ಗ್ರಾಮೀಣ ಪ್ರದೇಶದ ಪ್ರತಿಭೆಗಳ ಅನ್ವೇಷಣೆ ಚಿಂತನೆಯಿಂದ ಜ. 28, 29ರಂದು ನಗರದ ನಗರಸಭಾ ಕ್ರೀಡಾಂಗಣದಲ್ಲಿ ಸಂಸದರ ಕ್ರೀಡಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ರಾಣಿಬೆನ್ನೂರು: ಗ್ರಾಮೀಣ ಪ್ರದೇಶದ ಪ್ರತಿಭೆಗಳ ಅನ್ವೇಷಣೆ ಚಿಂತನೆಯಿಂದ ಜ. 28, 29ರಂದು ನಗರದ ನಗರಸಭಾ ಕ್ರೀಡಾಂಗಣದಲ್ಲಿ ಸಂಸದರ ಕ್ರೀಡಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ದೇಶದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಬೇಕು ಎಂಬ ಕನಸಿದೆ. ಈ ನಿಟ್ಟಿನಲ್ಲಿ ಮುಂದಿನ ಹತ್ತು ವರ್ಷದ ದೂರದೃಷ್ಟಿ ಇಟ್ಟುಕೊಂಡು ಕ್ರೀಡಾ ಮಹೋತ್ಸವ ನಡೆಸಲಾಗುತ್ತಿದೆ. ಸಂಸದ ಬಸವರಾಜ ಬೊಮ್ಮಾಯಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು. ಬಿಜೆಪಿ ಶಹರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ ಮಾತನಾಡಿ, ಕಬಡ್ಡಿ, ವಾಲಿಬಾಲ್, ಖೋಖೋ, ಹಗ್ಗಜಗ್ಗಾಟ ಸ್ಪರ್ಧೆಗಳು ಗುಂಪು ವಿಭಾಗದಲ್ಲಿ ಜರುಗಲಿವೆ. ಅಥ್ಲೆಟಿಕ್ಸನಲ್ಲಿ 100 ಮೀ, 400 ಮೀ ಓಟ, 4*100 ಮೀ. ರೀಲೆ, ಗುಂಡು ಎಸೆತ, ಚಕ್ರ ಎಸೆತ, ವಿಕಲ ಚೇತನರಿಗಾಗಿ 50 ಮೀ. ಓಟ, ಗೋಣಿ ಚೀಲದ ಓಟ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಸ್ಥಳೀಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಶ ಶಿರಗೇರಿ, ಚೋಳಪ್ಪ ಕಸವಾಳ, ಪರಮೇಶ ಗೂಳಪ್ಪನವರ, ನಿಂಗರಾಜ ಕೋಡಿಹಳ್ಳಿ, ಅಮೋಘ ಬಾದಾಮಿ, ಅನಿಲಕುಮಾರ ಸಿದ್ದಾಳಿ, ರಾಜು ಬಣಕಾರ, ಸಿದ್ಧು ಚಿಕ್ಕಬಿದರಿ, ಪವನಕುಮಾರ ಮಲ್ಲಾಡದ ಸುದ್ದಿಗೋಷ್ಠಿಯಲ್ಲಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನರೇಗಾ ಯೋಜನೆಯಲ್ಲಿ ಮಹ್ಮಾತ ಗಾಂಧಿ ಹೆಸರು ಬದಲಾವಣೆ ಕುರಿತು ಕಾಂಗ್ರೆಸ್ ಪಕ್ಷದವರು ವೃಥಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅದು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆಂಡ್ ಅಜೀವಿಕಾ ಎಂಬುದಾಗಿದೆ. ದೇಶದ ಸರ್ವತೋಮುಖ ಅಭಿವೃದ್ಧಿ ಹಾಗೂ ಗ್ರಾಮೀಣ ಭಾಗದ ಸಬಲೀಕರಣ ನೀಡುವ ಉದ್ದೇಶವನ್ನು ಇದು ಒಳಗೊಂಡಿದೆ. ಇದರಿಂದ 125 ದಿವಸ ಕೂಲಿ ಕಾರ್ಮಿಕರಿಗೆ ಸಂಬಳ ನೀಡಲಾಗುವುದು. ಈ ಹಿಂದೆ ಮನರೇಗಾ ಯೋಜನೆಯಲ್ಲಿ ವೇತನ ತಡವಾಗುತ್ತಿತ್ತು. ಆದರೆ ವಿಬಿರಾಮ್‌ಜಿ ಯೋಜನೆಯಡಿ ಒಂದು ವಾರದಲ್ಲಿ ವೇತನ ಬರುತ್ತದೆ. ಕೆಲವೊಂದು ಬದಲಾವಣೆ ಮಾಡಿ ಈ ಯೋಜನೆ ತ್ವರಿತಗತಿಯಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದವರು ಯೋಜನೆಯ ಸಂಪೂರ್ಣ ವಿವರ ತೆಗೆದುಕೊಂಡು ಆರೋಪ ಮಾಡಲಿ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.