ಸಿರಿಗೆರೆ: ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿರುವ ಪುರಾತನ ತಾಳೆಗರಿಗಳನ್ನು ರಕ್ಷಿಸಿಡುವ ಮಹತ್ತರ ಕೆಲಸಕ್ಕೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಸಕ್ತಿ ತೋರಿದ್ದಾರೆ.ಹಲವಾರು ದಶಕಗಳಿಂದ ಒಂದಿಲ್ಲೊಂದು ಬಗೆಯಲ್ಲಿ ಸಂರಕ್ಷಣೆ ಮಾಡುತ್ತಾ ಉಳಿಸಿಕೊಂಡು ಬಂದಿರುವ ತಾಳೆಗರಿಗಳನ್ನು ಖಾಯಂ ಆಗಿ ಗಣಕಯಂತ್ರದ ಸಹಾಯದಿಂದ ಕಾಪಾಡಿಡುವ ಕೆಲಸಕ್ಕೆ ಸ್ವಾಮೀಜಿ ಮುಂದಾಗಿದ್ದಾರೆ. ಜಾನಪದ ಕಲೆಗಳಾದ ವೀರಗಾಸೆ, ಭಜನೆ, ಸೋಬಾನೆ ಪದಗಳನ್ನು ಮುಂದಿನ ತಲೆಮಾರಿಗೆ ಒಯ್ಯಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿರುವ ಶ್ರೀಗಳು ಪುರಾತನ ತಾಳೆಗರಿಗಳನ್ನು ಕಾಪಾಡುವ ಕೆಲಸಕ್ಕೆ ಮುಂದಾಗಿರುವುದು ಸಂತಸದ ವಿಷಯವಾಗಿದೆ.ಮಠದ ಸಂಗ್ರಹದಲ್ಲಿ ಅಪೂರ್ವವಾದ ತಾಳೆಗರಿಗಳು ಭಂಡಾರವೇ ಇದೆ. ಅವುಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ೧೨ನೆಯ ಶತಮಾನ ಶರಣರ ವಚನ ಸಾಹಿತ್ಯ ಮತ್ತು ಅವರ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ತಾಳೆಗರಿಗಳು ಇರುವುದು ವಿಶೇಷವಾಗಿದೆ. ಅಮೂಲ್ಯ ಸಾಹಿತ್ಯ ಪರಂಪರೆಯ ಇರುವ ತಾಳೆಗರಿಗಳನ್ನು ಈಗ ಸಹಜವಾಗಿ ರಕ್ಷಿಸಿಟ್ಟುಕೊಳ್ಳುವುದು ದುಸ್ತರವಾಗಿದೆ. ಆದುದರಿಂದ ಅವುಗಳನ್ನು ಕಂಪ್ಯೂಟರಿನ ದಾಖಲೆಯೊಳಗೆ ಇರಿಸುವ ಪ್ರಯತ್ನ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ ನಡೆಯಲಿದೆ.
ಅದಕ್ಕಾಗಿ ಈಗಾಗಲೇ ವಿಶೇಷ ಸೌಲಭ್ಯದ ಗಣಕ ಯಂತ್ರ ಮತ್ತು ಸ್ಕ್ಯಾನರ್ ಯಂತ್ರಗಳನ್ನು ತರಿಸಲಾಗಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ, ಕಲಬುರ್ಗಿ ವಿಶ್ವವಿದ್ಯಾನಿಲಯದಲ್ಲಿನ ತಾಳೆಗರಿಗಳ ಸಂಪತ್ತನ್ನು ರಕ್ಷಿಸಿಡುವ ಕೆಲಸದಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಅಶೋಕ್ ದೊಮ್ಮಲೂರು, ಮಠದಲ್ಲಿನ ತಾಳೆಗರಿಗಳ ರಕ್ಷಣೆ ಮಾಡುವ ಹೊಣೆಯನ್ನೂ ಹೊತ್ತಿದ್ದಾರೆ. ಅವರು ಈಗಾಗಲೇ ಶ್ರೀಗಳ ಜೊತೆಗೆ ಈ ಕುರಿತು ಚರ್ಚೆ ಮಾಡಿದ್ದಾರೆ.ನಮ್ಮ ತಂಡವು ಮೊದಲು ಮಠಕ್ಕೆ ಭೇಟಿ ನೀಡಿ ತಾಳೆಗರಿಗಳ ಮೇಲಿನ ಧೂಳು ತೆಗೆಯುವುದು, ನಂತರ ಲೆಮೆನ್ ಗ್ರಾಸ್ ದ್ರಾವಣ ಬಳಸಿ ಅವುಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತೇವೆ. ಲೆಮನ್ ಗ್ರಾಸ್ ದ್ರಾವಣದಿಂದ ಸ್ವಚ್ಛಗೊಳಿಸುವುದರಿಂದ ತಾಳೆಗರಿಗಳಲ್ಲಿನ ವೈವಿಧ್ಯಮಯ ಸಾಹಿತ್ಯವು ಸ್ಪುಟುವಾಗಿ ಓದಲು ಕಣ್ಣಿಗೆ ಕಾಣುತ್ತದೆ. ಅವುಗಳ ಪರಿವಿಡಿಯನ್ನು ಸಹ ಸರಳವಾಗಿ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ ಎಂದು ಅಶೋಕ್ ದೊಮ್ಮಲೂರು ತಿಳಿಸಿದರು.
ಒಮ್ಮೆ ಸ್ವಚ್ಛಗೊಳಿಸಿದ ನಂತರ ತಾಳೆಗರಿಗಳ ಸ್ಕ್ಯಾನಿಂಗ್ ಆರಂಭಿಸುತ್ತೇವೆ. ಇದಕ್ಕಾಗಿ ಕೆಲವು ಸೂಕ್ಷ್ಮ ಯಂತ್ರಗಳು ಬೇಕು. ಅವುಗಳನ್ನು ಒದಗಿಸಲು ಶ್ರೀಗಳು ಈಗಾಗಲೇ ಮುಂದಾಗಿದ್ದಾರೆ. ಪುರಾತನ ಸಂಸ್ಕೃತಿ ಮತ್ತು ಸಾಹಿತ್ಯವನ್ನು ರಕ್ಷಿಸುವ ವಿಚಾರದಲ್ಲಿ ಅವರಿಗೆ ಇರುವ ಆಸಕ್ತಿಯಿಂದ ಇದು ಸಾಧ್ಯವಾಗಿದೆ ಎಂದರು.ತಮಿಳು ಭಾಷೆ ಬಾರದ ಶ್ರೀಗಳು ಪ್ರಾನ್ಸ್ ದೇಶದ ರಾಷ್ಟ್ರೀಯ ಗ್ರಂಥಾಲಯದಲ್ಲಿ ದೊರೆತ ತಮಿಳು ತಾಳೆಗರಿಗಳಲ್ಲಿ ಬಸವೇಶ್ವರ ಕಾಲದ ಉಲ್ಲೇಖ ಇರುವುದನ್ನು ಗಮನಿಸಿ ಸ್ವತಃ ತಮಿಳು ಕಲಿತು ಅದರ ಅಭ್ಯಾಸದಲ್ಲಿ ತೊಡಗಿರುವುದು ಅವರ ಅಭಿರುಚಿಯನ್ನು ತೋರುತ್ತದೆ. ಶ್ರೀಗಳು ಪುರಾತತ್ವ ದಾಖಲೆ, ತಾಳೆಗರಿ, ಪುರಾತನ ಸಾಹಿತ್ಯ, ಸಂಸ್ಕೃತ ಮತ್ತು ಕನ್ನಡ ಸಾಹಿತ್ಯದಲ್ಲಿ ಅಪಾರ ವಿದ್ವತ್ ಸಾಧಿಸಿದ್ದಾರೆ ಎಂದಿದ್ದಾರೆ.ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅವರು ಶರಣ ಸಾಹಿತ್ಯ ಪ್ರಚಾರ ಕೈಗೊಂಡಿದ್ದಾರೆ. ಸಂಸ್ಕೃತ ವಿದ್ವಾಂಸರ ವ್ಯಾಕರಣವನ್ನು ಕಂಪ್ಯೂಟರಿಗೆ ಅಳವಡಿಸಿದ್ದಾರೆ. ಇತ್ತೀಚೆಗೆ ಸುಮಾರು ೨೨ ಸಾವಿರ ವಚನಗಳನ್ನು ಮೊಬೈಲ್ ತಂತ್ರಜ್ಞಾನಕ್ಕೆ ಅಳವಡಿಸಿದ್ದಾರೆ. ಹೀಗಿರುವುದರಿಂದ ಮಠದಲ್ಲಿನ ತಾಳೆಗರಿಗಳನ್ನು ರಕ್ಷಿಸುವ ನಮ್ಮ ಕೆಲಸವು ಮಹತ್ವದ್ದಾಗಿದೆ ಎಂದರು.೧೩ ವರ್ಷಗಳಿಂದ ರಾಜ್ಯ ಹಾಗೂ ಹೊರ ರಾಜ್ಯದ ಹಲವು ವಿಶ್ವವಿದ್ಯಾನಿಲಯಗಳು, ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿನ ತಾಳೆಗರಿಗಳನ್ನು ಕಾಪಿಡುವ ಕೆಲಸವನ್ನು ನಮ್ಮ ತಂಡ ಮಾಡುತ್ತಿದೆ. ಇತ್ತೀಚೆಗೆ ಶ್ರೀಗಳನ್ನು ಭೇಟಿಯಾದ ಸಂದರ್ಭದಲ್ಲಿ ಅವರು ನಮ್ಮ ಕೆಲಸವನ್ನು ಮೆಚ್ಚಿಕೊಂಡರು ಎಂದು ತಿಳಿಸಿದರು.