ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸದ ಎಂಎಸ್ಸಿಗಳು

KannadaprabhaNewsNetwork | Published : Jan 25, 2024 2:06 AM

ಸಾರಾಂಶ

ಚನ್ನಪಟ್ಟಣ: ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ, ಅವರ ಹಿತರಕ್ಷಣೆ ಕಾಯುವ ಇಚ್ಛಾಶಕ್ತಿ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರಿಗೆ ಇಲ್ಲವಾಗಿದೆ. ಬಹುತೇಕ ಎಂಎಲ್‌ಸಿಗಳು ನಿಷ್ಕ್ರಿಯರಾಗಿದ್ದು, ಅವರ ಕ್ಷೇತ್ರದಿಂದ ಯಾರು ಆಯ್ಕೆಯಾಗಿದ್ದಾರೆಂಬುದೇ ಜನರಿಗೆ ತಿಳಿಯದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ವಕೀಲ ಹಾಗೂ ವಿಧಾನ ಪರಿಷತ್ ಬೆಂಗಳೂರು ಪದವೀಧರ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಉದಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣ: ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ, ಅವರ ಹಿತರಕ್ಷಣೆ ಕಾಯುವ ಇಚ್ಛಾಶಕ್ತಿ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರಿಗೆ ಇಲ್ಲವಾಗಿದೆ. ಬಹುತೇಕ ಎಂಎಲ್‌ಸಿಗಳು ನಿಷ್ಕ್ರಿಯರಾಗಿದ್ದು, ಅವರ ಕ್ಷೇತ್ರದಿಂದ ಯಾರು ಆಯ್ಕೆಯಾಗಿದ್ದಾರೆಂಬುದೇ ಜನರಿಗೆ ತಿಳಿಯದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ವಕೀಲ ಹಾಗೂ ವಿಧಾನ ಪರಿಷತ್ ಬೆಂಗಳೂರು ಪದವೀಧರ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಉದಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರರ ಕ್ಷೇತ್ರದಿಂದ ಆಯ್ಕೆಯಾದವರು, ವಿಧಾನ ಪರಿಷತ್‌ನಲ್ಲಿ ಪದವೀಧರರ ಪರ ಧ್ವನಿ ಎತ್ತಬೇಕು. ಆದರೆ, ಅವರಿಗೆ ಆ ಕಾಳಜಿಯೇ ಇಲ್ಲ. ಪ್ರಸ್ತುತ ಸರ್ಕಾರದ ೪೩ ಇಲಾಖೆಗಳಲ್ಲಿ ಸುಮಾರು ೨.೫೮ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಸಿಬ್ಬಂದಿ ಕೊರತೆಯಿಂದ ಎಲ್ಲ ಇಲಾಖೆಗಳ ಕಾರ್ಯಕ್ಷಮತೆ ಕುಸಿದಿದೆ. ರಾಜ್ಯದಲ್ಲಿ ಸುಮಾರು ೨.೮೦ ಲಕ್ಷ ಮಂದಿ ಸರ್ಕಾರಿ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಉದ್ಯೋಗಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದು, ಅವರಿಗೆ ಇನ್ನು ಉದ್ಯೋಗ ಸಿಗುತ್ತಿಲ್ಲ. ಈ ಸಂಖ್ಯೆ ಬೆಳೆಯುತ್ತಲೇ ಇದ್ದು, ನೇಮಕಾತಿ ನಡೆಯದ ಕಾರಣ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳಗೊಂಡಿದೆ ಎಂದರು.

ನೇಮಕಾತಿಯಲ್ಲಿ ಭ್ರಷ್ಟಾಚಾರ:

ಸರ್ಕಾರದ ನೇಮಕಾತಿಯಲ್ಲಿ ಭ್ರಷ್ಟಾಚಾರ, ಹಗರಣಗಳು ಪ್ರತಿವರ್ಷ ಹೆಚ್ಚುತ್ತಲೇ ಇದೆ. ನೇಮಕಾತಿ ವ್ಯವಸ್ಥೆಯಲ್ಲಿನ ಲೋಪದೋಷದಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ. ಹಣ, ಪ್ರಭಾವವುಳ್ಳವರು ಸರ್ಕಾರಿ ಕೆಲಸಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದರೆ, ಪ್ರತಿಭಾವಂತರು ನ್ಯಾಯಾಲಯಗಳಿಗೆ ಅಲೆದಾಡುವಂತಾಗಿದೆ ಎಂದು ಕಿಡಿಕಾರಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಅಕ್ರಮ ಆರೋಪಗಳು ಕೇಳಿಬರುತ್ತಿದ್ದು, ಬಹುತೇಕ ನೇಮಕಾತಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಪಡುತ್ತಿರುವುದರಿಂದ, ಪರೀಕ್ಷೆ ರದ್ದು, ಮರುಪರೀಕ್ಷೆ ನಡೆಯುತ್ತಿದೆ. ಲಕ್ಷಾಂತರ ಪದವೀಧರರು ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕರು, ಶಿಕ್ಷಕರಿಗೆ ನೀಡುವ ಸಂಬಳ ಜೈಲಿನಲ್ಲಿ ಕೈದಿಗಳಿಗೆ ನೀಡುವ ವೇತನಕ್ಕಿಂತ ಕಡಿಮೆಯಾಗಿದೆ. ಪದವೀಧರರು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಅವರಿಗೆ ನ್ಯಾಯ ಕೊಡಿಸಬೇಕಾದ ವಿಧಾನ ಪರಿಷತ್ ಸದಸ್ಯರು ತಮ್ಮ ಕೆಲಸ ಮರೆತಿದ್ದಾರೆ. ಕೆಲವರು ಆಯ್ಕೆಯಾದ ನಂತರ ಬರೀ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಪದವೀಧರರ ಸಮಸ್ಯೆ ಪರಿಹರಿಸುವುದು ಈ ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಯದೆಂಬ ಅರಿವೇ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಬಲಕ್ಕೆ ಮನವಿ:

ಪದವೀಧರರ ಸಮಸ್ಯೆಗಳನ್ನು ಅರಿತು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾನು ಸಾಕಷ್ಟು ಯೋಜನೆ ಹಾಕಿಕೊಂಡಿದ್ದೇನೆ. ಯಾವುದಾದರೂ ರಾಜಕೀಯ ಪಕ್ಷ ಬೆಂಬಲಿಸಿದರೆ ಸರಿ, ಇಲ್ಲದಿದ್ದರೇ ಸ್ವತಂತ್ರವಾಗಿಯೇ ಸ್ಪರ್ಧಿಸಲು ತಯಾರಿ ನಡೆಸಿದ್ದೇನೆ. ಈಗಾಗಲೇ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬಹುತೇಕ ಪದವೀಧರರನ್ನು ಭೇಟಿಯಾಗಿದ್ದು, ನನ್ನನು ಬೆಂಬಲಿಸಿ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಯು.ಮಂಜುನಾಥ್, ನೀರಕಲ್ಲು ಶಿವಕುಮಾರ್ ಇತರರಿದ್ದರು. ಪೊಟೋ೨೪ಸಿಪಿಟಿ೧: ಚನ್ನಪಟ್ಟಣದಲ್ಲಿ ವಕೀಲ ಹಾಗೂ ವಿಧಾನ ಪರಿಷತ್ ಬೆಂಗಳೂರು ಪದವೀಧರ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಉದಯ್ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Share this article