ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದ ಆವರಣದಲ್ಲಿ ಭಾನುವಾರ ನಡೆದ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 109ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಸಿಗಬೇಕು. ಇದಕ್ಕಾಗಿ ಸರ್ಕಾರಗಳು ಹಾಗೂ ಮಠಗಳು ಜೊತೆಯಾಗಿ ಕೆಲಸ ಮಾಡಬೇಕು ಎಂದು ಆಶಿಸಿದರು.
ಸುತ್ತೂರು ಮಠದ ಗುರು ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶ್ರೀ ಮಠವು ಸಮಾಜ ಸೇವೆಗೆ ತನ್ನದೆ ಆದ ಕೊಡುಗೆ ನೀಡುತ್ತಿದೆ. ಪ್ರಾಚೀನ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿರುವುದಲ್ಲದೇ, ಆಧುನಿಕ ಶಿಕ್ಷಣ ಪದ್ಧತಿ ಅಳವಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಇಂತಹ ಮಾದರಿ ಕೆಲಸವನ್ನು ಸರ್ಕಾರದ ಜೊತೆಗೂಡಿ ಮಠಮಾನ್ಯಗಳು ಮಾಡಿದರೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ ಎಂದರು.12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆ ಮಾಡಲು ಶ್ರಮಿಸಿದರು. ಲಿಂಗ ತಾರತಮ್ಯ ಹೋಗಲಾಡಿಸಲು, ಸ್ತ್ರೀ ಸಮಾನತೆ ದೊರಕಿಸಲು, ಎಲ್ಲರಿಗೂ ಸಮಾನ ಅವಕಾಶ ನೀಡುವ ಆಲೋಚನೆಗಳನ್ನು ಸಮಾಜದ ಮುಂದೆ ಪ್ರತಿಪಾದಿಸಿದರು. ಕರ್ನಾಟಕದ ನೆಲದಲ್ಲಿ ಮಠಗಳು, ಶರಣರು ಸಮಾಜ ಸುಧಾರಣೆ ಮಾಡಿಕೊಂಡು ಬರುತ್ತಿದ್ದಾರೆ. ಈಗಲೂ ಜನರ ಅನೇಕ ಸಮಸ್ಯೆಗಳನ್ನು ಸುತ್ತೂರು ಮಠ ಪರಿಹಾರ ಒದಗಿಸುತ್ತಿದೆ ಎಂದು ಅವರು ತಿಳಿಸಿದರು.
ವಿಶ್ವದಲ್ಲಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ದೇಶಗಳಲ್ಲಿ ಧರ್ಮ, ಪರಂಪರೆ, ಆಧ್ಯಾತ್ಮಿಕತೆಯಲ್ಲಿ ನಂಬಿಕೆ ಇಟ್ಟಿರುವ ದೇಶ ನಮ್ಮದು. ಬೇರೆ ದೇಶಗಳಲ್ಲಿ ಧರ್ಮದ ಮೇಲಿನ ನಂಬಿಕೆ ಕಡಿಮೆಯಾಗುತ್ತಿದ್ದರೆ ನಮ್ಮಲ್ಲಿ ಹೆಚ್ಚಾಗುತ್ತಿದೆ. ನಮ್ಮ ಜನ್ಮಭೂಮಿಯಲ್ಲಿ ಇಂದಿಗೂ ದೇವರ ಮೇಲೆ ನಂಬಿಕೆಯಿದ್ದು, ಸರ್ವ ಧರ್ಮ ಸಮಭಾವ ಹೊಂದಿದ್ದಾರೆ. ನಮ್ಮಲ್ಲಿ ಧರ್ಮವೇ ಶ್ರೇಷ್ಠ ಎಂದು ಅವರು ತಿಳಿಸಿದರು.
ಶಾಂತಿ ಸ್ಥಾಪಿಸಿದ ಮಠ
ರಾಜೇಂದ್ರ ಶ್ರೀಗಳು ತಮ್ಮ ಇಡೀ ಬದುಕನ್ನೇ ಸಮಾಜಕ್ಕೆ, ಸೇವೆಗೆ ಸಮರ್ಪಿಸಿದವರು. ಶ್ರೀಗಳ ಹೃದಯ ಬೆಣ್ಣೆಗಿಂತಲೂ ಮೃದುವಾಗಿತ್ತು. ಸತ್ಪುರುಷರ ಹೃದಯ ಅವರದು. ಅವರ ಬದುಕು ತ್ಯಾಗ ಮತ್ತು ಸೇವೆಯ ಸಂಗಮ. ಅಂತಹ ವಿಶೇಷ ಗುಣ ಅವರಲ್ಲಿತ್ತು. ಅವರು ಈ ಭಾಗದಲ್ಲಿ ಮಾತ್ರವಲ್ಲ ಹಲವೆಡೆ ಮನೆ ಮನೆಯ ದೀಪವಾಗಿ ಜೀವಂತವಾಗಿ ಬೆಳೆಗುತ್ತಿದ್ದಾರೆ. ಸೇವೆ, ಶಿಕ್ಷಣದ ಮಹಾನ್ ವೃಕ್ಷ ಸ್ಥಾಪಿಸಿ ಎಲ್ಲರ ಮನದಲ್ಲಿ ನೆಲೆಸಿದ್ದಾರೆ ಎಂದರು.
----
ಆಧುನಿಕ ಕಾಲದಲ್ಲಿ ನೂತನ ತಂತ್ರಜ್ಞಾನಗಳು ದಿನದಿಂದ ದಿನಕ್ಕೆ ಅಭಿವೃದ್ಧಿ ಆಗುತ್ತಿದ್ದರೂ, ನಮ್ಮ ಸಂಸ್ಕೃತಿ ಪರಂಪರೆಗೆ ಮೊದಲು ಆದ್ಯತೆ ನೀಡಬೇಕು. ನಮ್ಮತನವನ್ನು ಎಂದಿಗೂ ನಾವು ಬಿಟ್ಟು ಕೊಡಬಾರದು.
----
ಶರಣರು ರಚಿಸಿರುವ ವಚನಗಳಲ್ಲಿ ಜೀವನದ ಸಾರವೇ ಅಡಗಿದೆ. ಸಾಮಾನ್ಯರೂ ಅರ್ಥ ಮಾಡಿಕೊಳ್ಳಬಹುದಾದ ತತ್ವ ವಚನದಲ್ಲಿ ಇವೆ. ಹೀಗಾಗಿ, ವಚನ ಸಾಹಿತ್ಯವು ದೇಶದ ಎಲ್ಲಾ ಭಾಗದಲ್ಲೂ ದೊರೆಯುವಂತೆ ಆಗಬೇಕು. ಇದಕ್ಕಾಗಿ ಬಹುಭಾಷೆಗೆ ವಚನ ಸಾಹಿತ್ಯವನ್ನು ಅನುವಾದಿಸಬೇಕು.- ಸದ್ಗುರು ಶ್ರೀ ಮಧುಸೂದನ ಸಾಯಿ, ಮುದ್ದೇನಹಳ್ಳಿ ಸತ್ಯಸಾಯಿ ಮಂದಿರ