2.5 ಲಕ್ಷ ಮತಗಳ ಅಂತರದಿಂದ ಮೃಣಾಲ್‌ ಗೆಲುವು

KannadaprabhaNewsNetwork | Published : May 3, 2024 1:11 AM

ಸಾರಾಂಶ

ಮೃಣಾಲ್ ಗೆಲ್ಲುವುದಾಗಿ ಬೆಳಗಾವಿ ನಗರದ ವಿವಿಧೆಡೆ ಮತಯಾಚನೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ದಿನದಿಂದ ದಿನಕ್ಕೆ ಕಾಂಗ್ರೆಸ್ ಪರ ಜನರ ಒಲವು ಹೆಚ್ಚಾಗುತ್ತಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೃಣಾಲ್‌ ಹೆಬ್ಬಾಳಕರ್ ಕನಿಷ್ಠ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ನಗರದ ವಿವಿಧೆಡೆ ಬುಧವಾರ ಸಂಜೆ ಪ್ರಚಾರ ನಡೆಸಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ 8 ವಿಧಾನ ಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಮುನ್ನಡೆ ಸಿಗಲಿದೆ. ಯುವಕರಿಂದ ಹಿಡಿದು, ಹಿರಿಯರು, ಮಹಿಳೆಯರು ಎಲ್ಲರೂ ಈ ಬಾರಿ ಪಕ್ಷಾತೀತವಾಗಿ ಮೃಣಾಲ್‌ ಹೆಬ್ಬಾಳಕರ ಬೆಂಬಲಿಸಲು ಮುಂದಾಗಿದ್ದಾರೆ ಎಂದರು.ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಪ್ರತಿ ಮನೆಯನ್ನೂ ತಲುಪಿದೆ. ನುಡಿದಂತೆ ನಡೆದಿದ್ದಕ್ಕಾಗಿ ಪಕ್ಷದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದೆ. ಜತೆಗೆ ನಾನು ಗ್ರಾಮೀಣ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನರು ಮೃಣಾಲ್ ಪರ ಒಲವು ತೋರಿಸುತ್ತಿದ್ದಾರೆ. ಯುವಕನಾಗಿರುವ ಮೃಣಾಲ್ ಕ್ಷೇತ್ರಕ್ಕಾಗಿ ಖಂಡಿತ ಕೆಲಸ ಮಾಡಲಿದ್ದಾನೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ ಎಂದು ತಿಳಿಸಿದರು.

ಹಿಂದಿನಿಂದಲೂ ಬೆಳಗಾವಿಗೆ ಬರಬೇಕಿದ್ದ ಅಭಿವೃದ್ಧಿ ಯೋಜನೆಗಳು ಹುಬ್ಬಳ್ಳಿ ಪಾಲಾಗುತ್ತಿರುವ ಕುರಿತು ಬೆಳಗಾವಿ ಜನರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ವಿಪರ್ಯಾಸವೆಂದರೇ ಆ ರೀತಿ ಇಲ್ಲಿಂದ ಎಲ್ಲವನ್ನೂ ಕಿತ್ತುಕೊಂಡು ಹೋಗಲು ಕಾರಣರಾದವರೇ ಇಂದು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅಂತವರನ್ನು ಬೆಂಬಲಿಸಿದರೇ ಬೆಳಗಾವಿಗೆ ಎಂತಹ ತೊಂದರೆ ಬರಲಿದೆ ಎನ್ನುವುದನ್ನು ನಾವೆಲ್ಲ ಯೋಚಿಸಬೇಕಾಗಿದೆ. ಹಾಗಾಗಿ ಸ್ಥಳೀಯ ಅಭ್ಯರ್ಥಿಯಾಗಿರುವ ಮೃಣಾಲ ಹೆಬ್ಬಾಳಕರ ಅವರನ್ನು ಬೆಂಬಲಿಸುವ ಮೂಲಕ ಬೆಳಗಾವಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕಾಗಿದೆ ಎಂದು ಮನವಿ ಮಾಡಿದರು.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಆಜಮ್ ನಗರದಲ್ಲಿ‌ ನಡೆದ ಸಭೆಯಲ್ಲಿ ಶಾಸಕ ಆಸೀಫ್ ಸೇಠ್, ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲ್ಪಾಡ್, ಸ್ಥಳೀಯ ನಿವಾಸಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನಂತರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾಗ್ಯನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಜೆ.ಪ್ರದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪರಶುರಾಮ ಡಾಗೆ, ಚಂದ್ರಹಾಸ ಅಣವೇಕರ್, ಕಿರಣ್ ಪಾಟೀಲ್, ವಿಠಲ್ ಪಾವಸ್ಕರ್,‌ ಶೀತಲ್ ರಾಮ್ ಶೆಟ್ಟಿ ಸೇರಿದಂತೆ ‌ಹಲವರು ಉಪಸ್ಥಿತರಿದ್ದರು. ಇದಾದ ನಂತರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅನಗೊಳದ ಕುರುಬರ ಗಲ್ಲಿಯಲ್ಲಿ‌ ಪ್ರಚಾರ ಸಭೆ ನಡೆಯಿತು. ಈ ವೇಳೆ ಎಂ.ಜೆ.ಪ್ರದೀಪ್ ಅಜೀಜ್‌ ಮುಮೇನ್, ಶಬ್ಬಿರ್ ಶೇಖ್, ಸಾಧಿಕ್ ತಿಗಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article