರರ ಭೂಮಿ ಹರಾಜು । ಕಾಫಿ ಬೆಳೆಗಾರರ, ಬ್ಯಾಂಕ್ ಅಧಿಕಾರಿಗಳ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಷ್ಟ್ರೀಕೃತ ಬ್ಯಾಂಕುಗಳು ಕಾಫಿ ಬೆಳೆಗಾರರ ಭೂಮಿಯನ್ನು ಆನ್ ಲೈನ್ ಮೂಲಕ ಹರಾಜು ಪ್ರಕ್ರಿಯೆಗೆ ನಿಗಧಿಪಡಿಸಿರುವ ದಿನಾಂಕವನ್ನು ಕೂಡಲೇ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿವರೆಗೆ ಮುಂದೂಡಬೇಕೆಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ ಗಳೊಂದಿನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಮಡಿಕೇರಿ, ಕೊಡಗು ಮುಂತಾದ ಪ್ರದೇಶಗಳಲ್ಲಿ ಕಾಫಿ ಬೆಳೆಯುವ ರೈತರು, ಬೆಳೆಗಾರರಿಗೆ ಬ್ಯಾಂಕುಗಳು ಕೆಸಿಸಿ ಲೋನ್ ಮೂಲಕ ಕೃಷಿ ಸಾಲವನ್ನು, ಕೃಷಿ ಸಾಲದ ನೀತಿ ನಿಯಮದ ಆಧಾರದ ಮೇಲೆ ಬೆಳೆ ಸಾಲ ಮತ್ತು ಇತರೆ ಸಾಲ ನೀಡಿದ್ದು, ಅನಾದಿಕಾಲದಿಂದಲೂ ಬೆಳೆಗಾರರು ಬ್ಯಾಂಕಿನಲ್ಲಿ ಹೊಂದಾಣಿಕೆಯ ವ್ಯವಹಾರ ಮಾಡಿಕೊಂಡು ಬಂದಿದ್ದಾರೆ. ಇದೀಗ ಸರ್ಫೆಸಿ ಕಾಯಿದೆ ಮೂಲಕ ರಾಜ್ಯದ ರೈತರು ಮತ್ತು ಕಾಫಿ ಬೆಳೆಗಾರರಿಗೆ ನೋಟಿಸ್ ನೀಡಿ ಮನೆ ಮತ್ತು ಆಸ್ತಿಯನ್ನು ಆನ್ ಲೈನ್ ವ್ಯವಸ್ಥೆಯಲ್ಲಿ ಹರಾಜು ಮಾಡಲು ನಿರ್ಧರಿಸುವುದು ಖಂಡನೀಯ ಎಂದರು.
ಹಲವಾರು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ, ಜಾಗತೀಕ ತಾಪಮಾನ, ಹವಾಮಾನ ವೈಪರೀತ್ಯ ಹಾಗೂ ಸತತವಾಗಿ ಸುರಿಯುವ ಭಾರಿ ಮಳೆಯಿಂದ ಶೀತದ ವಾತಾವರಣ ಹೆಚ್ಚಾಗಿ ಕಾಫಿ ಮತ್ತು ಇತರೆ ಬೆಳೆಗಳ ಇಳುವರಿ ಗಣನೀಯವಾಗಿ ಇಳಿಮುಖವಾಗುತ್ತಿದೆ. ಇತರೆ ಕಾರಣ ಗಳಿಂದ ಬೆಳೆಗಾರರು ತುಂಬಲಾರದ ನಷ್ಟ ಅನುಭವಿಸುತ್ತಿದ್ದಾರೆ. ಸರ್ಫೆಸಿ ಕಾಯ್ದೆಯಿಂದ ಬೆಳೆಗಾರರಿಗೆ ಸಮಸ್ಯೆ ಉಂಟಾಗುತ್ತಿದ್ದು, ಈ ವಿಚಾರ ವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದು ಹೇಳಿದರು.ಕಾಫಿ ಬೆಳೆಗಾರರ ನಷ್ಟದ ಪರಿಸ್ಥಿತಿಯಲ್ಲಿ ಸಾಲ ನೀಡಿದ ರಾಷ್ಟ್ರೀಕೃತ ಬ್ಯಾಂಕುಗಳು ರೈತರ, ಬೆಳೆಗಾರರ ಭೂಮಿ ಹರಾಜು ಪ್ರಕ್ರಿಯೆ ಕೈಗೊಂಡರೆ ಅವರ ಜೀವನಾಧಾರಕ್ಕೆ ಸಮಸ್ಯೆ ಉಂಟಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳು ಸದ್ಯ ನಿಗಿಧಿಪಡಿಸಿರುವ ಆನ್‌ಲೈನ್ ಹರಾಜು ಪ್ರಕ್ರಿಯೆಯನ್ನು ಮಾನವೀಯ ದೃಷ್ಟಿಯಿಂದ ಸ್ಥಗಿತಗೊಳಿಸಿ ಮುಂದಿನ 6 ತಿಂಗಳು ಅನಿರ್ಧಿಷ್ಟಾವಧಿವರೆಗೆ ಮುಂದೂಡಬೇಕು ಎಂದು ಸೂಚಿಸಿದರು.ಸಭೆಯಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕ ಎಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯನಿ ರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್ ಮತ್ತು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಹಾಗೂ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು. 22 ಕೆಸಿಕೆಎಂ 3ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಯಿತು.