ಮಣಿಪಾಲ ಆರೋಗ್ಯ ಕಾರ್ಡ್: ನೋಂದಣಿಗೆ ನ.30 ಕೊನೇ ದಿನ

| Published : Nov 09 2025, 03:30 AM IST

ಸಾರಾಂಶ

ಕಾರ್ಡ್‌ದಾರರು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಕಟೀಲು ಹಾಗೂ ಗೋವಾ ಸೇರಿದಂತೆ ಅನೇಕ ಆಸ್ಪತ್ರೆಗಳಲ್ಲಿ ಪ್ರಯೋಜನ ಪಡೆಯಬಹುದು.

ಕಾರ್ಕಳ: ಮಣಿಪಾಲ ಆರೋಗ್ಯ ಕಾರ್ಡ್-2025ರ ನೋಂದಣಿಗೆ ನ.30 ಕೊನೆಯ ದಿನ ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವ್ಯವಸ್ಥಾಪಕ ಮೋಹನ್ ಶೆಟ್ಟಿ ತಿಳಿಸಿದ್ದಾರೆ.

ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಈ ಯೋಜನೆ, ಈಗ 25ನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ವರ್ಷ 1.25 ಲಕ್ಷ ಕುಟುಂಬಗಳು ಯೋಜನೆಗೆ ಸೇರಿಕೊಂಡಿದ್ದು, ಒಟ್ಟು 6.72 ಲಕ್ಷ ಸದಸ್ಯರಿದ್ದಾರೆ. ಕಾರ್ಡ್‌ದಾರರು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಕಟೀಲು ಹಾಗೂ ಗೋವಾ ಸೇರಿದಂತೆ ಅನೇಕ ಆಸ್ಪತ್ರೆಗಳಲ್ಲಿ ಪ್ರಯೋಜನ ಪಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಕಾರ್ಕಳ ಪತ್ರಕರ್ತರ ಸಂಘ ಅಧ್ಯಕ್ಷ ಮೊಹಮ್ಮದ್ ಷರೀಫ್ ಮಾತನಾಡಿ, ಪತ್ರಕರ್ತರಿಗೆ ಆರೋಗ್ಯ ಭದ್ರತೆ ನೀಡುವಲ್ಲಿ ಮಣಿಪಾಲದ ಆಸ್ಪತ್ರೆಗಳ ಸೇವೆ ಅಪಾರವಾಗಿದೆ ಎಂದರು.

ಆಶ್ಲೋನ್, ಸಂದೀಪ್, ನಾರಾಯಣ ನಾಯಕ್, ಉದಯ್ ಮುಂಡ್ಕೂರು ಹಾಗೂ ಹರೀಶ್ ಬೈಲೂರು ಉಪಸ್ಥಿತರಿದ್ದರು.