ಕನ್ನಡಪ್ರಭ ವಾರ್ತೆ ಮೈಸೂರು
ವಿಶೇಷಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯ ಹಾಗೂ ವಿಶೇಷಚೇತನರು ಹಾಗೂ ಆರೈಕೆದಾರರು ನಡುವೆ ಕಾರ್ಯನಿರ್ವಹಿಸುವ ಸ್ವಯಂ ಸೇವಾಸಂಸ್ಥೆಗಳ ಫೋರಂ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಸಮಾರೋಪದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ನಿರ್ದೇಶಕ ಟಿ. ರಾಘವೇಂದ್ರ ಮಾತನಾಡಿ, ತರಬೇತಿ ಪಡೆದುಕೊಂಡ ಮೇಲೆ ಅದರ ಉಪಯೋಗ ಅನುಷ್ಠಾನ ಮಾಡಿದಾಗ ಮಾತ್ರ ಶಿಬಿರ ಯಶಸ್ವಿಯಾಗುತ್ತದೆ ಎಂದರು.
ನಾವು ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡಬೇಕು. ಜೊತೆಗೆ ಕೆಲಸದ ಮೇಲೆ ತೃಪ್ತಿ ಇರಬೇಕು, ಬೇರೆಯವರರಿಂದ ನಿಯಂತ್ರಣ ಇರಬಾರದು, ಮಾಡುವ ಕೆಲಸದ ಮೇಲೆ ಜವಾಬ್ದಾರಿ ಇರಬೇಕು. ಜೊತೆಗೆ ಇರುವ ಸೌಲಭ್ಯವನ್ನು ಫಲಾನುಭವಿಗೆ ತಲುಪಿಸಬೇಕು. 25 ರಿಂದ 30 ಯೋಜನೆಗಳನ್ನು ಸಕಾಲದಲ್ಲಿ ತಲುಪಿಸಬೇಕು, ಯೋಜನೆಯ ಮಾಹಿತಿ ನಿಮಗೆ ಸರಿಯಾದ ತಿಳುವಳಿಕೆ ಇರಬೇಕು ಎಂದರು.ನಮ್ಮದು ಯೋಜನೆ ಆಧಾರಿತ ಇಲಾಖೆ ಅಲ್ಲ. ಯೋಜನೆಯ ಜೊತೆಗೆ ವಿವಿಧ ಬಗೆಯ ವಿಕಲಚೇತನ ಸಮಸ್ಯೆಗಳು ಇದ್ದವೇ. ವಿಕಲಚೇತನ ಇಲಾಖೆ ಶೇ. 50ರಷ್ಟು ಸ್ವಯಂ ಸೇವಕರಿಂದ ಅವಲಂಭಿತವಾಗಿದೆ. ಇಲ್ಲಿ ಸ್ವಯಂ ಸೇವಕರ ಕಾರ್ಯ ವೈಖರಿಯನ್ನು ಗೌರವಿಸಬೇಕು ಎಂದು ಅವರು ಹೇಳಿದರು.
ನಿಮ್ಮ ಗ್ರಾಮಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ನಮ್ಮ ಅವಶ್ಯಕತೆ ಎಲ್ಲಿ ಇದೆ ಎಂಬುದನ್ನು ತಿಳಿದು ಬಂದರೆ ನಾವು ಖಂಡಿತವಾಗಿಯೂ ಸೇವೆ ಮಾಡಲು ಸಿದ್ಧ ಎಂದು ಅವರು ತಿಳಿಸಿದರು.
ಅಂಗವಿಕಲ ವ್ಯಕ್ತಿಗಳ ರಾಜ್ಯ ಆಯುಕ್ತ ದಾಸ್‌ಸೂರ್ಯವಂಶಿ ಮಾತನಾಡಿ, ತಾವುಗಳು ಅಪೇಕ್ಷೆ ಇಲ್ಲದೆ ಕೆಲಸ ಮಾಡಬೇಕು. ತಾವುಗಳು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವುದರಿಂದ ನಿಮ್ಮಗಳ ಸೇವೆ ಗಣನೀಯ ಎಂದರು.
ಮಾಜಿ ಅಯುಕ್ತ ಕೆ.ವಿ. ರಾಜಣ್ಣ, ಮಾರ್ಗದರ್ಶಿ ಸಂಸ್ಥೆ ಮುಖ್ಯಸ್ಥೆ ಶಾಂತಲಕ್ಷ್ಮಿ, ಇಲಾಖೆಯ ರಾಜ್ಯ ಸಂಯೋಜಕ ನರಸಿಂಹ ಮೂರ್ತಿ, ಕೇಸಿಯರ್ಸ್ ವರ್ಲ್ಡ್ ವೇರ್ ಸಂಸ್ಥೆಯ ನಟೇಶ್, ಈಶಾನ್ಯ ಫೌಂಡೇಶನ್ ಸ್ವಾತಿ, ಅನುಪ್ ಸಿಂಹ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗೀಯ ಮುಖ್ಯಸ್ಥ ಶಿವರಾಜು, ಮಾಂತೇಶ್, ಪ್ರವೀಣ್ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಯ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಎಂ.ಆರ್. ಡಬ್ಲ್ಯೂ ಮೊದಲಾದವರು ಇದ್ದರು.