ಕನ್ನಡಪ್ರಭ ವಾರ್ತೆ ಕೊಪ್ಪಳ
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಚಿವ ಶಿವರಾಜ ತಂಗಡಗಿ ಎಳನೀರು ಕುಡಿಸುವ ಮೂಲಕ ಸತ್ಯಾಗ್ರಹ ಮುಕ್ತಾಯಗೊಳಿಸುವಲ್ಲಿ ಯಶಸ್ವಿಯಾದರು.ಸೋಮವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಸಂಸದ ಸಂಗಣ್ಣ ಕರಡಿ ಅವರನ್ನು ಸಚಿವರಾದ ಕೃಷ್ಣ ಭೈರೇಗೌಡ, ಶಿವರಾಜ ತಂಗಡಗಿ ಭೇಟಿ ಮಾಡಿ, ಮನವೊಲಿಸಲು ಯತ್ನಿಸಿದರು. ಕೃಷ್ಣ ಭೈರೇಗೌಡ ಸ್ಥಳದಿಂದಲೇ ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಕೆ.ಜೆ. ಜಾರ್ಜ್ ಜತೆ ದೂರವಾಣಿ ಮೂಲಕ ಮಾತನಾಡಿ, ಸಂಸದ ಸಂಗಣ್ಣ ಕರಡಿ ಅವರಿಗೆ ಭರವಸೆ ನೀಡಿದರು. ಆದರೂ ಸಂಸದರು ಉಪವಾಸ ಮುಂದುವರೆಸಿದ್ದರು.
ಬಳಿಕ ಮಾಜಿ ಸಚಿವ ಕೆ.ಎಸ್. ಈಶ್ವರ ಅವರು ಸಚಿವರಾದ ಶಿವರಾಜ ತಂಗಡಗಿ, ಕೃಷ್ಣ ಭೈರೇಗೌಡ ಜತೆ ಮಾತುಕತೆ ನಡೆಸಿ, ಉಪವಾಸ ಕೈಬಿಡಲು ಮನವಿ ಮಾಡಿದರು.ಈ ವೇಳೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಆದೇಶದಿಂದ ರೈತರಿಗೆ ಅನುಕೂಲವೇ ಇದೆ. ಸುತ್ತೋಲೆಯಲ್ಲಿ 10ನೇ ಕ್ರಮಾಂಕದ ಮಾಹಿತಿಯಲ್ಲಿ ಗೊಂದಲವಿದ್ದು, ಇದನ್ನು ಸರಿಪಡಿಸಲಾಗುವುದು. ಕ್ಯಾಬಿನೆಟ್‌ನಲ್ಲಿ ಈ ಕುರಿತು ಚರ್ಚೆ ಮಾಡಿ, ರೈತರ ಹಿತದೃಷ್ಟಿಯಿಂದ ಸೂಕ್ತ ಆದೇಶ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ ಎಂದರು.ಕೆ.ಎಸ್. ಈಶ್ವರಪ್ಪ ಮಾತನಾಡಿ, ಸಚಿವರ ಭರವಸೆ ಮೇರೆಗೆ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ಯಹ ಕೈಬಿಟ್ಟಿದ್ದಾರೆ. ನ.9ರಂದು ಆದೇಶ ಮಾರ್ಪಾಡು ಮಾಡಿ ಆದೇಶ ಮಾಡಬೇಕು. ಇಲ್ಲದಿದ್ದರೆ ಬಿಜೆಪಿಯಿಂದ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಸಂಸದ ಸಂಗಣ್ಣ ಕರಡಿ ಮಾತನಾಡಿ, ಸಚಿವರ ಭರವಸೆ ಮೇರೆಗೆ ಉಪವಾಸ ಕೈಬಿಡುತ್ತಿದ್ದೇನೆ. ಎಲ್ಲವೂ ಒಮ್ಮೆಲೇ ಆಗಬೇಕು ಎಂದರೆ ಆಗುವುದಿಲ್ಲ. ನ.9ರಂದು ಸೂಕ್ತ ನಿರ್ಧಾರ ಕೈಗೊಂಡು ರೈತರ ಹಿತ ಕಾಯುತ್ತಾರೆ ಎನ್ನುವ ವಿಶ್ವಾಸದೊಂದಿಗೆ ಉಪವಾಸ ಕೈಬಿಡುವುದಾಗಿ ಹೇಳಿದರು.ಮಾಜಿ ಸಚಿವ ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಸೋಮಲಿಂಗಪ್ಪ ಸೇರಿದಂತೆ ಅನೇಕರು ಇದ್ದರು.