ಕನ್ನಡಪ್ರಭ ವಾರ್ತ ಮೈಸೂರುರಾಷ್ಟ್ರಕವಿ ಕುವೆಂಪು ಅವರ ಪಂಚಶೀಲ ತತ್ವಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿಯನ್ನು ಎಲ್ಲ ಕಾಲಕ್ಕೂ ನಮ್ಮದಾಗಿಸಿಕೊಳ್ಳಬೇಕು ಎಂದು ಕವಿ ಕೆ.ಪಿ. ಮೃತ್ಯುಂಜಯ ತಿಳಿಸಿದರು.ಮಂಡ್ಯದ ಎಂ.ಆರ್.ಎಂ. ಪ್ರಕಾಶನವು ಟಿ. ನರಸೀಪುರ ತಾಲೂಕು ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದಲ್ಲಿ ಆಯೋಜಿಸಿದ್ದ ಪ್ರಥಮ ವಾರ್ಷಿಕೋತ್ಸವ ಅವಧೂತ ಮಾದಪ್ಪ ಹಾಗೂ ದಿ ಕಾಪಿ ಕೃತಿಗಳ ಬಿಡುಗಡೆ, ರಾಷ್ಟ್ರೀಯ ಯುವ ದಿನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂ.ಆರ್.ಎಂ. ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಕುವೆಂಪು ಹಾಗೂ ಡಾ. ರಾಜ್ ಕುಮಾರ್‌ನಾಡು ಕಂಡ ಶೇಷ್ಠ ಸಾಂಸ್ಕೃತಿಕ ನಾಯಕರು. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆ, ಜಾತೀಯತೆ ಹಾಗೂ ಬಡತನವನ್ನು ಆಮೂಲಾಗ್ರವಾಗಿ ನಿರ್ಮೂಲನೆ ಮಾಡಬೇಕು ಎಂದು ಶ್ರಮಿಸಿದ ದೊಡ್ಡ ಬಂಡುಕೋರ. ಧರ್ಮ ಸಹಿಷ್ಣುತೆ ಸಾರಿದ ಶ್ರೇಷ್ಠ ಸಂತನನ್ನು ಹಿಂದೂತ್ವವಾದಕ್ಕೆ ಬಳಸಬಾರದು. ಗೌತಮ ಬುದ್ಧ, ಸ್ವಾಮಿ ವಿವೇಕಾನಂದರಿಗೆ ಆದರ್ಶವಾದರೆ ವಿವೇಕಾನಂದರು ಕುವೆಂಪುಗೆ ಆದರ್ಶ ಎಂದು ಅವರು ತಿಳಿಸಿದರು.ಎಂ.ಆರ್.ಎಂ ಪ್ರಕಾಶನ ಪ್ರಶಸ್ತಿ ಸ್ವೀಕರಿಸಿದ ಕವಿತಾ ಪ್ರಕಾಶನದ ಗಣೇಶ ಅಮೀನಗಡ ಮಾತನಾಡಿ, ದೇವರು ರುಜು ಮಾಡಿದನು; ರಸವಶನಾಗುತ ಕವಿ ಅದ ನೋಡಿದನು ಎಂದು ಕುವೆಂಪು ಕವಿತೆಗಳ ಮಹತ್ವವನ್ನು ಸಾರಿ ಪ್ರತಿನಿತ್ಯ ಪ್ರತಿಯೊಬ್ಬರೂ ಕುವೆಂಪು ಸಾಹಿತ್ಯದ ಎರಡು ಸಾಲಗಳನ್ನಾದರೂ ಓದಬೇಕು. ಯಾಚೇನಹಳ್ಳಿಯಲ್ಲಿ ಕುವೆಂಪು ಸ್ಮಾರಕ ನಿರ್ಮಿಸುವ ಮೂಲಕ ಅವರ ವಿಚಾರಗಳನ್ನು ಹೂತಿಲ್ಲ ಬಿತ್ತಿದ್ದಾರೆ ಎಂದರು. ʻಅವಧೂತ ಮಾದಪ್ಪʼ ಮತ್ತು ʻದಿ ಕಾಪಿʼ ಕೃತಿಗಳನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನಮಠದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ನಮಗೆ ಇಂದು ಮತ್ತೊಂದು ಧರ್ಮದ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿರುವುದು ಮಾನವೀಯ ಧರ್ಮ. ವಸುಧೈವ ಕುಟುಂಬಕಂ ಎಂಬುದು ಎಲ್ಲಾ ಧರ್ಮಗಳ ಸಾರ. ಸರ್ವೇಜನಾ ಸುಖಿನೋ ಭವಂತು ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಧರ್ಮಗಳಲ್ಲಿರುವ ಅಂಕುಡೊಂಕನ್ನು ಮೊದಲು ತೊಡೆದು ಹಾಕೋಣ. ಮೊದಲು ನಾವು ಪರಿವರ್ತನೆ ಆಗೋಣ. ಆಮೇಲೆ ಸಮಾಜವನ್ನು ಬದಲಾಯಿಸೋಣ ಎಂದರು.ಅವಧೂತ ಮಾದಪ್ಪ ಕೃತಿ ಕರ್ತೃ ಹಾಗೂ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಅಧ್ಯಕ್ಷ ನಾದಾನಂದನಾಥ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ವಿಶ್ವ ಮಾನವ ಧರ್ಮ ಒಂದು ವಿಶಿಷ್ಟ ಕಲ್ಪನೆ. ಅಲ್ಲಿ ಯಾವುದೇ ಭೌತಿಕ ರಚನೆಗಳು, ಆಚರಣೆಗಳು ಇಲ್ಲ. ಕುವೆಂಪು ಅವರ ಪಂಚಶೀಲ ತತ್ವಗಳನ್ನು ಆಧರಿಸಿದ ಆಂತರೀಕ ಉದ್ದೀಪನವೇ ಹೊರತು ಬಾಹ್ಯ ಆಚರಣೆಯಲ್ಲ. ಕುವೆಂಪು ಪ್ರೇರಿತ ವಿಶ್ವಮಾನವ ಧರ್ಮ ಜಂಗಮ ಹೊರತು ಸ್ಥಾವರವಲ್ಲ ಎಂದು ಸ್ಪಷ್ಟಪಡಿಸಿದರು. ಯಾಚೇನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ಭಾರತಕ್ಕೆ, ಯುವಶಕ್ತಿಗೆ ಪ್ರೇರಣೆಯಾಗಿರುವ ಸ್ವಾಮಿ ವಿವೇಕಾನಂದರು ತಪಸ್ಸು ಮಾಡಿದ ಕನ್ಯಾಕುಮಾರಿ ವ್ಯಾಪಾರಿ ಕೇಂದ್ರವಾಗಿದ್ದು ಹಿಂದಿನಂತಿಲ್ಲ. ಅಲ್ಲಿ ಹಿಂದೆ ಆಗಿದ್ದ ರೋಮಾಂಚನ ಇತ್ತೀಚೆಗೆ ತೆರಳಿದ್ದಾಗ ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. 10 ಸಾವಿರ ರು. ಪುರಸ್ಕಾರಎಂ.ಆರ್.ಎಂ. ಪ್ರಶಸ್ತಿ ಸ್ವೀಕರಿಸಿದ ಇಬ್ಬರೂ ಪ್ರಶಸ್ತಿ ಪುರಸ್ಕೃತರಿಗೂ ತಲಾ 10 ಸಾವಿರ ರೂ. ನಗದು ಪುರಸ್ಕಾರ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಈ ವೇಳೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯಾಚೇನಹಳ್ಳಿಯ ಚನ್ನಾಜಮ್ಮ ಅವರನ್ನು ಸನ್ಮಾನಿಸಲಾಯಿತು.ಕಥೆಗಾರ ಅದೀಬ್ ಅಖರ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿ, ಮಹಾಭಾರತದ ದ್ರೌಪದಿ ವಸ್ತ್ರಾಪಹರಣ ಪ್ರಸಂಗವನ್ನು ವಿವರಿಸಿ ಶ್ರೀಕೃಷ್ಣನು ದ್ರೌಪದಿಗೆ ನಾವು ಯಾರಿಗಾದರೂ ಸಹಾಯ ಮಾಡಿದರೆ ದೇವರು ನಮಗೆ ಸಹಾಯ ಮಾಡಲು ಯಾರ ರೂಪದಲ್ಲಾದರೂ ಬರುತ್ತಾನೆ ಎಂಬ ಶ್ರೀ ಕೃಷ್ಣನ ಸಂದೇಶವನ್ನು ಸ್ಮರಿಸಿದರು.ದ್ವಿತೀಯ ಪಿಯು ವಿದ್ಯಾರ್ಥಿನಿ ಎಸ್.ಪಿ. ನಿಧಿ ಹಾಗೂ ಅನ್ಸಿತಾ ಮೆನನ್ ಅವರ ʻದಿ ಕಾಪಿʼ ಕೃತಿ ಕುರಿತು ಪ್ರಕಾಶಕ ಹಾಗೂ ಮಂಡ್ಯ ವಿವಿಯ ಕನ್ನಡ ಅಧ್ಯಾಪಕ ಉಮೇಶ್ ದಡಮಹಳ್ಳಿ ಮಾತನಾಡಿದರು. ಎಂಆರ್‌ಎಂ ಪ್ರಕಾಶನದ ಪ್ರಕಾಶಕ ಮಂಜು ಮುತ್ತೇಗೆರೆ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಹಾಗೂ ಪತ್ರಕರ್ತ ಚಂದ್ರಶೇಖರ ದ.ಕೋ. ಹಳ್ಳಿ ಆಶಯ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಕವಯಿತ್ರಿ ಎಚ್.ಆರ್. ಕನ್ನಿಕಾ, ಬನ್ನೂರಿನ ಆಕಾಶ್ ಸ್ಟೀಲ್ಸ್ ಅಂಡ್ ಸಿಮೆಂಟ್ ಮಾಲೀಕ ಜಿ. ಸುರೇಶ್, ಕವಿ ಹಾಗೂ ಶಿಕ್ಷಕ ಕೊತ್ತತ್ತಿ ರಾಜು ಹಾಗೂ ನೇರಲಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ನೇರಲಕೆರೆ ಲೋಕೇಶ್ ಭಾಗವಹಿಸಿದ್ದರು. ಎಸ್‌ಎನ್‌ಎಸ್‌ಎಕ್ಸಲೆನ್ಸ್‌ಪಿಯು ಕಾಲೇಜಿನ ಮಂಜೇಶ್‌ಹಾಗೂ ಆಡಳಿತಾಧಿಕಾರಿ ಅವಿನಾಶ್, ಲೇಖಕಿ ನಿಧಿ ಅವರ ಪೋಷಕರಾದ ಪ್ರವೀಣ್‌ಕುಮಾರ್ ಹಾಗೂ ಪೂರ್ಣಿಮಾ ಇದ್ದರು.